ಕನ್ನಡ ನಾಡಿನ ಅತ್ಯಂತ ಪ್ರಾಚೀನ ಮತ್ತು ಕನ್ನಡದ ಮೊತ್ತ ಮೊದಲ ಶಾಸನವಿರುವ ಹಲ್ಮಿಡಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ.ವಿಶ್ವವಿಖ್ಯಾತ ಬೇಲೂರಿನಿಂದ ಕೇವಲ ೧೩ ಕಿ.ಮೀ ಅಂತರದಲ್ಲಿರುವ ಹಲ್ಮಿಡಿ ಅದಕ್ಕೆ ತಕ್ಕ ಸ್ಥಾನಮಾನಗಳು ಸಿಗದೇ ಹಿಂದುಳಿದಿರುವುದು ವಿಪರ್ಯಾಸ. ಕರ್ನಾಟಕ ಸರ್ಕಾರದ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷವೂ ಸರ್ಕಾರಿ ಶಾಲೆಯ ಮಕ್ಕಳನ್ನು ಬೇಲೂರು ಮತ್ತು ಹಳೇಬೀಡಿಗೆ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ಬೇಲೂರಿನಿಂದ ಕೇವಲ ೧೩. ಕಿ. ಮೀ. ದೂರದ ಹಲ್ಮಿಡಿಗೆ ಶಾಲಾ ಮಕ್ಕಳನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಿ ಅದರ ಪರಿಚಯ ಮಾಡದೇ ಇರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಮಾನ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಶಿಕ್ಷಣ ಇಲಾಖೆ ಕೈ ಜೋಡಿಸಿ ಕಡ್ಡಾಯವಾಗಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಬೇಲೂರು ಹಳೇಬೀಡಿನ ಜೊತೆಗೆ ಹಲ್ಮಿಡಿಯನ್ನೂ ಸೇರ್ಪಡಿಸಿ ನಮ್ಮ ಮುಂದಿನ ತಲೆಮಾರಿಗೆ ಕನ್ನಡದ ಇತಿಹಾಸವನ್ನು ಪರಿಚಯಿಸಬೇಕಾಗಿ ಕೋರಿ "ವಂದೇ ಮಾತರಂ" ರಾಷ್ಟ್ರೀಯ ಜನಪರ ಸಂಘಟನೆಯ ವತಿಯಿಂದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
"ಹಾಸನ ಜಿಲ್ಲೆಯ, ಬೇಲೂರು ತಾಲೂಕಿನಲ್ಲಿರುವ ಪುಟ್ಟ ಹಳ್ಳಿ ಹಲ್ಮಿಡಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕ್ರಿ.ಶ.೪೫೦ರಲ್ಲಿ ಕದಂಬರು ಬರೆಸಿದ ಶಾಸನ ಕನ್ನಡದ ಮೊತ್ತ ಮೊದಲ ಶಾಸನದ ಮಹತ್ವವನ್ನು ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗನೂ ತಿಳಿದಿರಬೇಕಾದದ್ದು ಅತ್ಯಂತ ಅವಶ್ಯಕ", ಎಂದು "ವಂದೇ ಮಾತರಂ" ರಾಷ್ಟ್ರೀಯ ಜನಪರ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಧರ್ಮರಾಜ ಕಡಗ ಅಭಿಪ್ರಾಯ ಪಟ್ಟರು
Tags
ಹಾಸನ