“ ಹಿಂದುಗಳ ಸ್ವಾಭಿಮಾನದ ಪ್ರತೀಕ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ರಾಜಗೋಪುರ ಆರಂಭ 27ನೇ ಜುಲೈ 1397,ಇಂದಿಗೆ 626 ವರ್ಷಗಳು”
ಬೇಲೂರಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಬಳಿಗೆ ಹೋಗುತ್ತಿದ್ದಂತೆ ಎಲ್ಲರ ಕಣ್ಮನ ಸೆಳೆಯುವುದು ಆಕಾಶವನ್ನು ಚುಂಬಿಸುವ ರೀತಿಯಲ್ಲಿ ನಿಂತಿರುವ ರಾಜ ಗಾಂಭೀರ್ಯದಿಂದ ಕಂಗೊಳಿಸುತ್ತಿರುವ ಆಕರ್ಷಣೀಯವಾದ ರಾಜಗೋಪುರ. ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ರಾಜಗೋಪುರದ ಹಿನ್ನೆಲೆಯೇ ಬಹು ರೋಚಕವಾಗಿದೆ, ಈ ಗೋಪುರವನ್ನು ಕಟ್ಟಿಸಿದ್ದು ಇಂದಿಗೆ 626 ವರ್ಷಗಳ ಹಿಂದೆ,ವಿಜಯನಗರ ಸಾಮ್ರಾಜ್ಯದ ಎರಡನೇ ಹರಿಹರನ ಮಹಾಮಂತ್ರಿ ಗುಂಡಪ್ಪ ದಂಡನಾಯಕ, 27ನೇ ಜುಲೈ 1397.(ಪಂಚದಶ ಈಶ್ವರಿ ನಾಮ ಸಂವತ್ಸರ ಶ್ರಾವಣ ಶುಕ್ಲ ತೃತೀಯ ಭಾನುವಾರ)
ಗೋಪುರದ ಇತಿಹಾಸ
ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯವನ್ನು ಉದ್ಘಾಟನೆ ನಡೆದಿದ್ದು ಶನಿವಾರ 1117 ಮಾರ್ಚ್ 10. (ಶಕ ವರ್ಷ ಸಾವಿರದ ಮುವ್ವತ್ತೊಂಬತ್ತೆನೆಯ ಹೇಮಳಂಬಿ ಸಂವತ್ಸರ ಚೈತ್ರ ಶುದ್ಧ ಪಂಚಮಿ ವಡ್ಡವಾರ). ಅಂದರೆ ಸರಿಸುಮಾರು ದೇವಾಲಯವನ್ನು ಕಟ್ಟಿ 280 ವರ್ಷಗಳ ವರೆಗೆ ಗೋಪುರವು ಇರಲಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆರಂಭ ಶಾಸನ ಸಂಖ್ಯೆ 16(1117ನೆ ಇಸವಿ) 71ನೇ ಪ್ಯಾರಾದಲ್ಲಿ ಹಾಗು ಎರಡನೇ ಬಲ್ಲಾಳನ ಕಾಲದ ಬೇಲೂರು ಶಾಸನ 168(1200ನೇ ಇಸವಿ ಆಸುಪಾಸು)185-189ನೇ ಸಾಲಿನಲ್ಲಿ, ಈ ರೀತಿ ಬಣ್ಣಿಸಲಾಗಿದೆ "ಗಗನ ಮಂಡಲದಂತೆ ಭಗಣ ಸಂಕ್ರಾಂತಮುಂ, ಬಹುಕೂಟಕೊಟಿಘಟಿತಕಳಶವಿಳಸಿತಮುಂ, ಬಹುಭೂಮಿಕೋಧ್ಬಾಸಿತ ಶ್ರೀಮನ್ ಮಹಾಪ್ರಾಸಾದದೋಳ್....". ಅಂದರೆ ದೇವಾಲಯದ ಆರಂಭದಲ್ಲಿ ಅನೇಕ ಅಂತಸ್ತಿನ ಗೋಪುರವು ಇದ್ದಿತ್ತು ಎಂದು ಬಹಳ ಸ್ಪಷ್ಟವಾಗಿ ತಿಳಿಸಿದೆ.
1311 ಮತ್ತು 1327 ನೇ ಇಸವಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಮೇಲೆ ಉತ್ತರದ ಸುಲ್ತಾನರ ಭೀಕರ ದಾಳಿ ನಡೆಯುತ್ತದೆ. ಮೂರನೇ ವೀರಬಲ್ಲಾಳ 1342ನೇ ಇಸವಿಯಲ್ಲಿ ಮಧುರೆ ಬಳಿ ಹತ್ಯೆಗೊಳಾಗುತ್ತಾನೆ. ಅಲ್ಲಿಗೆ ಹೆಚ್ಚು ಕಡಿಮೆ ಹೊಯ್ಸಳ ಸಾಮ್ರಾಜ್ಯ ಕೊನೆಯಾಯಿತು. ಮಹಮದೀಯ ಅರಸರು ತಮ್ಮ ಮತವನ್ನು ಬಲವಂತವಾಗಿ ಪ್ರಜೆಗಳ ಮೇಲೆ ಹೇರುವ ಯತ್ನ ಮಾಡಿದರು. ಉತ್ತರ ಭಾರತದಲ್ಲಿ ಅವರ ಈ ಯತ್ನಗಳನ್ನು ತಡೆಗಟ್ಟಲು ಸರಿಸಮವಾದ ಬಲ ಯಾವ ರಾಜನಿಗೂ ಇರಲಿಲ್ಲ. ದಕ್ಷಿಣದಲ್ಲಿ ತಡವಾಗಿಯಾದರೂ ತಮ್ಮ ಧರ್ಮಕ್ಕೆ ಚ್ಯುತಿಬಂದಿದೆ ಎಂಬುದನ್ನು ಮನಗಂಡ ಅರಸರು, ಸಾಮಂತರು ಪ್ರಜೆಗಳು ದೃಢಮನಸ್ಸಿನಿಂದ ಒಗ್ಗಟ್ಟಾಗಿ ಅದನ್ನು ತಡೆಯುವ, ಧರ್ಮರಕ್ಷಣೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದರು. ಎಂತಲೇ ಈ ಕಾಲದಲ್ಲಿ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪಗಳಲ್ಲಿ ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಯಿತು. 1336ನೇ ಇಸವಿಯಲ್ಲಿ ಶ್ರೀ ವಿದ್ಯಾರಣ್ಯರ ಕೃಪಾ ಆಶೀರ್ವಾದದಿಂದ ಹಾಗೂ ಹಕ್ಕ-ಬುಕ್ಕರೆಂಬ ಮಹಾನ್ ತೇಜಸ್ವಿ ಯುವ ನಾಯಕರ ಮುಂದಾಳತ್ವದಲ್ಲಿ ಇಂದಿನ ಹಂಪಿಯಲ್ಲಿ ವಿಜಯನಗರ ಎಂಬ ಮಹಾನ್ ಸಾಮ್ರಾಜ್ಯದ ಆರಂಭವಾಯಿತು.
ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮನ್ನು ತಾವು ಹಿಂದೂರಾಯ ಸುರತ್ರಾಣ "ಪ್ರಜೆಗಳನ್ನು ದೇವರಂತೆ ರಕ್ಷಿಸುವ ಹಿಂದೂರಾಯ" ಎಂದು ಕರೆಸಿಕೊಂಡು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕಂಕಣ ಭದ್ದರಾದರು. ಮಹಮ್ಮದೀಯರ ದಾಳಿಯಿಂದ ನಾಶವಾದ ಅನೇಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವು ಪುನಾರಾರಂಭಗೊಂಡಿತು. ಇದು "ಎರಡನೇ ಹರಿಹರ"ನ (1377-1404) ಕಾಲದಲ್ಲಿ ಮತ್ತಷ್ಟು ವೇಗವನ್ನು ಪಡೆದು ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಕೂಡ "ಎರಡನೇ ಹರಿಹರ" ಕಾಲದಲ್ಲಿ(1377-1404) ಜೀರ್ಣೋದ್ಧಾರಗೊಂಡಿತು. ಎರಡನೇ ಹರಿಹರನ ದಂಡ ನಾಯಕನಾದ ಶ್ರೀ ಗುಂಡಪ್ಪ ದಂಡನಾಯಕನು ಸಾವಿರಾರು ಯಾತ್ರಾರ್ತಿಗಳನ್ನು ಆಕರ್ಷಿಸುತ್ತಿರುವ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಮಹಾದ್ವಾರ ಮತ್ತು ರಾಜ ಗೋಪುರವನ್ನು ನಿರ್ಮಿಸಿದನು.
ಎರಡನೇ ಹರಿಹರನ ದಂಡ ನಾಯಕನಾದ ಶ್ರೀ ಗುಂಡಪ್ಪ ದಂಡನಾಥ ನಡೆಸಿಕೊಟ್ಟ ಮೂರು ಪ್ರಮುಖ ಕಾರ್ಯಗಳೆಂದರೆ
೧) ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಜೀರ್ಣೋದ್ಧಾರ
೨) ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಪೂಜೆ ಪುನಸ್ಕಾರಗಳು ಮೊದಲಿನಂತೆ ಆಚಂದ್ರಾರ್ಕ್ಕಸ್ಥಾಯಾಗಿ ನಡೆಸಲು ವ್ಯವಸ್ಥೆ
೩) ರಾಜ ಗೋಪುರದ ನಿರ್ಮಾಣ
ಮೊದಲೇ ನಿರ್ಮಿಸಿದ್ದ ರಾಜಗೋಪುರವನ್ನು ಮತ್ತೇಕೆ ನಿರ್ಮಿಸಲಾಯಿತು ಎಂಬ ಪ್ರಶ್ನೆಗೆ ಆಧಾರವಾಗಿ ಸಿಗುವುದು, ಗುಂಡಪ್ಪ ದಂಡನಾಯಕನ ಕೀರ್ತಿಯನ್ನು ಆಚಂದ್ರಾರ್ಕವಾಗಿ ನಿಲ್ಲಿಸಿರುವ ಬೇಲೂರಿನ ಶಾಸನ ಸಂಖ್ಯೆ 144. ಅಂದಿನ ಧಾರ್ಮಿಕ ಸಾಮಾಜಿಕ ಐತಿಹಾಸಿಕ ವಿಚಾರಗಳನ್ನು ತಿಳಿಸಿರುವ ಶಾಸನ ಸಂಖ್ಯೆ 144, ಬೇಲೂರಿನ ಕೈಸಾಲಿಯಲ್ಲಿ ಕಾಣಬಹುದು. ಬೇಲೂರು 144ನೇ ಶಾಸನದಲ್ಲಿ "ಕಲುಬುರುಗೆಯ ತುರುಕ ಗಂಗಾಶಲಾರನು ಬಂದು ಮುರಿದು ಸುಡಿಸಿ ದಂತಹ ಬಾಗಿಲುವಾಡದ ಗೋಪುರವನು ಏಳು ನೆಲೆಯಾಗಿ ಮಾಡಿಸಿ" ಎಂಬ ವಿಚಾರ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಸರಳ ಅರ್ಥ ಬಹುಮನಿ ಅರಸು ಮನೆತನದ ಸೈನ್ಯ ಗಂಗಾಶಲಾರನ ನೇತೃತ್ವದಲ್ಲಿ ಬೇಲೂರಿಗೆ ಬಂದು ಲಗ್ಗೆ ಹಾಕಿ ದೇವಸ್ಥಾನದ ಬಾಗಿಲುವಾಡವನ್ನು ಸುಟ್ಟಿತೆಂದು ತಿಳಿಸಿವೆ. ಹೀಗೆ ಸುಡಿಸಿದ ಬಾಗಿಲ್ವಾಡದ ಗೋಪುರವನ್ನು ಗುಂಡಮದಂಡನಾಥನು ಏಳು ನೆಲೆಯಾಗಿ ಮಾಡಿಸುವುದರೊಂದಿಗೆ ಭವ್ಯವಾದ ಗೋಪುರವನ್ನು ದೇವಾಲಯಕ್ಕೆ ಅರ್ಪಿಸಿದನು. ಇದನ್ನು ಶಾಸನದಲ್ಲಿ ಈ ರೀತಿ ಉಲ್ಲೇಖಿಸಿದೆ ,"ಈ ಗೋಪುರವು ಮೇರು ಪರ್ವತ ದ್ವಾರಿಕಾ ನಗರದ ಗೋಪುರ, ಮಯ ನಿರ್ಮಿತ ಪಾಂಡವ ಸಭಾಗ್ರಹ, ಸಖಂಡಗಳನ್ನೂಳಗೊಂಡ ಸಾಗರ, ಸಪ್ತ ಪರ್ವತಗಳನ್ನೂಳಗೊಂಡ ಭೂಮಿ, ಸಪ್ತಲೋಕ, ಸಪ್ತರ್ಷಿ ಸಪ್ತಾಶ್ವಗಳನ್ನು ಹೋಲುತ್ತದೆ".
ಶ್ರೀ ಗುಂಡಪ್ಪ ದಂಡನಾಥನು ನಡೆಸಿಕೊಟ್ಟ ಮತ್ತೆರಡು ಮಹತ್ಕಾರ್ಯಗಳೆಂದರೆ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಜೀರ್ಣೋದ್ಧಾರ ಹಾಗೂ ಪೂಜೆ ಪುನಸ್ಕಾರಗಳು ಮೊದಲಿನಂತೆ ನಡೆಸುವ ವ್ಯವಸ್ಥೆ ಇದನ್ನು ಸಹ ಅದೇ ಬೇಲೂರು ಶಾಸನ 144ರಲ್ಲಿ ಈ ರೀತಿ ತಿಳಿಸಲಾಗಿದೆ
“ಶ್ರೀ ವಿಷ್ಣುವರ್ಧನ ಬಿಟ್ಟೀ ದೇವರಾಯರು| ಕಲ್ಪಿಸಿದಂಥಾ | ಅಂಗರಂಗಭೋಗ ಮೊದಲಾಗುತ್ತಂ ವಿದ್ದಂಥಾ| ಶ್ರೀಕಾರ್ಯ್ಯ ಕಾಲಾಂತರದಿಂದ ಸಂಕೋಚವಾಗಿದ್ದದನೂ ಜೀರ್ಣೋದ್ಧಾರಂ ಮಾಡಿ| ಆ ಬಿಟ್ಟಿದೇವರಾಯರು ಪೂರ್ವದಲಾ ಕಲ್ಪಿಸಿದ್ದಂಥಾ ದೇವರ ವೇದ ಪಾರಾಯಣ| ಪಂಚಿಕೇಶ್ವರ| ಶ್ರೀ ಪಂಚರಾತ್ರ| ಶಾಸ್ತ್ರ ಮಂತ್ರ ಸಿದ್ದಾಂತ ಮಾರ್ಗ್ಗ ಸಕಲೊಭೋಗ ನಿತ್ಯಾರ್ಚನ| ಮಂತ್ರಾಸನ| ಸ್ನಾನಸನ| ಅಲಂಕಾರಸನ| ಯತ್ರಾಸನ| ಭೋಜ್ಯಾಸನ ಶೈಯಾಸನ| ಅಪಚಾರಿಕ| ಶಾಂಸ್ಪರ್ಷಕ |ಹೃದಯಂಗಮ |ಚತುಷಷ್ಟ್ಯಪಚಾರ| ಷಟ್ಕಳಾರ್ಚನೆ| ನಿತ್ಯ| ಹೋಮ |ನಿತ್ಯೋತ್ಸವ |ಪಕ್ಷೋಛ್ಜವ|ಮಾಸೋಛ್ಛವ|ಸಂವಛ್ಛರೋಛ್ಛವ| ಪವಿತ್ರೋಛ್ಛವ| ಸ್ವಾರ| ಶಯನೋತ್ಥಾನ| ಜಯಂತ್ಯೋಛ್ಛವ| ರಾಮಕ್ರುಷ್ಣ ಜುಲ್ಮೋಛ್ಛವ |ವಿಮಾನ| ಕಮಲ| ಕಲ್ಹಾರೋಛ್ಛವ| ವಸಂತೋಛ್ಛವ| ಡೋಳಾರೋಪಣ| ದೀಪೋಛ್ಛವ| ಮಾರ್ಗಶಿರುಷೋಛ್ಛವ| ಮಹೋಛ್ಛವ |...ಕ್ತೋಛ್ಛವ| ನವರತ್ನ ಸ್ಥಾಪನ| ನವ ವಸ್ತ್ರಾಭರಣ| ವಿಶೇಷ ಸಮಾರಾಧನ| ಸಕಲ ಫಲ ವಸ್ತು ದರುಶನ| ಮಾ.ತ ದರುಶನ| ಮಧುಪೂರಣ| ಬೀಜಪುರಣ| ಚಾತುರಂಗಬಲಾರ್ಚ್ಚನಾ| ದರ್ಪಣ ಪುಷ್ಪಮಾಲಾ ವಲೋಕನ| ನೃತ್ಯಗೀತ ವಿನೋದಾಸ್ಥಾನ ಮಂಟಪ| ಧ್ಯಾಂನ ಪರ್ವತ| ಕೋಶಪ್ರವೇಶನ| ವಿಶುವಯನಾ| ಸಂಕ್ರಮ ಸ್ಸಪನ| ನೀರಾಜನ| ನಿತ್ಯ ನೈಮಿತ್ತಿಕಪ್ರಾಯಶ್ಚಿತ್ತ ಶಾಂತಿಹೋಮ ಸಮಸ್ತ ಪರಿವಾರಾರ್ಚ್ಚನಾದಿಗಳಹ| ಸಮಸ್ತ ಉಚ್ಛವ| ಸರ್ವವಿನಿಯೋಗಂಗಳೂ| ಆಚಂದ್ರಾರ್ಕ್ಕಸ್ಥಾಇಯಾಗಿ ನಡೆವ ಹಂಗೆ ಕಟ್ಟಳೆಯನೂ ಮಾಡಿ ಕಲುಬುರಗೆಯ ತುರುಕ ಗೆಂಗಶಲಾರನು| ಬಂದು ಮುರಿದು ಸುಡಿಸಿದಂಥಾ ಬಾಗಿಲುವಾಡದ ಗೋಪುರವನು ಏಳು ನೆಲೆಯಾಗಿ ಮಾಡಿಸಿ|| ಇದಂ ವಿಜಯತೇ ಪುರೋಭವನ ಭೂಷಣ ಶಾಂರ್ಗ್ಗಿಣ:.... ಗೋಪುರಂ”. ಇದರ ಸರಳ ಅರ್ಥ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಿಸಿ ಅಲ್ಲಿ ಸಂಕೋಚಗೊಂಡಿದ್ದ ವಿಷ್ಣುವರ್ಧನ ದೊರೆಯ ಕಾಲದಲ್ಲಿ ನಡೆಯುತ್ತಿದ್ದಂತಹ ಅನೇಕ ಅಂಗರಂಗಭೋಗ ವೈಭವವನ್ನು ಪುನಃ ನಡೆಯುವಂತೆ ಏರ್ಪಡಿಸಿ, ದೇವಸ್ಥಾನಕ್ಕೆ ಚಿನ್ನದ ಕಳಶವನ್ನಿಡಿಡಸಿದನು ಮತ್ತು ದೇವಸ್ಥಾನವನ್ನು ಸುಸ್ಥಿತಿಗೆ ತಂದನು. ರಾಜ ವಿಷ್ಣುವರ್ಧನನಿಂದ ಆರಂಭಿಸಲ್ಪಟ್ಟಿದ್ದ, ನಿಂತು ಹೋಗಿದ್ದ ದಾನದತ್ತಿಗಳನ್ನು ಪುನರ್ ಸ್ಥಾಪಿಸಿ, ಕಾಲಂತರದಲ್ಲಿ ಸಂಕುಚಿತಗೊಂಡಿದ್ದ ಪೂಜಾ ವಿಧಿ ವಿಧಾನಗಳನ್ನು ಉತ್ಸವ ವಾದಿ ಇತ್ಯಾದಿಯಾಗಿ ನಡೆಸಬೇಕಾದ ಕೈಂಕರ್ಯಗಳನ್ನು (ಒಟ್ಟು 67ಬಗೆ)ವಿವರವಾಗಿ ಸೂಚಿಸಿ ಶಾಸನವನ್ನು ಹೊರಡಿಸಿದ್ದಾನೆ.
ಭಾನುವಾರ ಜುಲೈ 27 1997 ನೇ ಇಸವಿ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಹೊಯ್ಸಳ ಸಾಮ್ರಾಜ್ಯದ ಮೇಲೆ ಅನ್ಯಮತೀಯರ ದಾಳಿ ನಡೆದರೂ ಸಹ ಬೇಲೂರಿನ ರಾಜಗೋಪುರ ಹಿಂದುಗಳ ಸ್ವಾಭಿಮಾನದ ಪ್ರತೀಕವಾಗಿ, ತನ್ನ ಸಂಸ್ಕೃತಿ ಮತ್ತೆ ಆಚರಣೆಗಳ ಮೇಲೆ ದಾಳಿ ನಡೆದಾಗ ಫೀನಿಕ್ಸ್ ಹಕ್ಕಿಯಂತೆ ಮೈದೊಡವಿಕೊಂಡು ಹಿಂದೂ ಧರ್ಮ ಹೇಗೆ ಪುಟ್ಟಿದೇಳುತ್ತದೆ ಎಂದು ತೋರಿಸುವ ಒಂದು ಸಂಕೇತ. ಹೊಯ್ಸಳ ಸಾಮ್ರಾಜ್ಯವನ್ನು ನಾಶ ಮಾಡಿದರು ಅದರ ಹಿಂದಿನ ಪ್ರೇರಕ ಧರ್ಮದ ಶಕ್ತಿಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು, ಸೃಷ್ಟಿಯಲ್ಲಿ ವಿನಾಶದ ಶಕ್ತಿಗಿಂತ ಸೃಷ್ಟಿಯ ಶಕ್ತಿಯೇ ಹೆಚ್ಚು ಬಲಶಾಲಿ ಎಂಬುದನ್ನು ಜಗತ್ತಿಗೆ ಸಾರಿ ತಿಳಿಸುತ್ತಿರುವುದು ಬೇಲೂರಿನ ಈ ರಾಜಗೋಪುರ.
626 ವರ್ಷಗಳ ಹಿಂದೆ ನಿರ್ಮಿಸಿದ ಈ ಮಹಾ ಗೋಪುರದ ಇತಿಹಾಸ,ನೀಡಿರುವ ಸಂದೇಶವನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಹಾಗು ಇಂತಹ ಮಹಾನ್ ಕಾರ್ಯವನ್ನು ನಡೆಸಿಕೊಟ್ಟ ಗುಂಡಪ್ಪ ದಂಡನಾಯಕನನ್ನು ಈ ದಿನ ಸ್ಮರಿಸುವ ಮೂಲಕ ಗೌರವವನ್ನು ಸಮರ್ಪಿಸೋಣ.
ಡಾ ಎನ್ ರಮೇಶ್.
9448066374