ಏಪ್ರಿಲ್ ತಿಂಗಳಲ್ಲಿ, ತಣ್ಣನೆಯ ಮಲೆನಾಡಿನಲ್ಲಿ ಒಮ್ಮೆಲೆ ಏರುವ ತಾಪಮಾನದ ಆಧಾರದ ಮೇಲೆ ಇವತ್ತು ಮಳೆ ಖಂಡಿತ ಅಂತ ನಮ್ಮಪ್ಪ ಹ ವಾ ಮಾ ನ ಇಲಾಖೆಯವರಿಗಿಂತ ನಿಖರವಾಗಿ ಊಹೆ ಮಾಡಿ ಹೇಳುತ್ತಿದ್ದರು..!
ನಮ್ಮಪ್ಪ ಬೆಳಿಗ್ಗೆ ಹಾಕಿದ ಅಂಗಿಯನ್ನು ತೆಗೆದು.. ಆ ನಂತರ ಮದ್ಯಾನ್ಹದ ಸುಮಾರಿಗೆ ಬನಿಯನ್ ಬಿಚ್ಚಿ ಎಸೆದು .. ಹೆಗಲ ಮೇಲಿದ್ದ ಟವಲ್ ನ್ನು ಸೊಂಟಕ್ಕೆ ಕಟ್ಟಿಕೊಂಡು ಓಡಾಡಲು ಶುರು ಮಾಡಿದರೆಂದರೆ ಇನ್ನೊಂದು ಗಂಟೆಯೊಳಗೆ ಗ್ಯಾರಂಟಿ ಮಳೆ ಅಂತ ನಮ್ಮ ಪ್ರೆಡಿಕ್ಷನ್... ಮಳೆಗೆ ಅ(ಹ)ವಮಾನ ಇಲಾಖೆಯವರಿಗಿಂತ ನಮ್ಮಪ್ರೆಡಿಕ್ಷನ್ ಮೇಲೆ ನಂಬಿಕೆ ಜಾಸ್ತಿ...
ಹಿಂದೆಲ್ಲ ಎಪ್ರಿಲ್ ತಿಂಗಳಲ್ಲಿ ಬೀಳುವ ಮೊದಲ ಮಳೆಯು ಬರ್ಪೂರ ಗುಡುಗು-ಸಿಡಿಲು- ಗಾಳಿ- ಆಲಿಕಲ್ಲಿನ ಸುರಿಮಳೆ...( ಆಲಿಕಲ್ಲಿಗೆ ಕೆಲವರು ಆಣಿ ಕಲ್ಲು ಅಂತ.. ಕೆಲವರು ಆನೆಕಲ್ಲು ಅಂತ... ಗೊಂದಲ ಈಗಲೂ ಇದೆ) ಸಿಡಿಲು ಮಳೆಯನ್ನು ಲೆಕ್ಕಿಸದೆ ಆಲಿಕಲ್ಲು ಬರಗಿಕೊಂಡು ತಿಂದು ಉಳಿದದ್ದನ್ನು ಜೊತೆಗಿದ್ದವರ ಅಂಗಿ-ಚಡ್ಡಿಯೊಳಗೆಲ್ಲ ತುರುಕಿ ಪಟ್ಟ ಖುಷಿಯನ್ನು ಮತ್ತೆ ಪಡೆಯಲು ಒಂದು ವರುಷ ಕಾಯಬೇಕಿತ್ತು...
ಅಜ್ಜಿಗೆ ಅರಿವೆ ಚಿಂತೆ... ಮೊಮ್ಮಗನಿಗೆ ಮದುವೆ ಚಿಂತೆ .. ಅನ್ನುವ ಹಾಗೆ ಒಂದು ಮಳೆ ಬಿದ್ದರೆ ಸಾಕು ಮನೆಯ ಹಿರಿಯರಿಗೆ ಮುಂದಿನ 6 ತಿಂಗಳು ಕಾಲ ಮಳೆಗಾಲಕ್ಕೆ ಏನೇನನ್ನು ಕೂಡಿಡಬೇಕು ಎಂಬುದರ ಚಿಂತೆ... ಮಳೆಗಾಲಕ್ಕೆ ಮುಂಚೆ ಕೊಟ್ಟಿಗೆ-ಮನೆಯನ್ನು ಅಡಿಕೆ ಸೋಗೆ - ಹುಲ್ಲಿನಿಂದ ಹೊದಿಸುವುದು... ಒಂದು ವಷ೯ಕ್ಕಾಗುವಷ್ಟು ಕಟ್ಟಿಗೆ... ವಷ೯ಕ್ಕಾಗುವಷ್ಟು ದಿನಸಿ ಸಾಮಾನು ತಂದು ಒಣಗಿಸಿ ಡಬ್ಬದೊಳಗೆ ಹಾಕಿ ಇಡಬೇಕು... ತೋಟದಿಂದ ಹಾಳೆ ಹೊರೆ ಬರಬೇಕು.. ಗದ್ದೆಗೆ ಗೊಬ್ಬರ ಸಾಗಿಸಬೇಕು.. ಎತ್ತಿನ ಗಾಡಿಯನ್ನು ಒಮ್ಮೆ ಸವಿ೯ಸ್ ಮಾಡಿಸಬೇಕು.. ಎತ್ತುಗಳು ಬಾಯಿಗೂಡಿ ನಾಲ್ಕು ವಷ೯ ಆಯಿತು.. ಈ ವಷ೯ವಾದರು ಆಯುನೂರು ಜಾತ್ರೆಯಲ್ಲಿ ಬದಲಿಸಬೇಕು... ದರಗು ಸಂಗ್ರಹ ಮಾಡಿಕೊಳ್ಳಬೇಕು.. ಮಳೆಗಾಲದೊಳಗೆ ಬಿದಿರು ಮುಳ್ಳಿನ ಒಡ್ಡು ಹಾಕುವ ಕೆಲಸ ಮುಗಿದಿರಬೇಕು.. ಅಡಿಕೆ ಸೊಲ್ಪ ಮಾರಾಟ ಮಾಡಿ ಅಂತ ಶಿವಮೊಗ್ಗದ ಸಿಂಡಿಕೇಟ್, ಮ್ಯಾಮ್ಕೋಸ್ , ಕಾಸರವಳ್ಳಿ ಮಂಡಿಗೆ ಪತ್ರ ಬರೆಯಬೇಕು... ಇದರ ಮಧ್ಯೆ ನೆಂಟರಿಷ್ಟರ ಮದುವೆ ಮನೆಗಳು.. ಈಗಿನಂತೆ ಒಂದು ಗಂಟೆಗೆ ಹೋಗಿ, ಮದುಮಕ್ಕಳನ್ನು ವಿಶ್ ಮಾಡದಿದ್ದರೂ ಪರವಾಗಿಲ್ಲ.. ಮನೆಯ ಯಜಮಾನನಿಗೆ ಮುಖ ತೋರಿಸಿ , ಅಲ್ಲಿಂದ ಸೀದ ಊಟದ ಟೇಬಲ್ - ಎರಡು ಗಂಟೆಗೆ ಮನೆ - ಕಾನ್ಸೆಪ್ಟ್ ಇರಲಿಲ್ಲ.. ಮದುವೆಗೆ 4 ದಿನ ಮುಂಚಿತವಾಗಿ ಹೋಗಿ .. ಬಾಳೆಲೆ, ಚಪ್ಪರ, ಕಣನೀರು, ಪಾತ್ರೆ ಒಟ್ಟು ಹಾಕುವುದು, ಒಲೆ ತಯಾರಿ, ಮಂಟಪ ತಯಾರಿಯಿಂದ ಹಿಡಿದು ಮದುವೆಯ ನಂತರ ಎರಡು ದಿನ ಇದ್ದು ಎಲ್ಲಾ ಕೆಲಸಗಳನ್ನು ಸೇರಿಸಿ, ಮುಚ್ಚಿ ಬರಬೇಕಿತ್ತು.. (ಒಬ್ಬರಿಗೊಬ್ಬರ ಸಹಕಾರದಿಂದ ನಡೆಯುತ್ತಿತ್ತು) ಹೀಗೆಲ್ಲಾ ಮುಗಿಯದ ಚಿಂತೆಗಳು.....
ನಿಜ ಹೇಳಬೇಕೆಂದರೆ ಈಗ ನಾವೇ ಮನೆಯ ಹಿರಿಯರು... ನಮಗೆ ಇವ್ಯಾವ ಚಿಂತೆಗಳು ಇಲ್ಲ... ಆದರೂ ಚಿಂತೆಗಳು ಸಾರ್...ಚಿಂತೆಗಳು!
Captured by - @vibha_ananth
Tags
ಲೇಖನ