ಜಾನಪದ ಜಂಗಮ ಮಲೆನಾಡ ಗಾಂಧಿ ಡಾ.ಎಸ್.ಕೆ.ಕರೀಂಖಾನ್

ಜಾನಪದ ಲೋಕವನ್ನು ಕಟ್ಟಿ ಬೆಳೆಸಿದ ದಿಗ್ಗಜರಲ್ಲಿ ಡಾ.ಎಸ್.ಕೆ.ಕರೀಂಖಾನ್‌ ಅಗ್ರಗಣ್ಯರು. ಜನಪದ ಗೀತೆಗಳ ಗಾಯನ ಜೊತೆಗೆ ಜನಪದ ಸಾಹಿತ್ಯ ಸಂಗ್ರಹದಿಂದ ೪೦-೫೦ರ ದಶಕದಲ್ಲಿ ಮನೆ ಮಾತಾಗಿದ್ದ ಡಾ.ಎಸ್.ಕೆ.ಕರೀಂಖಾನ್ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ೧೯೦೪ರಲ್ಲಿ ಜನಿಸಿದರು. ತಂದೆ ಆಫ್ಭಾನಿಸ್ಥಾನದ ಕಾಬೂಲ್‌ನ ವೀರ ಯೋಧ ರೆಹಮಾನ್‌ಖಾನ್‌ ತಾಯಿ ಸೌದಿ ಅರೇಬಿಯಾ ಮೂಲದ ಜೈನಬಿ. ಇದೇ ೧೯೦೪ರಲ್ಲಿ ಜನಿಸಿದ ಹಾಸನ ಜಿಲ್ಲೆಯ ಮತ್ತೋರ್ವ ಜನಪದ ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಹೇಮಾವತಿ ತೀರದ ಗಾಂಧಿ ಎಂದು ಕರೆಯಲ್ಪಟ್ಟರೆ ಮಲೆನಾಡ
ಗಾಂಧಿ ಎಂದು ಕರೆಯಲ್ಪಟ್ಟವರು ಡಾ.ಎಸ್.ಕೆ.ಕರೀಂಖಾನ್‌ ಅವರು.

ಸಕಲೇಶಪುರ ಸಮೀಪದ ಅಚಂಗಿ ಚಿಕ್ಕ ಹಳ್ಳಿ. ಸಂಸ್ಕೃತದಲ್ಲಿ ಪಾಂಡಿತ್ಯ ಸಾಧಿಸಿದ್ದ  ನಾರಾಯಣಶಾಸ್ತ್ರಿಗಳ ಊರದು. ಆಗಿನ್ನು ೬ನೇ ತರಗತಿಯಲ್ಲಿದ್ದ ಸಂಸ್ಕೃತ ಕಲಿಯಬೇಕೆಂಬ ಆಸಕ್ತಿ ಇದ್ದ ಕರೀಂಖಾನ್‌ರನ್ನು ಇವರು ಶಿಷ್ಯನನ್ನಾಗಿ ಸ್ವೀಕರಿಸಿದರು. ಕನ್ನಡ ಭಾಷೆ ನಾಡು ನುಡಿ ಸಂಸ್ಕೃತಿ ಬಗ್ಗೆ ವಿಶೇಷವಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿ ಇತಿಹಾಸ, ಜಾನಪದ, ಪುರಾಣ ಮಹಾಕಾವ್ಯಗಳ ಬಗ್ಗೆ ಅಪಾರ ಪಾಂಡಿತ್ಯ ಸಿದ್ಧಿಸಿಕೊಂಡವರು. ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣ ಓದಿಕೊಂಡಿದ್ದರು. ಉರ್ದು ಸಾಹಿತ್ಯದ ಘಾಲಿಬ್, ಇಕ್ಬಾಲ್‌ರಂತಹ ಕವಿಗಳ ಪ್ರಭಾವಕ್ಕೆ ಒಳಗಾದವರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಕರ್ನಾಟಕದಲ್ಲಿ ಸುತ್ತಾಡಿ ಜನಪದ ಗೀತೆಗಳ ಸಂಗ್ರಹದಲ್ಲಿ ತೊಡಗಿಸಿಕೊಂಡರು. 
ಹತ್ತು ಸಾವಿರದ ಪದವ ಎತ್ತಿನ್ಮೇಲ್ಹೆರ‍್ಕೊಂಡು
ಮತ್ತೆ ಸಾವಿನ ಕೈಲಿ ಹಿಡಕೊಂಡು ಕೋಲೆ
ಎಂಟೂರು ಸುತ್ತಿ ಬರುತ್ತೀವಿ ಕೋಲೆ
ಹತ್ತು ಸಾವಿರ ಪದವನ್ನುಎದೆಯ ಒಳಗೂ ಮತ್ತೆ ಎಂಟು ಸಾವಿರ ಪದವನ್ನು ತಮ್ಮ ಜೋಳಿಗೆಯಲ್ಲೂ ಇರಿಸಿಕೊಂಡು ಏಳೆಂಟು ದಶಕಗಳ ಕಾಲ ನಾಡಿನಾದ್ಯಂತ ಸುತ್ತಾಡಿ ಜನಪದ ಗೀತೆಗಳಿಗೆ ಜೀವತುಂಬಿ ಹಾಡಿ ಜನಮನ ಗೆದ್ದವರು. ಕರೀಂಖಾನರ ಹಾಡಿಗೆ ಆ ಕಾಲದ ಪಂಡಿತ ಪಾಮರರೆಲ್ಲ ಮಾರು ಹೋಗಿದ್ದರು.೧೯೧೯ರ ದಿನಗಳು ಗಾಂಧಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಗೆ ಹಾಡುಗಾರಿಕೆಯಿಂದಲೇ ಧುಮುಕಿದರು. ಆ ಸಂದರ್ಭದಲ್ಲಿ ಹೊರಾಟಕ್ಕೆ ಜನರನ್ನು ಪ್ರಚೋದಿಸಲು ಉತ್ತಮ ಕಂಠ ಹೊಂದಿದವರಿಗೆ ಬೇಡಿಕೆ ಇತ್ತು. ಈ ಪ್ರತಿಭೆ ಹೊಂದಿದ್ದ ಕರೀಂಖಾನ್‌ ತಾವೇ ರಚಿಸಿದ ಎರಡು ಹಾಡುಗಳನ್ನು ಪ್ರಪ್ರಥಮವಾಗಿ ಚಿಕ್ಕಮಗಳೂರಿನ ಕಾಂಗ್ರೆಸ್ ವೇದಿಕೆಯಲ್ಲಿ ಹಾಡುತ್ತಾರೆ. ಅದಾದ ನಂತರ ಕರೀಂಖಾನರು ಹಿಂತಿರುಗಿ ನೋಡಲಿಲ್ಲ. ಗೀಗೀಪದ, ಲಾವಣಿ, ಸೋಬಾನೆ, ರಾಗಿ ಬೀಸೋ ಹಾಡುಗಳನ್ನು ತಮ್ಮ ಕಂಚಿನ ಕಂಠದಿಂದ ಹಾಡುತ್ತಾ ನಿರರ್ಗಳ ಹರಿಯುವ ತಮ್ಮ ವಾಗ್ಝರಿಯಿಂದ ಜನರನ್ನು ಹುರಿದುಂಬಿಸುತ್ತಿದ್ದರು. 
ಇದು ವೀರಭೂಮಿ ಸ್ವಾತಂತ್ರ್ಯ ಸಮರ ಭೂಮಿ
ಅಭಿಮಾನ ಜನರ ಕೆಚ್ಚೆದೆಯ ಭಟರ ಭೂಮಿ
ಅಂದು ಮೈಸೂರಿಗೆ ಬಂದಿದ್ದ ಗಾಂಧೀಜಿಯ ಸರಳತೆ ಕಂಡು ಖಾದಿ ಜುಬ್ಬಾ, ಗಾಂಧಿ ಟೋಪಿ ಧರಿಸಲು ಆರಂಭಿಸಿದ್ದು ಕೊನೆಯವರೆಗೂ ಬಿಡಲಿಲ್ಲ. ನಂತರ ಧುಮುಕಿದ್ದೇ ಏಕೀಕರಣ ಚಳುವಳಿಯಲ್ಲಿ. ಅಂದಿನ ಕಮಿಷನ್ ವರದಿ ಬಳ್ಳಾರಿ ಬೀದರ್‌ ಆಂದ್ರಕ್ಕೆ ಸೇರಬೇಕೆಂದು ಹೇಳಿತ್ತು. ಆಗ ಕನ್ನಡಕ್ಕಾಗಿ ನಾನಾ ಗಾಯಕರು ಕೈಗೊಂಡ ಚಳವಳಿಗೆ ಬೆಂಬಲ ನೀಡಿ ಜೈಲು ಸೇರಿದರು. ಇವರ ಚಲುವಿನ ಕನ್ನಡ ಕವಿತೆ:
ಚೆಲುವಿನ ಕನ್ನಡ ಹಾಡೊಂದ
ಮಿಡಿ ಮನ ವೀಣಾ ಮುದದಿಂದ
ಹರಿಯಲಿ ಕನ್ನಡ ಮಕರಂದ
ಸ್ವಾತಂತ್ರ್ಯ ಹೋರಾಟ, ಏಕೀಕರಣ ಹೊರಾಟ, ತಿರುಗಾಟ ನಡುವೆ ೫೦ ವರ್ಷ ದಾಟಿ ಕಡೆಯವರೆಗೂ ಅವಿವಾಹಿತರಾಗಿಯೇ ಉಳಿದರು. ಗಾಂಧೀಜಿ ನಂದಿಬೆಟ್ಟಕ್ಕೆ ಬಂದಿದ್ದಾಗ್ಗೆ ಅವರನ್ನು ಭೇಟಿಯಾಗಿದ್ದರು. ೧೯೪೩ರಲ್ಲಿ ಇವರ ಜನಪದ ಗೀತೆಗಳು ಪುಸ್ತಕ ಪ್ರಕಟವಾಯಿತು. ಜನಪದ ಗೀತೆಗಳ ೯ ಚಿಕ್ಕ ಚಿಕ್ಕ ಸಂಗ್ರಹಗಳನ್ನು ಪ್ರಕಟಿಸಿದರು. ತವರು, ಬಳೆಗಾರ, ಹರಕೆ, ಜೋಗುಳ, ಕಾವಲಿಯ ಹಾಡು, ಕಹಿ ಬಾಳು, ಹಗರಣ, ಬಾರುನಾ, ಗೋಳಿನ ಗಂಡ ಹೀಗೆ ಆಯಾ ಹಾಡಿನ ವಸ್ತುವಿಗೆ ತಕ್ಕಂತೆ ಶೀರ್ಷಿಕೆ ಕೊಟ್ಟಿದ್ದಾರೆ. 
ಕರೀಂಖಾನರು ೧೯೮೭ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ೧೯೯೦ರವರೆಗೆ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಪ್ರದರ್ಶಕ ಕಲೆಗಳಿಗೆ ಗಮನ ನೀಡಿ ಗಿರಿ ಜನರ ಸಂಸ್ಕೃತಿಯ ಅಧ್ಯಯನ ಅವರ ಕಲೆಗಳ ದಾಖಲಾತಿ ಅವರ ಪರಿಸರದಲ್ಲಿಯೇ ಚಿತ್ರೀಕರಿಸಿ ಜನಪದ ಪ್ರದರ್ಶನ ಕಲೆಗಳ ೨೪೦ ಗಂಟೆಗಳ ವಿಡಿಯೋ ಚಿತ್ರೀಕರಣ ಮಾಡಿದರು. ಶಿವಮೊಗ್ಗ ಜಿಲ್ಲೆಯ ಮೇಘಾನೆ ಎಂಬ ಬೆಟ್ಟದ ತುದಿಯಲ್ಲಿ ವಾಸಿಸುತ್ತಿದ್ದ ಕುಣುಬಿಗೊಂಡ ಎಂಬ ಬುಡುಕಟ್ಟು ಜನಾಂಗದ ಅಧ್ಯಯನ ಮಾಡಲು ಕಾಲ್ನಡಿಗೆಯ ಕಾರ್ಯಕ್ರಮ ಹಮ್ಮಿಕೊಂಡರು. ಹಸಲರು, ಹಾಲಕ್ಕಿಗಳು, ಸಿದ್ದಿಗಳು, ಎರವರು, ಕಾಡು ಕುರುಬರು ಸೋಲಿಗರು ಮುಂತಾದ ಬುಡುಕಟ್ಟು ಜನಾಂಗಗಳ ಸಮಗ್ರ ಜೀವನ ಕಲೆಯ ವೈವಿಧ್ಯಗಳನ್ನು ವೀಡಿಯೋ ಮಾಡಿದರು. ಹಿರಿಯಡ್ಕದ ಸಿರಿ ಜಾತ್ರೆ, ಮಾಸ್ಯಾಳದ ಚೌಡೇಶ್ವರಿ ಜಾತ್ರೆ, ಮೈಲಾರಲಿಂಗದ ಜಾತ್ರೆಗಳನ್ನು ಚಿತ್ರೀಕರಿಸಿದರು. ಕಲಾವಿದರನ್ನು ಪೋಷಿಸಲು ವಿಶೇಷ ಗಿರಿಜನ ಪ್ರಶಸ್ತಿ ನೀಡುವುದನ್ನು ಆರಂಭಿಸಿದರು. ಅವರ ಕಾಲದಲ್ಲಿ ಆರಂಭವಾದ ಬುಡಕಟ್ಟು ಜನಾಂಗಗಳ ಅಧ್ಯಯನ ಇಂದು ಜಾನಪದ ಅಧ್ಯಯನದಲ್ಲಿ ಪ್ರತ್ಯೇಕ ಶಾಖೆಯಾಗಿ ಬೆಳಯುವಷ್ಟರ ಮಟ್ಟಿಗೆ ವಿಸ್ತೃತಗೊಂಡಿದೆ. 
ಮುಂದೇನು ಕೊಟ್ಟೀತು ಮನವೇನು ತಣಿದೀತು
ಮುಂಜಾನೆ ದಾನ ಗಿರಿಯಲ್ಲ ಕೊಟ್ಟರೆ 
ಮನ ತುಂಬಿ ನಿನ್ನ ಮನೆ ತುಂಬಿ
ಹೊರಾಟ ಜಾನಪದ ಹೊರತಾಗಿ ಕರೀಂಖಾನರು ಮತ್ತೂ ತೊಡಗಿಸಿಕೊಂಡ ಕ್ಷೇತ್ರ ಸಿನಿಮಾರಂಗ. ಚಿತ್ರ ನಿರ್ಮಾಪಕ ಡಿ.ಆರ್. ನಾಯ್ಡು ಮೂಲಕ ಚಿತ್ರರಂಗ ಪ್ರವೇಶಿಸಿ ಚಿತ್ರಗಳಿಗೆ ಸಂಭಾಷಣೆ ಬರೆದರು. ೧೯೬೨ರಲ್ಲಿ ಬಿಡುಗಡೆಯಾದ ಸ್ವರ್ಣ ಗೌರಿ ಚಿತ್ರದ ನಟವರ ಗಂಗಾಧರ.. ನುಡಿಮನ ಶಿವಗುಣ,. ಕನಲಿ ಕಾದಂತ ಕಾಲನ ಕರುಣೆ.. ಬಾರೇ ನೀ ಚೆಲುವೆ.. ಗೀತೆಗಳು ಇವರಿಗೆ ಜನಪ್ರಿಯತೆ ತಂದು ಕೊಟ್ಟವು. ಜೀವನ ತರಂಗ, ಬೇವು ಬೆಲ್ಲ, ಚಂದ್ರಕುಮಾರ, ದೇವ ಮಾನವ, ದೊಂಬರ ಕೃಷ್ಣ, ರಾಜೇಶ್ವರಿ, ಪತಿತ ಪಾವನಿ, ಸೂಪರ್ ನೋವ ೪೪೫ ಮೊದಲಾಗಿ ೧೫ ಚಿತ್ರಗಳಿಗೆ ಇವರು ಸಾಹಿತ್ಯ ನೀಡಿದ್ದಾರೆ. ಉರ್ದುವಿನಿಂದ ಅನುವಾದಿತ ಕಥೆಗಳ ನಿವಾರ, ಚಾರಿತ್ರಿಕ ಕಥೆಗಳ ನೀಹಾರ ಮತ್ತು ಬಲಿದಾನಿ  ಹುಸೇನ್‌ ಚಾರಿತ್ರಿಕ ಕಾದಂಬರಿ, ಮಾತೃ ಶಾಪ ಪೌರಾಣಿಕ ಕಾದಂಬರಿ ಇವಲ್ಲದೆ ನಿಧೋರ್ಷಿ, ಶ್ರೀಕೃಷ್ಣ ಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭು ಮಾಗಡಿ ಕೆಂಪೆಗೌಡ ಐತಿಹಾಸಿಕ  ಪೌರಾಣಿಕ ನಾಟಕಗಳನ್ನು ಬರೆದಿದ್ದಾರೆ. ಪತ್ರಿಕೋಧ್ಯಮದಲ್ಲೂ ಇವರ ಹೆಜ್ಜೆಗುರುತಿದೆ. ಧಾರವಾಡದ ಲೋಕಮಿತ್ರ, ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರಾಗಿದ್ದರು. ಕರೀಂಖಾನ್‌ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರೀಂಖಾನರಿಗೆ ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಶರಣರು ಜಾನಪದ ಜಂಗಮ ಬಿರುದು ನೀಡಿ ಕರ್ನಾಟಕ ಸರ್ಕಾರ ೧೯೯೫ರಲ್ಲಿ ಜಾನಪದಶ್ರೀ,೨೦೦೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ  ಬೆಂಗಳೂರು ನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿ ಜೀಶಂಪ ಪ್ರಶಸ್ತಿ೨೦೦೧ರಲ್ಲಿ ಚಿ.ಉದಯ ಶಂಕರಚಿತ್ರ ಸಾಹಿತ್ಯ ಪ್ರಶಸ್ತಿ ನಾಡೋಜ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರು. ೧೯೮೯ರಲ್ಲಿಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ತಾ.೨೨,೨೩ ಜೂನ್ ೧೯೮೫ ಎರಡು ದಿನ ಅರಸೀಕೆರೆ ಮಾಲೇಕಲ್ಲು ತಿರುಪತಿ ಬೆಟ್ಟದಲ್ಲಿ ನಡೆದ ೩ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಾನು (ಗೊರೂರುಅನಂತರಾಜು) ಭಾಗವಹಿಸಿ ಅಧ್ಯಕ್ಷತೆ ನುಡಿ ಆಲಿಸಿದ ನೆನಪು ಇನ್ನು ಮಾಸಿಲ್ಲ.  ಹಾಸನ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿದ್ದ ಹೆಚ್.ಬಿ.ರಮೇಶ್‌ ಅವರು ಮಲೆನಾಡ ಗಾಂಧಿ ಡಾ.ಎಸ್.ಕೆ.ಕರೀಂಖಾನ್ ಎಂಬ ಕಿರು ಪುಸ್ತಕ ಪ್ರಕಟಿಸಿದ್ದಾರೆ. ಈ ಕಿರು ಹೊತ್ತಿಗೆ ಕುರಿತು  ನಾನು ಬರೆದ ಪರಿಚಯ ಬರಹ ನನ್ನ ಅನುಭಾವಮೃತ ಸೇವಾಮೃತ ಪುಸ್ತಕದಲ್ಲಿದೆ. ಜಿಲ್ಲಾ ಕ.ಸಾ.ಪ. ಮಲೆನಾಡ ಗಾಂಧಿ ಬಿರುದನ್ನಿತ್ತು ಸನ್ಮಾನಿಸಿದ ಕ್ಷಣ ತಾವು ಒಳಗೊಂಡಂತೆ ಇರುವ ಪೋಟೋಗಳೊಂದಿಗೆ ಎಚ್.ಬಿ.ರಮೇಶ್ ನುಡಿ ನಮನ ಅರ್ಪಿಸಿದ್ದಾರೆ. 
ರಾಗಿ ದೇವನೆ ಲೋಲ ಸಂಪನ್ನನೆ
ಸೋಗೆಲ್ಲ ಮುತ್ತು ನವ ರತುನ ರಾಗಿ ದೇವ
ತೂಗಿ ಬೆಳೆಯೋ ನಮ್ಮ ಹೊಲದಲ್ಲಿ
ಬದುಕಿನುದ್ದಕ್ಕೂ ಎಷ್ಟೇ ಕಷ್ಟ ಎದುರಾದರೂ ಯಾರೊಬ್ಬರ ಮುಂದೆಯೂ ಕೈ ಚಾಚದೆ ಆತ್ಮ ಗೌರವ ಕಾಯ್ದುಕೊಂಡ ಕರೀಂಖಾನರು ಸ್ವತಂತ್ರ್ಯ ಯೋಧರ ಪಿಂಚಣಿಯನ್ನು ತಿರಸ್ಕರಿಸಿದವರು. ಬದುಕಿನ ಕೊನೆಯ ದಿನಗಳಲ್ಲಿ ಧೀರ್ಘಕಾಲಿನ ಅನಾರೋಗ್ಯ ಇವರನ್ನು ಕಾಡಿತು. ಇವರು ೨೦೦೬ರ ಜುಲೈ ೨೯ರಂದು ಬೆಂಗಳೂರಿನ ಭಗವಾನ್ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 
-ಗೊರೂರು ಅನಂತರಾಜು

Post a Comment

Previous Post Next Post