ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆ ನೀಡಿ ಫಲನುಭವಿಗಳ ಖಾತೆ ಹಣ ವರ್ಗಾವಣೆ ಮಾಡಿದರು. ಸದ್ಯ ಎರಡು ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಇಲ್ಲಿದೆ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ನೀಡುವ ವೆಬ್ಸೈಟ್ ಲಿಂಕ್
https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದು. ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ವರ್ಷ, ತಿಂಗಳು ಹಾಗೂ ಪಡಿತರ ಚೀಟಿಯ ಆರ್ಸಿ ಸಂಖ್ಯೆಯನ್ನು ನಮೂದು ಮಾಡಬೇಕು. ಆ ಬಳಿಕ ಗೋ ಎಂಬ ಆಯ್ಕೆಯನ್ನು ಮಾಡಿದರೆ ಮಾಹಿತಿ ಲಭ್ಯವಾಗಲಿದೆ.
ಅನ್ನಭಾಗ್ಯ ಹಣ ವರ್ಗಾವಣೆ ಖಚಿತ ಪಡೆಸಿಕೊಳ್ಳಲು ವೆಬ್ಸೈಟ್ ಪರಿಶೀಲಿಸಿದಾಗ ಅದರಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಕುಟುಂಬ ಸದಸ್ಯರು, ಪಡಿತರ ಚೀಟಿ ವಿಧಾನ, ಅಕ್ಕಿ ಅರ್ಹತೆ ಪ್ರಮಾಣ (ಇಂತಿಷ್ಟು ಕೆ.ಜಿ) ಹಾಗೂ ಹಣ ವರ್ಗಾವಣೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಮೊಬೈಲ್ ಸಂದೇಶ ಕೂಡ ಬರಲಿದೆ
ಅನ್ನಭಾಗ್ಯ ಯೋಜನೆಯ ಹಣವು ಕುಟುಂಬ ಮುಖ್ಯಸ್ಥರ ಖಾತೆಗೆ ಬರಲಿದೆ. ಒಂದು ಕೆಜಿ ಅಕ್ಕಿಗೆ 36 ರೂಪಾಯಿ ಅಂತೆ ತಲಾ ಐದು ಕೆಜಿ ಅಂತೆ ಕುಟುಂಬ ಸದಸ್ಯರ ಒಟ್ಟಾರೆ ಹಣವು ಖಾತೆಗೆ ಜಮೆಯಾಗಲಿದೆ. ಇನ್ನು ಹಣ ಜಮೆಯಾದ ಕೂಡಲೇ ಬ್ಯಾಂಕ್ನಿಂದ ಸಂದೇಶ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Tags
ರಾಜ್ಯ