ಕೊಣನೂರು: ಶರವೇಗದಲ್ಲಿ ಸಮುದಾಯಕ್ಕೆ ಹಬ್ಬುತ್ತಿರುವ ಮಹಾಮಾರಿ ಕರೊನಾ ಸೋಂಕು ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು, ಮುಖ್ಯವಾಗಿ ಕರೊನಾ ವಾರಿಯರ್ಸ್ ಗಳು ಮತ್ತಷ್ಟು ಜಾಗೃತರಾಗಬೇಕು ಎಂದು ಆರ್ಯವೈಶ್ಯ ಕೋಆಪರೇಟೀವ್ ಸೊಸೈಟಿ ಅಧ್ಯಕ್ಷ ಬಿ.ಎಸ್. ಸುಬ್ರಹ್ಮಣ್ಯ ಮನವಿ ಮಾಡಿದರು.
ಇಲ್ಲಿನ ಆರ್ಯವೈಶ್ಯ ಕೋಆಪರೇಟೀವ್ ಸೊಸೈಟಿ ಆವರಣದಲ್ಲಿ ಸಹಕಾರ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತೆಯರುಗಳಿಗೆ ನೀಡಿದ್ದ ಪ್ರೋತ್ಸಾಹಧನದ ಚೆಕ್ ನೀಡಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಸೋಂಕು ಇದೀಗ ಸಮುದಾಯಕ್ಕೆ ಹಬ್ಬುತ್ತಿದ್ದು ಅಮಾಯಕರ ಬದುಕನ್ನು ಕತ್ತಲೆಯ ಕೂಪಕ್ಕೆ ದೂಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ, ಹಾಗಾಗಿ ಕರೊನಾ ವಾರಿಯರ್ಸ್ ಗಳು ಹೆಚ್ಚು ಜಾಗೃತರಾಗಿ ಸಮುದಾಯಕ್ಕೆ ಸೋಂಕು ತಗುಲದಂತೆ ನಿಗಾ ವಹಿಸಿ ಕರ್ತವ್ಯ ನಿರ್ವಹಿಸುವುದು ಅತ್ಯವಶ್ಯಕ. ಎಲ್ಲಕ್ಕಿಂತ ಮುಖ್ಯವಾಗಿ ಮದ್ದಿಲ್ಲದ ಕರೊನಾ ಕಾಯಿಲೆಗೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.
ಮುಖಂಡ ಕೆ. ಅಮರ್ ನಾಥ್ ಶೆಟ್ಟಿ ಮಾತನಾಡಿ ಕೋವಿಡ್ - 19 ಯೋಧರಾಗಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಕರೊನಾ ಸೇನಾನಿಗಳು ಹೊರಗಿನಿಂದ ಬರುವವರ ಬಗ್ಗೆಯೂ ಸದಾ ನಿಗಾ ಇಡಬೇಕು, ಸಾರ್ವಜನಿಕರೂ ಹೆಚ್ಚು ಸಹಕಾರ ನೀಡಬೇಕು, ಇದರಿಂದ ಸೋಂಕು ತಕ್ಕಮಟ್ಟಿಗೆ ಹಳ್ಳಿಗಳಿಗೆ ವ್ಯಾಪಿಸುವುದನ್ನು ತಡೆಯಲು ನೆರವಾಗಲಿದೆ. ಕುಟುಂಬದವರ ರಕ್ಷಣೆಯನ್ನು ಲೆಕ್ಕಿಸದೆ ಕರೊನಾ ವಿರುದ್ದ ಹೋರಾಡುತ್ತಿರುವ ವಾರಿಯರ್ಸ್ ಗಳಿಗೆ ಇಂದು ಪ್ರೋತ್ಸಾಹಧನದ ಚೆಕ್ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ 10 ಕ್ಕೂ ಹೆಚ್ಚು ಆಶಾಕಾರ್ಯಕರ್ತೆಯರುಗಳಿಗೆ ತಲಾ ಮೂರು ಸಾವಿರ ರೂಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಕೋಆಪರೇಟೀವ್ ಸೊಸೈಟಿಯ ಕಾರ್ಯದರ್ಶಿ ಎಸ್. ಬಾಲಸುಬ್ರಹ್ಮಣ್ಯಂ, ಅಧ್ಯಕ್ಷ ಬಿ.ಎಸ್. ಸುಬ್ರಹ್ಮಣ್ಯ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರುಗಳಾದ ತುಳಸೀರಾಮ್, ಸುಬ್ರಹಣ್ಯಶೆಟ್ಟಿ, ಸತೀಶ್, ಶೋಭ, ಶರ್ಮಿಳಾ, ಮಂಜುನಾಥ್, ಉದಯ್‍ಕುಮಾರ್, ರಂಗನಾಥ್, ಶ್ರೀನಿವಾಸಮೂರ್ತಿ, ನೂತನ್‍ಕುಮಾರ್, ರವಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Tags
ಅರಕಲಗೂಡು