PSI ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ


ಹಾಸನ: ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ (Fire) ಹಾಕಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ. ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು.


ಈ ವೇಳೆ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.


ಶೋಭಾ ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್‌ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Post a Comment

Previous Post Next Post