ಪ್ರತಿ ವರ್ಷ ಆಶ್ವಯುಜ ಮಾಸ ಸೆಪ್ಟಂಬರ್ ಕೊನೆ ಅಥವಾ ಅಕ್ಟೋಬರ್ ಮಧ್ಯೆ ಚಳಿಗಾಲದ ಆರಂಭದಲ್ಲಿ ಬರುವ ಹಬ್ಬವೆಂದರೆ ನವರಾತ್ರಿ ಇದರ ಸರಿಯಾದ ರೂಪ ನವರಾತ್ರ ಅಥವಾ "ದಸರಾ" ಈ ಹಬ್ಬವನ್ನು ಶರನ್ನಾವರಾತ್ರಿ ಎಂದೂ ಕರೆಯುತ್ತಾರೆ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಇದೂ ಒಂದು. ಈ ಹಬ್ಬವು ದುರ್ಗಾದೇವಿಯ ಆರಾಧನೆಗೆ ಮೀಸಲಾಗಿದ್ದು ; ದುರ್ಗಾದೇವಿಯು ಒಂಬತ್ತು ಅವತಾರಗಳಲ್ಲಿ ಅವತರಿಸಿ ದುಷ್ಟ ಶಕ್ತಿಯನ್ನು ಸಂಹಾರಮಾಡಿ ಶಿಷ್ಟರನ್ನು ರಕ್ಷಿಸುವಳೆಂದು ಜನರಲ್ಲಿ ಬಲವಾದ ನಂಬಿಕೆ. ಅದರ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆಂದು ಅತ್ಯಂತ ಪವಿತ್ರವಾದ ಈ ಹಬ್ಬವನ್ನು ಕರ್ನಾಟಕದಲ್ಲಿ ನಾಡಹಬ್ಬದ ಉತ್ಸವವಾಗಿ ಮನೆ ಮನೆಗಳಲ್ಲೂ ಧಾರ್ಮಿಕ ವ್ರತದ ರೂಪವಾಗಿ ತಲತಲಾಂತರದಿಂದಲೂ ಆಚರಿಸುತ್ತಿರುವುದು ಕಾಣಬಹುದು. ದೇಶಾದ್ಯಂತ ಜನರು ವಿಭಿನ್ನ ಧಾರ್ಮಿಕ ವಿಧಿ ವಿಧಾನಗಳಲ್ಲಿ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ವಿಭಿನ್ನ ಬಣ್ಣ, ಶಕ್ತಿ, ಅಲಂಕಾರಗಳಲ್ಲಿ ಕಂಡು ನೈವೇದ್ಯ ಸಮರ್ಪಿಸುವ ಮೂಲಕ ಆರಾಧನೆ ಮಾಡುತ್ತಾ ಭಕ್ತಿ ಪರವಶರಾಗುತ್ತಾರೆ.
ನವರಾತ್ರಿಯ ಹಬ್ಬಕ್ಕೆ ಮೆರುಗು ತಂದುಕೊಡುವುದು ಗೊಂಬೆಗಳ ಸಾಲು...!!
ನವ ವಿಧದಲ್ಲಿ ನಡೆಯುವ ದೇವಿ ಆರಾಧನೆಯ ಜತೆಗೆ ಮನೆ ಮಂದಿಯೆಲ್ಲಾ ವಿಶೇಷವಾಗಿ ನವರಾತ್ರಿ ಹಬ್ಬದಲ್ಲಿ ಗೊಂಬೆಗಳನ್ನು ಜೋಡಿಸಿ ಬಂಧು ಬಳಗದವರನ್ನು ಆಹ್ವಾನಿಸಿ ಸಂಭ್ರಮಿಸುತ್ತಾರೆ. ಸಾಮಾನ್ಯವಾಗಿ ಒಂಬತ್ತು ದಿನದ ನವ ರಾತ್ರಿಗಳನ್ನು ಸಂಕೇತಿಸುವಂತೆ ಒಂಬತ್ತು ಮೆಟ್ಟಿಲುಗಳಲ್ಲಿ ಬೊಂಬೆಗಳನ್ನು ಕೂಡಿಸುವುದು ಪದ್ಧತಿ . ಎಲ್ಲರ ಬದುಕಿನಲ್ಲೂ ಸಂಸ್ಕೃತಿ, ಸಂಪ್ರದಾಯ ಬಹಳಷ್ಟು ಹಾಸು ಹೊಕ್ಕಾಗಿವೆ. ಅವುಗಳನ್ನು ಇಂದಿಗೂ ಆಚರಿಸುತ್ತಾ ಬಂದಿರುವುದಕ್ಕೆ ಅವುಗಳ ಹಿಂದಿರುವ ಮಹತ್ತರವಾದ ಶ್ರದ್ಧೆ, ನಂಬಿಕೆಯ ಉದ್ದೇಶವೇ ಕಾರಣವಾಗಿರುತ್ತದೆ. ಶಕ್ತಿ ದೇವತೆಯನ್ನು ತಾಯಿಯೆಂದು, ದುಷ್ಟ ಸಂಹಾರಳೆಂದು ನಾನಾ ರೂಪಗಳಲ್ಲಿ ಕಂಡು ವಿಧವಿಧವಾಗಿ ಆರಾಧಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಆ ಮಹಾ ಪರ್ವದ ಸಂದರ್ಭದಲ್ಲಿ ಶಕ್ತಿದೇವತೆ ಒಂಬತ್ತು ಶಕ್ತಿ ಸ್ವರೂಪಿಣಿಯರ ರೂಪದಲ್ಲಿ ಲಕ್ಷ್ಮಿ, ಸರಸ್ವತಿ, ಕಾಳಿ, ದುರ್ಗೆ, ಶೈಲಪುತ್ರಿ, ಚಂದ್ರಘಂಟ , ಸ್ಕಂದ ಮಾತಾ... ಹೀಗೆ ವಿವಿಧ ವೈಶಿಷ್ಟ್ಯಗಳೊಂದಿಗೆ ಆರಾಧಿಸಲಾಗುತ್ತದೆ.
ಸಾಮಾನ್ಯವಾಗಿ ಹೆಚ್ಚಿನವರು ಒಂಬತ್ತು ರಾತ್ರಿಗಳನ್ನು ಪ್ರತಿನಿಧಿಸುವಂತೆ ಒಂಬತ್ತು ಮೆಟ್ಟಿಲುಗಳಾಗಿ ಜೋಡಿಸುತ್ತಾರೆ. ಜೋಡಿಸುವ ಬೊಂಬೆಗಳ ಸಾಲಿನಲ್ಲಿ ಪ್ರಧಾನವಾಗಿ ಕೂಡಿಸುವ ಬೊಂಬೆಗಳು ಪತಿ-ಪತ್ನಿಯನ್ನು ಪ್ರತಿನಿಧಿಸುತ್ತದೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಪಟ್ಟದ ಬೊಂಬೆಗಳನ್ನು ಮಗಳ ಮದುವೆ ಸಂದರ್ಭದಲ್ಲಿಮಗಳಿಗೆ ಬಳುವಳಿಯಾಗಿ ನೀಡುವ ಕ್ರಮ ಇದೆ. ಆ ಮೂಲಕ ಆ ಹಬ್ಬದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡುತ್ತಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಬಳಸುವ ಬೊಂಬೆಗಳನ್ನು ಮರದಿಂದ ಮಾಡಲಾಗಿರುತ್ತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಬೊಂಬೆಗಳಲ್ಲೂ ನಾವೀನ್ಯತೆ ಕಾಣುತ್ತಿದೆ. ಬೊಂಬೆ ಪ್ರದರ್ಶನದಲ್ಲಿ ಪ್ರಥಮ ಪ್ರಾಶಸ್ಥ್ಯವಿರುವುದು 'ಪಟ್ಟದ ಬೊಂಬೆ' ಎಂದು ಕರೆಯಲ್ಪಡುವ ಜೋಡಿ ಗೊಂಬೆಗಳಿಗೆ. ಒಂದು ಗಂಡು ಗೊಂಬೆ ಇನ್ನೊಂದು ಹೆಣ್ಣು ಗೊಂಬೆ. ಚಿಕ್ಕ ಚಿಕ್ಕ ಗೊಂಬೆಗಳು, ಅವುಗಳ ಆಕಾರಕ್ಕೆ ತಕ್ಕಂಥ ಉಡುಗೆಗಳು ಹೆಣ್ಣು ಗೊಂಬೆಗೆ ಪುಟ್ಟ ರವಿಕೆ, ಸೀರೆ, ಆಭರಣಗಳು, ಸರ, ಬಳೆ, ಹಣೆಗೆ ಬಿಂದಿ, ನತ್ತು ಹೀಗೆ ಅಲಂಕಾರಕ್ಕೆ ಎಲ್ಲವುಗಳನ್ನು ತಂದು ಗೊಂಬೆಗಳಿಗೆ ತೊಡಿಸಿ ಗೊಂಬೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿ ಆನಂದಿಸುತ್ತಾರೆ.
ವಿಭಿನ್ನ ಶೈಲಿಯ ಹಿನ್ನೆಲೆ
ಅವರವರ ಅಭಿರುಚಿ, ನಂಬಿಕೆಯ ಅನುಸಾರವಾಗಿ ಜಾನಪದ, ಪೌರಾಣಿಕ ಶೈಲಿಯ ವಿನ್ಯಾಸದಲ್ಲಿ ಕಲಾತ್ಮಕ, ಸೃಜನಶೀಲತೆಗನುಗುಣವಾಗಿ ಕಾಲ್ಪನಿಕ ದೃಶ್ಯಗಳ ಗೊಂಬೆಗಳು ಜೋಡಣೆ ಅಲಂಕೃತ ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ರಾಮಾಯಣದ ಘಟನೆಗಳನ್ನು ಪ್ರತಿಬಿಂಬಿಸುವ ಗೊಂಬೆಗಳು ಉದಾಹರಣೆಗೆ ಶ್ರೀರಾಮನ ಜನನ, ಸೀತಾಕಲ್ಯಾಣ, ವನವಾಸ, ಶ್ರೀರಾಮಪಟ್ಟಾಭಿಷೇಕ.... ಹೀಗೆ ದೃಶ್ಯಗಳನ್ನು ಜೋಡಿಸಿ ಗೊಂಬೆಗಳನ್ನಿಡಬಹುದು. ದಶಾವತಾರದ ಕಲ್ಪನೆ -ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ. ಶ್ರೀನಿವಾಸ ಕಲ್ಯಾಣ, ಕೃಷ್ಣನ ಆಟ-ತುಂಟಾಟ, ಗಣೇಶನಿಗೆ ಆನೆ ಮುಖ ಬಂದಿದ್ದು, ಹೀಗೆ ಪೌರಾಣಿಕ ರೀತಿಯಲ್ಲಿಗೊಂಬೆಗಳನ್ನು ಕೂರಿಸಬಹುದು. ಐತಿಹಾಸಿಕ ಪುರುಷರ ಜೀವನಗಾಥೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವವುಗಳನ್ನು ಕಾವ್ಯಾತ್ಮಕವಾಗಿ ಜೋಡಿಸಬಹುದು.
ಹೀಗೆ ದಸರಾ ಹಬ್ಬದಂದು ಬೊಂಬೆ ಹಬ್ಬದ ಮೂಲಕ ಮನುಕುಲದ ಸ್ವಾರಸ್ಯಕರ ಪೌರಾಣಿಕ , ಧಾರ್ಮಿಕ ಘಟನೆಗಳು ಸೃಜನಶೀಲ ಕಲ್ಪನೆಯ ಮೂಲಕ ಅನಾವರಣಗೊಳ್ಳವ ಬೊಂಬೆಗಳ ಪ್ರದರ್ಶನ ನೆರೆಹೊರೆಯವರೊಂದಿಗೆ ಬಾಂಧವ್ಯ ಗಟ್ಟಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯದ ಬೆಸುಗೆಗೆ ಕಾರಣವಾಗಿ ಮಾನವೀಯತೆ ಮೈಗೂಡಿಸಿಕೊಂಡು ಎಲ್ಲರೊಂದಿಗೆ ಸಹಬಾಳ್ವೆ ನಡೆಸಲಿ ಎಂದು ನಾಡಿನ ಜನತೆಗೆ ಶುಭ ಹಾರೈಸುತ್ತೇನೆ.
ಅಶೋಕ ಬಾಬು ಟೇಕಲ್
ಕೋಲಾರ.