32 ಗುಂಟೆ ಜಮೀನಿಗಾಗಿ ಮಾಸ್ಟರ್‌ ಪ್ಲಾನ್‌: ಬದುಕಿರುವ ವೃದ್ಧೆ ಹೆಸರಿನಲ್ಲಿ ಮರಣ ಪತ್ರ

ಹಾಸನ, ಮೇ 25: ಆಸ್ತಿ ಕಬಳಿಸಲು ಹತ್ತಿರದ ಸಂಬಂಧಿಕರೇ ಬದುಕಿರುವ ವೃದ್ಧೆ ಹೆಸರಿನಲ್ಲಿ ಮರಣ ಪತ್ರ ಪಡೆದಿರುವ ಘಟನೆ ಹಾಸನದಲ್ಲಿ ನಡೆದಿದಿದ್ದು, ಇತ್ತೀಚಿಗೆ ಪ್ರಕರಣ ಬೆಳಕಿಗೆ ಬಂದಿದೆ.


ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬ ಪತ್ನಿ ಪಾರ್ವತಮ್ಮ ಹೆಸರಿನಲ್ಲಿ ಬೇಲೂರು ತಹಶೀಲ್ದಾರ್‌ ಕಚೇರಿಯಿಂದ ಮರಣ ಪ್ರಮಾಣ ಪತ್ರ ನೀಡಲಾಗಿದೆ.

ಪಾರ್ವತಮ್ಮ ಅವರ ಬಳಿ ಇರುವ 32 ಗುಂಟೆ ಜಮೀನನ್ನು ಕಬಳಿಸುವ ಉದ್ದೇಶದಿಂದ ಪಾರ್ವತಮ್ಮ ಅವರ ಹತ್ತಿರದ ಸಂಬಂಧಿಕರೊಬ್ಬರ ಮಗ, ಬದುಕಿರುವಾಗಲೇ ಮರಣ ಪತ್ರ ಪಡೆಯುವ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪಾರ್ವತಮ್ಮ ತಮ್ಮ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿ ವಿಭಾಗ ಮಾಡಿದ್ದರು. ತಮ್ಮ ಜೀವನಾಂಶಕ್ಕೆ 32 ಗುಂಟೆ ಜಮೀನನ್ನು ಇಟ್ಟುಕೊಂಡಿದ್ದರು. ಅಲ್ಲದೇ ಪಾರ್ವತಮ್ಮ ಜೀವನ ನಡೆಸಲು ಬೇರೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದರು.

ಹೀಗಾಗಿ ಅವರ ಜಮೀನು ಕಬಳಿಸಲು ಹತ್ತಿರದ ಸಂಬಂಧಿಕರೊಬ್ಬರ ಮಗ 2020 ಏಪ್ರಿಲ್ 10 ರಂದು ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಏಪ್ರಿಲ್ 20 ನೋಂದಣಿ ಮಾಡಿಸಿದ್ದಾರೆ. ಅದರಂತೆ ಬೇಲೂರು ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಅಕ್ಟೋಬರ್ 14 ರಂದು ಪಾರ್ವತಮ್ಮ ಹೆಸರಿನಲ್ಲಿ ಮರಣ ದೃಢೀಕರಣ ಪತ್ರವನ್ನ ನೀಡಿದ್ದಾರೆ

ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಮರಣ ಪ್ರಮಾಣ ಪತ್ರದ ಬಗ್ಗೆ ಪಾರ್ವತಮ್ಮ ಕುಟುಂಬದವರಿಗೆ ಗೊತ್ತಾಗಿದ್ದು, ಬೇಲೂರು ತಹಸಿಲ್ದಾರ್ ಕಚೇರಿಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪಾರ್ವತಮ್ಮ ಪುತ್ರ ಮಲ್ಲೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Post a Comment

Previous Post Next Post