ಆರೋಗ್ಯಕರ ಜೀವನಕ್ಕಾಗಿ ಸುರಕ್ಷಿತ ಆಹಾರ ಸೇವನೆ ಅತ್ಯಗತ್ಯವಾಗಿದೆ. ಇದನ್ನು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜೂ. 7ರಂದು 'ವಿಶ್ವ ಆಹಾರ ಸುರಕ್ಷತಾ ದಿನ' ಆಚರಣೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ಕಲುಷಿತ ಆಹಾರ ಸೇವನೆಯಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು, ಮಾನವ ಆರೋಗ್ಯ ವೃದ್ಧಿ, ಆರ್ಥಿಕ ಸಮೃದ್ಧಿ, ಆಹಾರ ಸುರಕ್ಷತೆ, ಪ್ರವಾಸೋದ್ಯಮ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಲ್ಲ ವಯೋಮಾನದವರನ್ನು ಒಳಗೊಂಡಂತೆ ನಿರಂತರವಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ.
ಪ್ರತಿ 10ರಲ್ಲಿ ಒಬ್ಬರಿಗೆ ಅನಾರೋಗ್ಯ: ವಿಶ್ವಾದ್ಯಂತ ಪ್ರತಿ 10 ಜನರಲ್ಲಿ ಒಬ್ಬರು ಕಲುಷಿತ ಆಹಾರವನ್ನು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ಹೇಳುತ್ತದೆ. ಇದರಲ್ಲಿ ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಮತ್ತು ಬಡ ಕುಟುಂಬದವರು ಹೆಚ್ಚಿನವರಿದ್ದಾರೆ. ಇದಲ್ಲದೆ, ಗುಣಮಟ್ಟವಲ್ಲದ ಆಹಾರದಿಂದ ಹರಡುವ ರೋಗಗಳು ಕೂಡ ಹೆಚ್ಚಾಗಿ ಈ ವರ್ಗ ಮತ್ತು ವಯೋಮಾನದಲ್ಲಿ ಕಂಡುಬರುತ್ತವೆ. ಹಾಗಾಗಿ ಅಸುರಕ್ಷಿತ ಆಹಾರವು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಬೀರುವ ಪರಿಣಾಮ ತಡೆಯುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
![]() |
Advertise |
10 ಲಕ್ಷ ರೂ. ದಂಡ, 7 ವರ್ಷ ಶಿಕ್ಷೆ: ಕಲಬೆರಕೆ ಮಾಡಿದರೆ 25 ಸಾವಿರದಿಂದ 10 ಲಕ್ಷ ರೂ. ವರೆಗೆ ದಂಡ, 2 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಈವರೆಗೆ ಯಾರಿಗೂ ಜೈಲು ಶಿಕ್ಷೆ ಆಗಿಲ್ಲ.
ಆರೋಗ್ಯ ಸಮಸ್ಯೆಗಳು: ಕಲಬೆರಕೆ ಆಹಾರ ಸೇವನೆಯಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಅಲರ್ಜಿ, ಕ್ಯಾನ್ಸರ್, ಚರ್ಮದ ಕಾಯಿಲೆಗಳು, ಗ್ಯಾಸ್ಟ್ರಿಕ್, ಮಿದುಳಿನ ಸಮಸ್ಯೆ, ಶ್ವಾಸಕೋಶ, ಕಿಡ್ನಿ, ಉದರ ಸಂಬಂಧಿ ಕಾಯಿಲೆ, ಅಲ್ಜೈಮರ್, ರ್ಪಾನ್ಸನ್ ಮತ್ತಿತರ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಇನ್ನು ಕಲುಷಿತ ಆಹಾರ ಸೇವನೆಯಿಂದ ವಾಂತಿಭೇದಿ, ಕರುಳುಬೇನೆ ಸೇರಿ ನಾನಾ ರೋಗಗಳು ಬಾಧಿಸಲಿವೆ. ಇದಲ್ಲದೆ, ರಾಸಾಯನಿಕ ಮಿಶ್ರಿತ ಆಹಾರವು ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಕೀಟನಾಶಕ ಬಳಸಿ ಬೆಳೆಯುವ ಆಹಾರ ಸೇವನೆಯ ಬಗ್ಗೆಯೂ ಜಾಗೃತಿ ವಹಿಸುವ ಅಗತ್ಯವಿದೆ
ಆಹಾರ ಸುರಕ್ಷತಾ ಕಾಯ್ದೆಯಲ್ಲೇನಿದೆ?: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011ರ ಆಗಸ್ಟ್ 5ರಿಂದ ಜಾರಿಗೆ ಬಂದಿದೆ. ಇದರ ಅನುಸಾರ ಮಾರಾಟಗಾರರು ಈ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಆಹಾರ ತಯಾರಿಕೆ, ಸಂಗ್ರಹ, ವಿತರಣೆ, ಸಗಟು, ಚಿಲ್ಲರೆ ಮಾರಾಟ ಹಾಗೂ ಆಮದು ಸೇರಿ ವಿವಿಧ ಹಂತಗಳಲ್ಲಿ ವೈಜ್ಞಾನಿಕ ಗುಣಮಟ್ಟ ನಿಗದಿಪಡಿಸಿ, ಉತ್ತಮ ಆಹಾರ ದೊರೆಯುವಂತೆ ಮಾಡಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಹಂತಗಳಲ್ಲಿ ಸುಕರ್ಷತೆ ಕಾಪಾಡುವುದರ ಜತೆಗೆ ಆಹಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು. ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಬೇಕು. ರಾಸಾಯನಿಕ, ಕಲಬೆರಕೆ ಮುಕ್ತವಾಗಿರುವಂತೆ ಎಚ್ಚರ ವಹಿಸಬೇಕು. ಅಹಾರ ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಬೇಕು.
![]() |
Advertise |
ಕಲಬೆರಕೆ ಹಾವಳಿ: ಆರೋಗ್ಯಕರ ಜೀವನಕ್ಕಾಗಿ ಗುಣಮಟ್ಟದ ಆಹಾರ ಸೇವನೆ ಅತೀ ಮುಖ್ಯ. ಆದರೆ, ಕಲಬೆರಕೆ ಆಹಾರ ಹಾವಳಿ ವ್ಯಾಪಕವಾಗಿರುವುದು ಜನರ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯು ಹೆಚ್ಚಾಗಿ ಕಾಫಿ, ಟೀ ಪುಡಿ, ಬೆಣ್ಣೆ, ತುಪ್ಪ, ಹಾಲು, ಮೀನು ಹಾಗೂ ಅಡುಗೆಎಣ್ಣೆ ಪದಾರ್ಥಗಳಲ್ಲಿ ಕಲಬೆರಕೆ ಅಂಶವನ್ನು ಪತ್ತೆ ಹಚ್ಚಿದೆ. ಹೋಂ ಮೇಡ್ ಚಾಕಲೇಟ್, ಮಾಂಸ, ಕೋಳಿ ಉತ್ಪನ್ನ, ಹಣ್ಣು, ತರಕಾರಿ, ಸಿರಿಧಾನ್ಯ, ಜೆಲ್ಲಿ, ಖಾದ್ಯ ಎಣ್ಣೆ, ಜೇನುತುಪ್ಪ, ಬೆಲ್ಲ, ಖಾರದ ಪುಡಿ, ಮಸಾಲೆ ಪದಾರ್ಥ, ದ್ವಿದಳ ಧಾನ್ಯ, ಬೇಕರಿ ಉತ್ಪನ್ನ, ಸಿಹಿತಿಂಡಿ, ಪಾನೀಯ, ಸಂಸ್ಕರಿಸಿದ ಆಹಾರ ಹಾಗೂ ಹೆಪುಪಗಟ್ಟಿದ ಆಹಾರದಲ್ಲಿಯೂ ಕಲಬೆರಕೆ ಅಂಶಗಳನ್ನು ಪತ್ತೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಕಲಬೆರಕೆ ಗುರುತಿಸುವುದು ಸವಾಲಾಗಿ ಪರಿಣಮಿಸಿದೆ.
ಹೊರಗಿನ ಆಹಾರ ಜಾಗ್ರತೆ ಅಗತ್ಯ: ಬದಲಾದ ಜೀವನಶೈಲಿಯಿಂದಾಗಿ ಮನೆ ಆಹಾರಕ್ಕಿಂತ ಹೊರಗಿನ ಆಹಾರ ಸೇವನೆ ಹೆಚ್ಚಾಗಿದೆ. ಇವುಗಳಲ್ಲಿ ಜಂಕ್ ಫುಡ್ ಸೇವಿಸುವವರ ಸಂಖ್ಯೆ ಜಾಸ್ತಿ ಇದೆ. ಜನರ ಬಾಯಿರುಚಿ ಗೀಳನ್ನು ಬಂಡವಾಳ ಮಾಡಿ ಕೊಂಡಿರುವ ಕೆಲ ಹೋಟೆಲ್ ಮತ್ತು ರಸ್ತೆಬದಿ ಆಹಾರ ತಯಾರಿಸುವ ಮಂದಿ ಜನರನ್ನು ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಹಾಗೂ ಬಣ್ಣಗಳನ್ನು ಬಳಸುತ್ತಿದ್ದಾರೆ. ಇಂತಹ ಆಹಾರ ಸೇವನೆ ಗಂಭೀರ ಸಮಸ್ಯೆಗೆ ಕಾರಣವಾಗಲಿದೆ. ಹಾಗಾಗಿ ಹೊರಗಿನ ಆಹಾರ ಸೇವನೆಯಲ್ಲಿ ಎಚ್ಚರವಿರಲಿ ಎನ್ನುತ್ತಾರೆ ತಜ್ಞರು.
ಹಿನ್ನೆಲೆ: 2018ರ ಡಿಸೆಂಬರ್ 20ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ತದನಂತರ 2019ರಿಂದ ಪ್ರತಿ ವರ್ಷ ಜೂನ್ 7ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಜನರಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.
~ ಪಂಕಜ ಕೆ.ಎಂ. ಬೆಂಗಳೂರು