ಹೊಯ್ಸಳರ ಬೆಳವಾಡಿ ಶ್ರೀ ವೀರನಾರಾಯಣ ದೇವಸ್ಥಾನ

ಚಿಕ್ಕಮಗಳೂರಿನಿಂದ ೨೫ ಕಿ.ಮೀ ದೂರದಲ್ಲಿರುವ ಬೆಳವಾಡಿ ಬೇಲೂರು ಹಳೆಬೀಡುಗಳಷ್ಟು ಪ್ರಸಿದ್ಧವಲ್ಲದಿದ್ದರೂ ಜಗದ್ವಿಖ್ಯಾತ ಬೇಲೂರು ಮತ್ತು ಹಳೆಬೀಡಿಗೆ ಬಹಳ ಸಮೀಪದಲ್ಲಿದೆ. ಬೆಳವಾಡಿಯ ವೀರನಾರಾಯಣ ದೇವಾಲಯವಂತೂ ನಿಜಕ್ಕೂ ಮನೋಹರವಾಗಿದೆ. ಮೊದಲಿಗೆ ದೇಗುಲ ದ್ವಾರಮಂಟಪದಲ್ಲಿಯೇ ಜೋಡಿ ಆನೆಗಳು ಸ್ವಾಗತ ಕೋರುತ್ತವೆ. ಒಳಹೊಕ್ಕೊಡನೆಯೇ ಸಾಲು ಸಾಲು ಕಂಬಗಳು, ತಿರುಗಣಿ ಯಂತ್ರದಿಂದ ಮಾಡಿರುವ ಕಪ್ಪನೆಯ ಹೊಳೆಯುವ ಕಂಬಗಳು ಬಹಳ ಆಕರ್ಷಕವಾಗಿವೆ. ಎಲ್ಲಾ ಪ್ರಸಿದ್ಧ ಕ್ಷೇತ್ರಗಳಿಗೆ ಇರುವಂತೆ ಬೆಳವಾಡಿಗೊಂದು ಐತಿಹ್ಯ ಕಥೆಯಿದೆ. ಮಹಾಭಾರತದಲ್ಲಿ ಉಲ್ಲೇಖಿಸಿರುವ ಏಕಚಕ್ರನಗರ ಎಂದರೇ ಇದೇ ಊರು ಎಂದು ಸ್ಥಳ ಪುರಾಣ ಹೇಳುತ್ತದೆ. ಭೀಮನು ಬಕಾಸುರನ್ನು ಈ ಏಕಚಕ್ರನಗರದಲ್ಲಿಕೊಂದಿದ್ದಾಗಿ ಹೇಳುತ್ತದೆ ಇಲ್ಲಿನ ಸ್ಥಳ ಐತಿಹ್ಯ. 
ವೀರನಾರಾಯಣ, ವೇಣು ಗೋಪಾಲ ಮತ್ತು ಯೋಗಾ ನರಸಿಂಹ ದೇವರುಗಳ ಮುತ್ತಿನಂತಹ ಮೂರು ಮೂರ್ತಿಗಳು ಬಹಳ ಆಕರ್ಷಿತವಾಗಿವೆ. ದಕ್ಷಿಣ ಭಾರತದಲ್ಲಿ ಪಂಚ ನಾರಾಯಣನನ್ನು ಗುರುತಿಸಲಾಗಿದೆ. ಅವುಗಳೆಂದರೆ, ಬೇಲೂರು ವಿಜಯನಾರಾಯಣ (ಚೆಲುವ ನಾರಾಯಣ ), ಮೇಲುಕೋಟೆ - ಚೆಲುವನಾರಾಯಣ, ತೊಂಡನೂರು - ನಂಬಿ ನಾರಾಯಣ, ಗದಗ್ - ವೀರ ನಾರಾಯಣ , ತಲಕಾಡು ಕೀರ್ತಿ ನಾರಾಯಣ. ಆದರೆ, ಹೊಯ್ಸಳ ದೇವಾಲಯಗಳ ಇತಿಹಾಸಕಾರರು, ಗದಗಿನ ವೀರ ನಾರಾಯಣನನ್ನು, ಪಂಚ ನಾರಾಯಣರಲ್ಲಿ ಸೇರಿಸದೆ, ಬೆಳವಾಡಿಯ ವೀರ ನಾರಾಯಣನನ್ನು, ಪರಿಗಣಿಸುತ್ತಾರೆ. ಹಾಗಾಗಿ, ಹೊಯ್ಸಳರ ಪಂಚನಾರಾಯಣ ದೇವಾಲಯಗಳಲ್ಲಿ ಬೆಳವಾಡಿಯ ವೀರ ನಾರಾಯಣನು ಸ್ಥಾನ ಪಡೆದುಕೊಳ್ಳುತಾನೆ. 

ನಾರಾಯಣನು ಮಧ್ಯದಲ್ಲಿ, ಎಡಗಡೆ ವೇಣುಗೋಪಾಲ ಮತ್ತು ಬಲಗಡೆ ನರಸಿಂಹಸ್ವಾಮಿಯನ್ನು ನಾವಿಲ್ಲಿ ಕಾಣಬಹುದು. ಮೂರು ಗರ್ಭಗುಡಿ ಇರುವಕಾರಣ, ಇದೊಂದು ತ್ರಿಕೂಟಾಚಲ ದೇವಾಲಯ. ವೀರ ನಾರಾಯಣನ ವಿಗ್ರಹ ವಿಶೇಷವಾಗಿದ್ದು, ನಾರಾಯಣನು ಗದೆ, ಪದ್ಮ, ವ್ಯಗ್ರಹಸ್ತದಿಂದ ಕೂಡಿರುವ ಸುಂದರ ಕೆತ್ತನೆ. ಪಕ್ಕದಲ್ಲಿ ಶ್ರೀದೇವಿ, ಭೂದೇವಿ ಯನ್ನು ಸಹ ಒಳಗೊಂಡ ಏಕಶಿಲಾ ವಿಗ್ರಹ. ಪ್ರಭಾವಳಿಯಲ್ಲಿ ದಶಾವತಾರವನ್ನು ಕಾಣಬಹುದು. ಪ್ರತಿ ವರ್ಷ ಮಾರ್ಚ್ ೨೩ನೇ ತಾರೀಕು, ಸೂರ್ಯನ ಕಿರಣ ಸ್ವಾಮಿಯಮೇಲೆ ಬೀಳುವುದು ವಾಸ್ತುಶಿಲ್ಪದ ಒಂದು ಅಚ್ಚರಿಯೇ ಸರಿ. 

ವೇಣುಗೋಪಾಲನು ಕಲ್ಪವೃಕ್ಷದ ಕೆಳಗಡೆ ಕೊಳಲನ್ನು ನುಡಿಸುತ್ತಿರುವ ಬಂಗಿಯಲ್ಲಿದ್ದು, ಭಾರತದ ಪುರಾತತ್ವ ಇಲಾಖೆ ನಡೆಸಿದ ಸರ್ವೇ ಪ್ರಕಾರ , ಭಾರತದಲ್ಲಿಯೇ ಅತಿ ಸುಂದರವಾದ ವೇಣುಗೋಪಾಲ ಇದೆಂದು ಗುರುತಿಸಿದ್ದಾರೆ. ನರಸಿಂಹಸ್ವಾಮಿಯ ಮೂರ್ತಿಯು ಸಹ ಅಷ್ಟೇ ಸುಂದರವಾದ ವಿಗ್ರಹ. ನರಸಿಂಹ ಸ್ವಾಮಿಯು ಯೋಗ ಮುದ್ರೆಯಲ್ಲಿ ಕುಳಿತಿರುವುದನ್ನು ನಾವು ಇಲ್ಲಿ ಕಾಣಬಹುದು.  

ಈ ತ್ರಿಕೂಟ ದೇಗುಲವನ್ನು ಹೊಯ್ಸಳರ ಚಕ್ರವರ್ತಿ ಎರಡನೆ ವೀರಬಲ್ಲಾಳನಿಂದ ಸುಮಾರು ಕ್ರಿ.ಶ. ೧೨೦೦ ರ ಆಸುಪಾಸಿನಲ್ಲಿ ಕಟ್ಟಲ್ಪಟ್ಟಿತು. ಇದು ಹೊಯ್ಸಳರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಹೊರಗಿನಿಂದ ನೋಡಲು ತುಂಬ ಸೊಗಸಾಗಿದೆ. ಎಂದಿನಂತೆ ಇಲ್ಲಿಯೂ ಬಳಪದ ಶಿಲೆಯನ್ನು ಬಳಿಸಿದ್ದಾರೆ. ಮೂರೂ ಗರ್ಭಗುಡಿಗಳ ಹೊರ ಭಾಗದಲ್ಲಿ ಅಸಂಖ್ಯಾತ ಕೆತ್ತನೆಗಳು ಗಮನ ಸೆಳೆಯುತ್ತವೆ. ವಿಷ್ಣುವಿನ ಅವತಾರಗಳು, ನಾರಾಯಣನ ವಿವಿಧ ರೂಪಗಳು, ರಾಮಾಯಣ ಮತ್ತು ಮಹಾ ಭಾರತದ ಸಾಲು ದೃಶ್ಯಗಳು, ಮನ್ಮಥ, ಹಂಸ, ಗರುಢ ಶಿಲೆಗಳೊಡನೆ ಅಲ್ಲಲ್ಲಿ ಹೊಯ್ಸಳ ಲಾಂಛನವೂ ಕಂಡು ಬರುತ್ತವೆ. ಹೊಯ್ಸಳರ ಖ್ಯಾತ ಬೇಲೂರು ಹಳೇಬೀಡು ದೇವಾಲಯಗಳಲ್ಲಿರುವಂತೆ ಇಲ್ಲಿ ತುಂಬ ಕುಸುರಿ ಕೆಲಸ ಕಂಡುಬರುವುದಿಲ್ಲ. ಆದರೂ ದೇಗುಲ ಕಲಾ ಶ್ರೀಮಂತಿಕೆಯಲ್ಲಿ ಹಿಂದೆ ಬಿದ್ದಿಲ್ಲ. ವೀರನಾರಾಯಣ, ವೇಣುಗೋಪಾಲ ಮತ್ತು ಯೋಗನರಸಿಂಹ ದೇವರುಗಳ ಮೂರ್ತಿಗಳಿವೆ. ಇಲ್ಲಿ ಈಗಲೂ ನಿತ್ಯಪೂಜೆ ನಡೆಯುತ್ತದೆ. 

ದೇವಾಲಯದಲ್ಲಿ ನನಗೆ ಅತ್ಯಂತ ಪ್ರಿಯಾವಾದುದು ಎಂದರೆ ಇಲ್ಲಿನ ಆನೆ ಕೆತ್ತನೆ. ದೇವಸ್ತಾನದಲ್ಲಿ ಒಟ್ಟೂ ೮೪ ಆನೆಗಳ ವಿಗ್ರಹಗಳಿದ್ದು, ಒಂದೊಂದು ಆನೆಯ ವಿಗ್ರಹಗಳು ವಿಭಿನ್ನವಾಗಿಸ್ಸು ಯಾವುದು ಪುನರಾವರ್ತನೆಯಾಗಿಲ್ಲ. ಬೇಲೂರು , ಹಳೇಬೀಡಿನ ಹಜಾರದ ಆನೆಗಳಿಗಿಂತಲೂ, ಬೆಳವಾಡಿಯ ಆನೆಗಳು ವಿಭಿನ್ನವಾಗಿ ವಿಶೇಷವಾಗಿದೆ. 

ವಿಶೇಷವೆಂದರೆ  ಇಲ್ಲಿ 1760 ಇಸವಿ ಇಂದಲು  ಶ್ರೀ ಶಾರದಾಪೀಠಮ್  ಶೃಂಗೇರಿ ಮಠದ ವತಿಯಿಂದ 
ವೈಖಾನಸ ಆಗಮ ಕ್ರಮದಲ್ಲಿ ಪೂಜಾ ಕೈಂಕರ್ಯಗಳು ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿದೆ .

ದೇಗುಲದ ಎದುರಲ್ಲೇ ಪುರೋಹಿತರ ಮನೆಯಿದೆ. ಬೆಳಿಗ್ಗೆ ಸಂಜೆ ಎರೆಡು ಸಮಯದಲ್ಲೂ ಪೂಜೆಯನ್ನು ನೆರವೇರಿಸುತ್ತಾರೆ.

ಪೂಜೆ ಮಾಡಿಸಲು ಅಥವಾ ದೇವಸ್ಥಾನ ವೀಕ್ಷಿಸಲು ಆಸಕ್ತಿ ಉಳ್ಳವರು , 
ಶ್ರೀ. ಪ್ರಶಾಂತ್ ಭಾರಧ್ವಾಜ್ ರನ್ನು   9035041518 ಸಂಪರ್ಕಿಸಬಹುದು. 

(ಮಾಹಿತಿ ಸಂಗ್ರಹ)
ಶ್ರೀನಿಧಿ 

Post a Comment

Previous Post Next Post