ಹೊಳೆನರಸೀಪುರ ತಾಲ್ಲೂಕಿನ ಕಟ್ಟೆ ಹೊಸೂರು ಗ್ರಾಮದ ರಂಗಸ್ವಾಮಿ ಎಂಬುವರ ಮನೆಯ ಆವರಣದಲ್ಲಿ ಗುರುವಾರ ರಾತ್ರಿ 2.51ರ ಸಮಯದಲ್ಲಿ ಚಿರತೆ ಓಡಾಡಿರುವುದು ಸಿ.ಸಿ. ಕ್ಯಾಮಾರದಲ್ಲಿ ಸೆರೆಯಾಗಿದೆ.
ರಂಗಸ್ವಾಮಿ ನಾಯಿ ಸಾಕಿದ್ದು ಅದನ್ನು ರಾತ್ರಿ ವೇಳೆ ಬೋನಿನಲ್ಲಿ ಕಟ್ಟಿರುತ್ತಾರೆ.ಕೆಲವು ದಿನಗಳ ಹಿಂದೆ ಇದೇ ಜಾಗದಿಂದ ಚಿರತೆ, ನಾಯಿಯನ್ನು ಹೊತ್ತುಕೊಂಡು ಹೋಗಿತ್ತು. ನಂತರ ರಂಗಸ್ವಾಮಿ ಬೇರೆ ನಾಯಿಯನ್ನು ತಂದು ಸಾಕಿದ್ದರು.
ಅಂದು ರಾತ್ರಿ 2.51 ರ ಸಮಯದಲ್ಲಿ ನಾಯಿ ಜೋರಾಗಿ ಬೊಗಳುತ್ತಿರುವುದನ್ನು ಕಂಡ ಮನೆಯವರು ಕಿಟಕಿಯಲ್ಲಿ ನೋಡಿದಾಗ ಬೋನಿನಲ್ಲಿದ್ದ ನಾಯಿಯನ್ನು ಚಿರತೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿತ್ತು.
ಇದನ್ನು ಕಂಡು ಗಾಬರಿಯಾದ ಮನೆಯವರು ಜೋರಾಗಿ ಕಿರುಚಾಡಿ ಮನೆಒಳಗಿದ್ದ ಕೋಲು ಸೌದೆಗಳನ್ನು ಎಸೆದು ಚಿರತೆಯನ್ನು ಓಡಿಸಿದ್ದಾರೆ.
'ಈ ಹಿಂದೆ ನಾಯಿಯನ್ನು ಹೊತ್ತುಕೊಂಡು ಹೋಗಿದ್ದಾಗ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ' ಎಂದು ರಂಗಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದರು.
ನಿನ್ನೆ ರಾತ್ರಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ವಿವರವನ್ನು ಅರಣ್ಯಾಧಿಕಾರಿಗಳಿಗೆ ಮತ್ತೊಮ್ಮೆ ನೀಡಿರುವುದಾಗಿ ರಂಗಸ್ವಾಮಿ ತಿಳಿಸಿದರು.
'ದೂರು ದಾಖಲು ಮಾಡಿಕೊಂಡಿರುವ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದರು' ಎಂದು ರಂಗಸ್ವಾಮಿ ತಿಳಿಸಿದರು.