ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ: ಜಿಲ್ಲಾಧಿಕಾರಿ ಆರ್. ಗಿರೀಶ್


ಹಾಸನ,ಜು.6:- ಬಾಬು ಜಗಜೀವನ ರಾಮ್ ಅವರು ದೇಶದಲ್ಲಿನ ಜಾತಿ ಪದ್ದತಿಯ ವಿರುದ್ಧ ಹಾಗೂ ದಮನಿತರ ಏಳಿಗೆಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ನಾವೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
 ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಏರ್ಪಡಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯ ಸ್ಮರಣೆ ಹಾಗೂ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ, ಸಮಾಜ ಸುಧಾರಕರಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ದೇಶದಲ್ಲಿನ ಅಸ್ಪ್ರಶ್ಯತೆಯನ್ನು ಹೋಗಲಾಡಿಸಿ ಸಮಾನತೆಯನ್ನು ಸಾರಿದರು ಎಂದರು.
 ಶ್ರೇಷ್ಠ ವಚನಕಾರರೆಂದು ಹಾಗೂ ಸಮಾಜ ಸುಧಾರಕರೆಂದು ಪ್ರಸಿದ್ಧಿಯಾದ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಕಾಲ ಘಟ್ಟದವರು ಇವರು ಸಮಾಜದಲ್ಲಿದ್ದ ಜಾತಿ ಪದ್ದತಿಯನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಹಕ್ಕನ್ನು ಕಲ್ಪಿಸಿದ ಮಹಾನ್ ವ್ಯಕ್ತಿ ಎಂದು ಜಿಲ್ಲಾಧಿಕಾರಿವರು ತಿಳಿಸಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಬಾಬು ಜಗಜೀವನ ರಾಮ್ ಅವರು 1908 ರಲ್ಲಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದರು. ಇವರು ಬಾಲ್ಯದಲ್ಲಿದ್ದಾಗ ಶಾಲೆಯಲ್ಲಿದ್ದ ಜಾತಿ ಪದ್ದತಿಯನ್ನು ವಿರೋಧಿಸಿ ಶೋಷಣೆಗೊಳಗಾದವರ ಏಳಿಗೆಗಾಗಿ ಮತ್ತು ಸಮಾನತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.
 ಮಾದಿಗ ಮಹಾಸಭಾ ವೇದಿಕೆಯ ಅಧ್ಯಕ್ಷರಾದ ಹೆಚ್.ಪಿ. ಶಂಕರ್ ರಾಜ್ ಅವರು ಮಾತನಾಡಿ ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರೊಂದಿಗೆ ಹೋರಾಡಿದ ಮಹಾನ್ ವ್ಯಕ್ತಿ ಹಾಗೂ ಸಮಾಜದಲ್ಲಿದ್ದ ಅಸ್ಪ್ರಶ್ಯತೆಯನ್ನು ಹೋಗಲಾಡಿಸಿ ಸಮಾನತೆಯನ್ನು ಸಾರಿದವರು ಎಂದರು.
 ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಎನ್.ಡಿ. ಸಾಲಿ ಅವರು ಮಾತನಾಡಿ ಭಾರತ ಸಂವಿಧಾನವನ್ನು ಡಾ|| ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ್ದಾರೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಶ್ರಮ ಸ್ಮರಣೀಯವಾದದ್ದು ಎಂದರು.  
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ್, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಡಾ|| ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಶಿವಮ್ಮ ಸಾಲಿ, ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಟಿ. ಕುಮಾರಸ್ವಾಮಿ ದಲಿತ ಮುಖಂಡರಾದ ಸಂದೇಶ್, ವಿಜಯ್ ಕುಮಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Post a Comment

Previous Post Next Post