- ಚಲಂ ಹಾಡ್ಲಹಳ್ಳಿ
ಖಾಸಗಿ ಆಸ್ಪತ್ರಗೆಳ ಬಗ್ಗೆ ಏನೂ ಹೇಳಲು ಉಳಿದಿಲ್ಲ. ಅಲ್ಲಿಗೆ ಕಳೆದ ವರ್ಷ ಗೆಳೆಯನೊಬ್ಬ ಕೊರೋನಾ ಪಾಸಿಟೀವ್ ಅಂತ ಅಡ್ಮಿಟ್ ಆಗಿದ್ದಕ್ಕೆ ಬೇರೇನೂ ಔಷಧಿ ನೀಡದೇ ಪ್ಯಾರಸಿಟಮಾಲ್ ಮತ್ತು ಇತರೆ ಜಿಂಕ್, ವಿಟಮಿನ್ ಔಷದಿಗಳನ್ನು ನೀಡಿದ್ದರು. ಮೂರೇ ದಿನ... ಆಚೆ ಬಂದಿದ್ದಕ್ಕೆ ಕಟ್ಟಿದ ಬಿಲ್ಲು ಹತ್ತತ್ತಿರ ಮೂರು ಲಕ್ಷ.
ಈಗ ಮಂಗಳಾ ಆಸ್ಪತ್ರೆ ಆಕ್ಸಿಜನ್ ಪ್ಲಾಂಟ್ ಹಾಕಿದ್ದಕ್ಕಾಗಿ ಸುದ್ದಿಯಲ್ಲಿದೆ. ಆಕ್ಸಿಜನ್ ಈಗ ಹೆಚ್ಚು ಬೇಡಿಕೆಯಲ್ಲಿರುವ ಮನುಷ್ಯನ ಅತ್ಯವಶ್ಯಕ ಜೀವದುಸಿರು. ಅದನ್ನು ಖಾಸಗಿ ಆಸ್ಪತ್ರೆಯಾದ ಮಂಗಳಾ ಆಸ್ಪತ್ರೆ ಉತ್ಪಾದಿಸಲು ಮುಂದೆ ಬಂದಿದೆ. ಜನೋಪಯೋಗಿ ಕೆಲಸ ಯಾರೇ ಮಾಡಿದರೂ ಒಳ್ಳೆಯದು. ಅದರಲ್ಲಿ ಎರಡು ಮಾತಿಲ್ಲ.
ಆದರೆ ಇತಿಹಾಸವನ್ನು ಒಮ್ಮೆ ಗಮನಿಸಬೇಕಿದೆ. ಯಾಕೆಂದರೆ ನಮ್ಮ ಇತಿಹಾಸದಲ್ಲೇ ನಮಗೆ ಪಾಠವಿರುತ್ತದೆ. ಒಂದು ಕಾಲಕ್ಕೆ ಇದೇ ಅಶೋಕ್ ಗೌಡರ ಮಂಗಳ ಆಸ್ಪತ್ರೆ ಈಗಿನ ಬಷೀರ್ ಅವರ ಜನಪ್ರಿಯ ಆಸ್ಪತ್ರೆಗಿಂತ ಹೆಚ್ಚು ಸುಲಿಗೆಕೋರ ಆಸ್ಪತ್ರೆ ಎಂಬ ಅಪಖ್ಯಾತಿಗೆ ಒಳಗಾಗಿತ್ತು.. ಆಗ ಇದೇ ಡಾ. ಬಷೀರ್ ಅವರು ಮಂಗಳ ಆಸ್ಪತ್ರೆಯಲ್ಲಿದ್ದರು. ಮೂಳೆ ಡಾಕ್ಟರಾಗಿ ಪ್ರವರ್ಧಮಾನಕ್ಕೆ ಬಂದದ್ದು ಕೂಡ ಅಲ್ಲಿಯೇ. ಮಂಗಳ ಆಸ್ಪತ್ರೆಯ ಸುಲಿಗೆ ಪುರಾಣದ ಮುಂದುವರೆದ ಭಾಗವಾಗಿ ಬಷೀರರ ಜನಪ್ರಿಯ ಆಸ್ಪತ್ರೆ ತೆರೆಯಲ್ಪಟ್ಟಿದೆ ಎಂಬುದನ್ನು ಇತ್ತೀಚಿನ "ಜನಪ್ರಿಯ" ಆಸ್ಪತ್ರೆಯ ಅವಘಡಗಳನ್ನು ನೋಡಿದರೆ ತಿಳಿಯುತ್ತದೆ.
ಈಗ ಆಕ್ಸಿಜನ್ ವಿಚಾರಕ್ಕೆ ಬಂದರೆ ಇದು ಒಂದು ವ್ಯವಹಾರ... ಖಾಸಗಿ ಆಸ್ಪತ್ರೆಗಳು ಸೇವೆ ಬಿಟ್ಟು ಬಹಳ ವರ್ಷಗಳೇ ಆದವು. ಅದೊಂದು ವ್ಯವಹಾರ ಮತ್ತು ಆ ವ್ಯವಹಾರವನ್ನು ಹಾಸನದಲ್ಲಿ ಮೊದಲು ಆರಂಭಿಸಿದ್ದು ಇದೇ ಮಂಗಳಾ ಆಸ್ಪತ್ರೆಯ ಅಶೋಕ್ ಗೌಡರು. ಈಗ 40 ಲಕ್ಷ ಹಾಕಿ ಆಕ್ಸಿಜನ್ ಪ್ಲಾಂಟ್ ಹಾಕಿದಾರೆ ಎಂದರೆ ಅದನ್ನು ವ್ಯಾವಹಾರಿಕವಾಗಿಯೇ ನೋಡಬೇಕು. ಅಂದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಹಾಕೋ ಬಿಲ್ ಮೇಲೆ ಇದು ಡಿಪೆಂಡ್ ಆಗುತ್ತೆ.
ಸದ್ಯಕ್ಕೆ ಹಾಸನದ ದೊಡ್ಡಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಖಾಸಗಿಯಲ್ಲಿ ಆಕ್ಸಿಜನ್ ಸಿಗುತ್ತೆ ಅನ್ನೋದು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯತೆ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ.
ಫೈನಲೀ... ಅದೊಂದು ವ್ಯವಹಾರದ ಮೈಂಡ್‌ಗೇಮ್. ನಲವತ್ತು ಲಕ್ಷ ಬಂಡವಾಳಕ್ಕೆ ಮೀಟರ್ ಬಡ್ಡಿಗಿಂತಲೂ ಹೆಚ್ಚಿನ ವೇಗದಲ್ಲಿ ಲಾಭದ ಯೋಚನೆ ಇರುತ್ತದೆ.
ಹಾಗಾಗಿ ಮಂಗಳಾ ಸೇರಿದಂತೆ ಇತರೆ ಯಾವುದೇ ಖಾಸಗಿ ಆಸ್ಪತ್ರೆಗಳ ಯಾವ ಸಹವಾಸವೂ ಹಾಸನದ ಜನತೆಗೆ ಬೇಡ. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಒಂದು ಮಾರ್ಗಸೂಚಿ ಹೊರಡಿಸಲಿ. ಅದನ್ನ ಸರ್ಕಾರವೇ ನೋಡಿಕೊಳ್ಳಲಿ.
ಅದೇನೇ ಸುಖದುಃಖ ಅಂತ ಇದ್ದರದೂ ಸರ್ಕಾರಿ ಆಸ್ಪತ್ರೆ ಮಾತ್ರ ಕೋವಿಡ್ ರೋಗಿಗಳ ಜೀವ ಹಾಗು ಅವರ ಮನೆಯ ಆರ್ಥಿಕ ರಕ್ಷಣೆಗೆ ಇರುವ ದಾರಿ.
ಡಾ. ಅಶೋಕಗೌಡರ ಕೆಲಸವನ್ನು ಮಾದರಿ ಎಂದು ಕರೆಯಲಾಗುತ್ತಿದೆ. ಅಡ್ಡಿಯಿಲ್ಲ. ಉಸಿರಾಡುವ ಗಾಳಿ ಈಗ ಜನರಿಗೆ ಸಂಜೀವಿನಿಯಾಗಿರುವಾಗ ಅದನ್ನು ವ್ಯಾಪರವಾಗದ ಹಾಗೆ ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಮೇಲೆ "ಮಾದರಿ"ಯನ್ನು ನಿರ್ಧರಿಸಬಹುದು.
ಉದಾಹರಣೆಗೆ....
ಒಂದು ವಿಷಯ ಕೇಳಿ... ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ಸಿ ಟಿ ಸ್ಕ್ಯಾನ್ ವ್ಯವಸ್ಥೆ ಇದೆ. ಆದರೆ ವೈದ್ಯರೇ ಸೇರಿ ದುಡ್ಡು ಹಾಕಿ "ಯೂನಿಟಿ ಸ್ಕ್ಯಾನ್" ಅಂತ ಆರಂಭವಾದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟೋಕನ್ ವ್ಯವಸ್ಥೆ ಆರಂಭ. ಅಂದರೆ ವೈದ್ಯರಿಗೆ ನಾಳೆ ರಿಪೋರ್ಟ್ ಬೇಕು ಅಂದರೆ ಸ್ಕ್ಯಾನ್ ವಿಭಾಗದವರು ಹತ್ತು ದಿನಗಳ ನಂತರ ಬನ್ನಿ ಅಂತ ಟೋಕನ್ ಕೊಡುತ್ತಾರೆ. ಅರ್ಜೆಂಟ್ ಬೇಕು ಅಂದರೆ ಹೊರಗೆ ಹೋಗಿ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ. ಅನಿವಾರ್ಯವಾಗಿ ಇದೇ ವೈದ್ಯರುಗಳ "ಯೂನಿಟಿ" ಸ್ಕ್ಯಾನ್ ಸೆಂಟರಿಗೆ ಹೋಗಬೇಕು.