ಕೃಷಿಯಲ್ಲಿ ಸಾರ್ಥಕತೆ ಕಂಡುಕೊಂಡ ಯಶೋಧಮ್ಮನ ಯಶೋಗಾಥೆ

ಜೀವನವೇ ಸಾಕೆಂದಾಗ  ಕೈ ಹಿಡಿದು ಖುಷಿಕೊಟ್ಟ  ಕೃಷಿ .

ಸಕಲೇಶಪುರ :- ಯೌವ್ವನ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ಗಂಡ ಮರಳಿ ಮನೆಗೆ ಬಂದು ಹಾಳು ಬಿದ್ದ ತೋಟಗದ್ದೆಗಳನ್ನು ನೋಡಿ   ಕೆಲಸ ಮಾಡದೆ ಎಲ್ಲಿ ಹಡಮ್ಮೆ (ಪೋಲಿ ) ತಿರುಗಿಕೊಂಡು ಹೋಗಿದ್ದೆ ಎಂದು ಕೆಟ್ಟದಾಗಿ ನನ್ನ ಬಗ್ಗೆ ಎಲ್ಲರೆದುರಿಗೆ  ಬೈಯಬಾರದು ಎಂಬ ಉದ್ದೇಶದಿಂದ ಅವತ್ತು ಶುರು ಮಾಡಿದ ಕೃಷಿ ಇವತ್ತು  ನಾನು ಹುಷಾರಿಲ್ಲದೆ   ಹಾಸಿಗೆಯಲ್ಲಿ ಮಲಗಿದರು ಒಂದು ಹೊತ್ತು ಊಟಕ್ಕೆನು ಕಮ್ಮಿ ಇಲ್ಲ. ಎಂದು ಮಾತು ಶುರು ಮಾಡುವ ಹೆತ್ತೂರಿನ  ಯಶೋದರ . ತಮ್ಮ ಜೀವನದ ಕಷ್ಟದ ದಿನಗಳನ್ನು ಎಳೆಯಳೆಯಾಗಿ ಮಾತಿನಲ್ಲಿ ಬಿಚ್ಚಿಡುತ್ತಾ ಹೋದಾಗ ಎದುರಿಗೆ ಕುಳಿತವರ ಕಣ್ಣುಗಳು ತಮಗೆ ಅರಿವಿಲ್ಲದಂತೆ ಕಣ್ಣೀರು ಸುರಿಸುವುದಂತು   ಕಂಡಿತಾ ನಿಜ.

ಕೃಷಿಯಲ್ಲಿ ಸಾರ್ಥಕತೆ ಕಂಡುಕೊಂಡ ಯಶೋಧಮ್ಮ

ಹೌದು, ಹೆತ್ತೂರಿನ ಪ್ರಕೃತಿ ಬಡಾವಣೆಯಲ್ಲಿ ವಾಸವಾಗಿರುವ ಈ ಒಂಟಿ ಜೀವಕ್ಕೆ ಮಗನೇ ಆಧಾರ. ಸುಮಾರು 25  ವರ್ಷಗಳ ಹಿಂದೆ ಸೋಮವಾರಪೇಟೆಯ ತಾಕೇರಿ ಎಂಬ ಊರಿನಿಂದ ಮದುವೆ ಆಗಿ ಜೀವನದ ಬಗ್ಗೆ ಬಣ್ಣ ಬಣ್ಣದ ಕನಸುಗಳ ಕಣ್ತುಂಬಿ ಬಂದ ಇವರಿಗೆ  3 ವರ್ಷದೊಳಗೆ ದೊಡ್ಡ ಆಘಾತ ಒಂದು ಕಾದಿತ್ತು . ಒಂದು ವರ್ಷದ ಎಳೆ ಗಂಡು ಕೂಸನ್ನು  ಲೆಕ್ಕಿಸದೆ ಕುಟುಂಬ ಕಲಹದಿಂದ  ಗಂಡ ಮನೆ ಬಿಟ್ಟು  ಹೋಗಿದ್ದರು. ಎಲ್ಲಿಯೂ ಹುಡುಕಿದರೂ,ಯಾವ ಪೊಲೀಸ್ ಸ್ಟೇಷನ್ ಗೆ ದೂರು ಕೊಟ್ಟರು,ಉಪವಾಸ ಮಾಡಿ ದೇವರಿಗೆ ಹರಕೆ ಹೊತ್ತರು ಕೂಡ ಪತಿರಾಯನ ಸುಳಿವೇ ಸಿಗಲಿಲ್ಲ. ಇತ್ತ ಬಿದ್ದು ಹೋಗುವಂತಿದ್ದ ಮನೆ,ಎಳೆ ಕೂಸು, ಗಂಡ ಮಾಡಿದ ಸಾಲ ಮಾತ್ರ ಇವರ ಪಾಲಿಗೆ ಇತ್ತು. ಜೊತೆಗೆ ಗಂಡನ ಪಾಲಿನ  ಕೃಷಿ ಜಮೀನು ಕೂಡ ಪಾಳು ಬಿದ್ದಿತ್ತು. ಮುಂದಿನ ಜೀವನ ಹೇಗೆ ಎಂದು ಯೋಚಿಸುತ್ತಾ ಕಣ್ಣೀರಲ್ಲಿ ಕೈ ತೊಳೆಯುವಾಗ  ಏನು ಮಾಡಬೇಕು ಎಂಬ ದಿಕ್ಕು ತೋಚದಂತಹ ಮನಸ್ಸಿಗೆ ಜೀವನವೇ ಬ್ಯಾಡವೆನಿಸಿದಾಗ ಅದೊಂದು ಯೋಚನೆ ಅವರ ಜೀವನದ ದಿಕ್ಕಲ್ಲಿ ಬದಲಾಯಿಸಿತು.


ಯಶೋದವರು ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅವರು ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಪ್ರಗತಿಪರ ಕೃಷಿಕರಾಗಿ ಸಮಗ್ರ ಕೃಷಿ ಅಳವಡಿಸಿಕೊಂಡು ಕೃಷಿ ಇಲಾಖೆಯ ತರಬೇತಿಗಳಲ್ಲಿ ಅಧ್ಯಯನ ಪ್ರವಾಸಗಳಲ್ಲಿ ಪಾಲ್ಗೊಂಡಿರುತ್ತಾರೆ. ಇವರ ಜೀವನ ಇತರರಿಗೂ ಮಾರ್ಗದರ್ಶನವಾಗಿರಲಿ.  - ಕೇಶವಮೂರ್ತಿಕೃಷಿ ಅಧಿಕಾರಿಗಳು,ಹೆತ್ತೂರು ಕೃಷಿ ಇಲಾಖೆ 
 ನಾನು ಮನೆ ಬಿಟ್ಟು ಹೋದ ಕೂಡಲೇ ನನ್ನ ಪಾಲಿನ ಜಮೀನನ್ನು ಈತರ ಹಾಳು ಬಿಟ್ಟಿದ್ದೀಯಲ್ಲ. ಕೆಲಸವನ್ನು ಮಾಡದೆ ಇಲ್ಲಿ ಹಡಮ್ಮೆ(ಪೋಲಿ ) ತಿರುಗಿಕೊಂಡು ಹೋಗಿದ್ದೆ. ಎಂದು ಕೇಳಿದರೆ ನನ್ನ ಮತ್ತು ನನ್ನ ಮಗನ ಪರಿಸ್ಥಿತಿ ಏನಾಗುತ್ತದೆ.? ಎಂಬುದನ್ನು ಯೋಚಿಸಿ  ಅವರು ಮರಳಿ ಮನೆಗೆ ಬಂದಾಗ ನಾನು ಮಾಡಿದ ತೋಟ,ಗದ್ದೆಯನ್ನು ನೋಡಿ ನನ್ನನ್ನು ದಿಟ್ಟಿಸಿ ನೋಡುವ ಬದಲು  ಪ್ರೀತಿಯಿಂದ ತಲೆತಗ್ಗಿಸಿ ನೋಡುವಂತಾಗಬೇಕು . ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳು ನನ್ನ ಪತಿರಾಯರಿಂದ ಬರಬೇಕು.ಎಂದು ನಿರ್ಧರಿಸಿದ ಇವರು  ಹಸು ಕೂಸನ್ನು  ಕಂಕಳಿಗೆ ಕಟ್ಟಿಕೊಂಡು ಕುಲಕಸುಬಾದ ವ್ಯವಸಾಯಕ್ಕೆ ಕಂಕಣ ತೊಟ್ಟು  ನಿಂತರು. ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಅಷ್ಟೊಂದು ಸುಲಭವಾಗಿರಲಿಲ್ಲ. ಮನೆಯಿಂದ 6 ಕಿಲೋಮೀಟರ್ ದೂರದಲ್ಲಿದ್ದ ಇವರ ತೋಟಕ್ಕೆ ಕಾಲ್ ನಡಿಗೆಯಲ್ಲಿ ಹೋಗಬೇಕಾಗಿತ್ತು. ಜೊತೆಗೆ ಬೇರೆ ಚಿಕ್ಕಮಗು. ಬೆಳಗ್ಗೆ ತಾವು ತಿಂದು ಮಗುವಿಗೂ ತಿನಿಸಿ ಜೊತೆಗೆ ನಮ್ಮಿಬ್ಬರಿಗೂ ಮಧ್ಯಾಹ್ನಕ್ಕೆ ಬುಟ್ಟಿ ಕಟ್ಟಿಕೊಂಡು ಬೆಳಗ್ಗೆ ಏಳು ಗಂಟೆಗೆ ಮನೆ ಬಿಟ್ಟರೆ ಸಂಜೆ 6 ತನಕ ತೋಟದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ . ಪ್ರಾರಂಭದಲ್ಲಿ ಕೆಲಸ ಮಾಡಿಸಲು ಹಣವಿಲ್ಲ ಹಾಗೂ ಅನುಭವವಿಲ್ಲ. ಹಿಡಿದ ಹಠ ಇವುಗಳೆಲ್ಲವನ್ನು ಮೀರಿ ನಿಂತಿತ್ತು. ಕಾಫಿ ಮೆಣಸು ಬೆಳೆದವರ ಜೋತೆ ಅದರ ಬಗ್ಗೆ ತಿಳಿದುಕೊಂಡು ಕಾಫಿ ಮತ್ತು ಮೆಣಸನ್ನು ಬೆಳೆಸುವುದಕ್ಕೆ ಕಷ್ಟಪಟ್ಟು ಕೆಲಸ ಮಾಡಿದರು. ಪ್ರಾರಂಭದಲ್ಲಿ ಬೇರೆಯವರನ್ನು ಕೇಳಿ ಕೃಷಿ ಶುರುಮಡಿದ ಮಾಡಿದ್ದು ಯಶೋದರ ಈಗ ತಾವೆ ಹತ್ತಾರು ಜನರಿಗೆ  ಕೃಷಿಯ ಬಗ್ಗೆ ಮಾರ್ಗದರ್ಶನ ಕೊಡುವ ಮಟ್ಟಿಗೆ ಬೆಳೆದುದ್ದಾರೆ.

ಯಶೋಧರ  ಕೃಷಿ ಇಲಾಖೆಯಲ್ಲಿ ನೀಡುವ ಮಾಹಿತಿಗಳಾದ  ಸಾವಯವ ನೈಸರ್ಗಿಕ ಕೃಷಿಯ ಬಗ್ಗೆ ತಿಳಿದುಕೊಂಡು ಅದನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡಿದ್ದಾರೆ. ಯಾವುದೇ ರಾಸಾಯನಿಕ ಮುಕ್ತ ಕೃಷಿಗೆ ಸಂಬಂಧಪಟ್ಟ ಸಂವಾದ ಇದ್ದರೆ   ಕೂಡಲೇ ಬಂದು ತಿಳಿದುಕೊಂಡು ತಮ್ಮ ಕೃಷಿಯಲ್ಲಿ   ಅಳವಡಿಸಿಕೊಳ್ಳುತ್ತಾರೆ.  ಆಶಾ ಕೃಷಿ ಸಖಿ


ಇದನ್ನು ಓದಿ : ರಾಜ್ಯ ಸರಕಾರ ಖಾಸಗೀ ಕಾಲೇಜುಗಳಲ್ಲಿ ನೇಮಕಾತಿಗೆ ನಿರ್ಲಕ್ಷ್ಯ, ಶೀಘ್ರ ಕ್ರಮ ಅಗತ್ಯ : ಹೆಚ್.ಡಿ. ರೇವಣ್ಣ

ಚಿಕ್ಕ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ತಲೆಯ ಮೇಲೆ ಊಟದ ಬುಟ್ಟಿ ಹೊತ್ತು ಕಾನ್ನಡಿಗೆಯಲ್ಲಿ ತೋಟವನ್ನು ತಲುಪುತ್ತಿದ್ದ ಯಶೋಧರ ಸಂಜೆ ಕಣ್ ಗತ್ತಲು ಆವರಿಸುವವರೆಗೂ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಹಸುಗೂಸಿನ ಅಳಲು ಸಂಜೆಯಾಗುವ ವಿಷಯವನ್ನು ತಿಳಿಸಿ ಮನೆಗೆ ಹೋಗುವಂತೆ ವಲ್ಲದ ಮನಸ್ಸುನ್ನು ತಂದೊಡ್ದುತ್ತಿತ್ತು.

ಕೃಷಿ ಇಲಾಖೆ ಆತ್ಮ ಯೋಜನೆಯಡಿಯಲ್ಲಿ ರೈತ ಕ್ಷೇತ್ರ ಪಾಠ ಶಾಲೆಯಡಿ  ಅಣಬೆ ಬೇಸಾಯದ ಕುರಿತು ಯಶೋಧರ  ತರಬೇತಿ ಪಡೆದಿರುತಾರೆ.  ಆತ್ಮ ಯೋಜನೆ ಪ್ರತಿ ವರ್ಷ ನೀಡುವ ಸಮಗ್ರ ಕೃಷಿ ಪದ್ದತಿ ವಿಭಾಗದಲ್ಲಿ ತಾಲ್ಲೂಕು ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಹಾಗೂ ಆತ್ಮ ಯೋಜನೆಯಲ್ಲಿ ಆಯೋಜಿಸುವ ತರಬೇತಿ, ಅಧ್ಯಯನ ಪ್ರವಾಸ ದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಸುಷ್ಮಾ.,  ಸಹಾಯಕ ತಾಂತ್ರಿಕ  ವ್ಯವಸ್ಥಾಪಕಿ ಆತ್ಮ ಯೋಜನೆ.  ಹೆತ್ತೂರು 


 ಹೀಗೆ ಪ್ರಾರಂಭಿಸಿದ ಕಷ್ಟದ ಕೃಷಿ ಕೆಲವೇ ದಿನಗಳಲ್ಲಿ ಇಷ್ಟವಾದ ಕೃಷಿಯಾಗಿ  ಮಾರ್ಪಾಡುಗೊಂಡಿತು .ಗಿಡಗಳು ಸ್ವಲ್ಪಮಟ್ಟಿಗೆ ಬೆಳೆದಂತೆ  ಕಾಫಿ ಗಿಡಕ್ಕೆ ಗೊಬ್ಬರ ಹಾಕಲು ಕೆಲಸಕ್ಕೆ ಮಗನ ಅಳು ಅಡ್ಡ ಬರುತ್ತದೆ ಎಂಬ ವಿಷಯಕ್ಕೆ ಮಗನನ್ನು ಪಕ್ಕದ ಮನೆಯಲ್ಲಿ ಇರಿಸಿ ಸಂಜೆ ಚಾಕಲೇಟ್ ತರುವುದಾಗಿ ಹೇಳಿ ಹೋಗುವ  ಘಟನೆಗಳು ತಾಯಿ ಮತ್ತು ಮಗನ ಚಿಕ್ಕ ವಯಸ್ಸಿನ ಬಾಂಧವ್ಯವನ್ನು ಹೇಗೆ ಬೇರ್ಪಡಿಸಿ ನೋವನ್ನು ಹಂಚಿಕೊಂಡಿದ್ದವು ಎಂದು ಮೇಲುಕೋ ಹಾಕುವ ಯಶೋದರ ಕಾಫಿ ತೋಟದಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುವಾಗ ಸ್ವಲ್ಪ ಗಾಳಿ ರಭಸಕ್ಕೆ ತರಗೆಲೆಗಳು ಮಾಡುವ ಶಬ್ದಕ್ಕೆ    ಗಂಡ ಬಂದರೆಂಬ ಆಶಾಭಾವದಿಂದ ಕತ್ತು ಎತ್ತಿ ನೋಡುವಂತೆ ಹಾಗೂ ಗಂಡನ ಸುಲಿವಿಲ್ಲದಿದ್ದಾಗ  ಮತ್ತೆ ಕಣ್ಣೀರು ಒರೆಸಿ ಕಾಫಿ ಕಸಿ ಕಡಿಯುವಂತೆ ಬಂದೋದಾಗುವ  ಸಂದರ್ಭವನ್ನು  ನೆನೆಯುತ್ತ ಈಗಲೂ    ಕಣ್ಣೀರು ಹಾಕಿದ್ದು ಅವರ ಕಷ್ಟದ ದಿನಗಳು ನಿಜಕ್ಕೂ ಎಷ್ಟು ಘೋರ ಎಂಬುದಕ್ಕೆ ಸಾಕ್ಷಿಯಾಗಿದವು .

" ಯಶೋಧರ ತುಂಬಾ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದಾರೆ. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕಲ್ಪಿಸಿ ಕೊಡುವುದರ ಜೊತೆಗೆ ತಮ್ಮ ಗಂಡನ ಪಾಲಿನ ತೋಟ ಹಾಗೂ ಗದ್ದೆಯನ್ನು   ಅಭಿರುದ್ದಿಮಾಡಿ ಉತ್ತಮ ಬೆಳೆಯನ್ನು ಬೆಳೆಯುತಿದ್ದಾರೆ. ನೇತ್ರ ಸುರೇಶ್ , ಉಪಾಧ್ಯಕ್ಷರು, ಹೆತ್ತೂರು ಹೋಬಳಿ  ಬೆಳೆಗಾರರ ಸಂಘ.

ಅಲ್ಲದೆ,  ತೋಟಕ್ಕೆ ಹೊರಟು ನಿಂತ  ಅಮ್ಮನೊಂದಿಗೆ  ಹೋಗಲು  ಹಠ ಹಿಡಿಯುತ್ತಿದ್ದ ಮಗನಿಗೆ ಸಾಲ ಮಾಡಿ ಸೈಕಲ್ ಕೊಡಿಸಿ ತನ್ನೊಂದಿಗೆ  ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದಿದ್ದು, ಕೆಲಸದೊಂದಿಗೆ ಮಗನ ಪೋಷಣೆಯು ತನಗರಿವಿಲ್ಲದಂತೆ ದಿನಗಳನ್ನು ದೂಡಿತು. ಜೋತೆಗೆ  ಕಾಫಿ ಮತ್ತು ಮೆಣಸು  ಬೆಳೆಯಬೇಕೆಂಬ ಉತ್ಸಾಹದಿಂದ ಯಶೋದರ ಕಾಫಿ ಬೆಳೆದವರ ಜೋತೆ ಹಾಗೂ ಅವರ ತೋಟಕ್ಕೆ ಭೇಟಿ ನೀಡಿ ಅವರಿಂದ ಮಾಹಿತಿ ಪಡೆದು ಕಾಫಿಯನ್ನು ಮತ್ತು ಮೆಣಸನ್ನು ಅವರಂತೆ ಬೆಳೆಯಲು ಕಷ್ಟ ಪಟ್ಟರು . ಇವರ ಕೆಲಸಕ್ಕೆ ಕಾಫಿ ಗಿಡಗಳು ಕೂಡ ಉತ್ತಮ್ಮ ಮಟ್ಟದಲ್ಲಿ ಬಂದು ಫಸಲು ಕೊಡುತ್ತಿವೆ. ಹಾಗೂ ತನ್ನ ಮಗನನ್ನು ಕೂಡ ತುಂಬಾ ಎಚ್ಚರಿಕೆಯಿಂದ ಬೆಳೆಸಿದ ಯಶೋದರ  ಈಗ ಅವನನ್ನು ವಿದ್ಯಾಭ್ಯಾಸದಿಂದ ಜೀವನದಲ್ಲಿ ಒಂದು ದಡ ಸೇರಿಸಿದ್ದಾರೆ.ಮಗ ಅಭಿಷೇಕ್ ಗೌಡ ಅಮ್ಮನ ಕಷ್ಟವನ್ನು ಅರಿತುಕೊಂಡು ಎಂಬಿಎ   ಮಾಡಿ ಶಾಲೆಯಲ್ಲಿ ಖಾಸಗಿ ಕಾಲೇಜು ಒಂದರಲ್ಲಿ  ಉಪನ್ಯಾಸಕರ ಹುದ್ದೆಯನ್ನು ಮಾಡುತ್ತಿದ್ದಾನೆ. ಅಮ್ಮ ಕಷ್ಟಪಟ್ಟು ಬೆಳೆದ 5 ಎಕರೆ ಕಾಫಿ ಮತ್ತು ಮೆಣಸಿನಲ್ಲಿ ಪ್ರತಿವರ್ಷ 8 ಲಕ್ಷಕ್ಕೂ ಹೆಚ್ಚು ಆದಾಯ ತಂದುಕೊಳ್ಳುತ್ತಿದ್ದಾರೆ.

ನಮ್ಮ ಅಮ್ಮ ಕಷ್ಟಪಟ್ಟು ಕೃಷಿ ಮಾಡಿ  ನನಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. 
ನಾನು ಈ ಮಟ್ಟಕ್ಕೆ ಬೆಳೆಯಲು ಅಮ್ಮನ  ಕಷ್ಟದ ದಿನಗಳೇ ದಾರಿದೀಪ. 
 ಅಭಿಷೇಕ್ ಗೌಡ ,  ಉಪನ್ಯಾಸಕರು.

 ಯಶೋಧರ   ಹೆತ್ತೂರಿನ ಕೃಷಿ ಇಲಾಖೆಯೊಂದಿಗೆ   ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವ ಇವರು ಸರ್ಕಾರದ ಯಾವ ಸೌಲಭ್ಯಗಳು ಬಂದರೂ ಅಥವಾ ಕೃಷಿಗೆ ಸಂಬಂಧಪಟ್ಟ  ಯಾವ ಕೆಲಸವನ್ನು ಯಾವಾಗ,ಯಾವಾಗ ಮಾಡಬೇಕು  ಯಾವ ಗೊಬ್ಬರವನ್ನು ಹಾಕಬೇಕು ಎಂಬುದನ್ನು ತಿಳಿದು ಮಾದರಿ ಕೃಷಿಕರ ಹಾದಿ ಹಿಡಿದಿದ್ದಾರೆ . ಮೊದಲು ಒಂಟಿ ಜೀವಕ್ಕೆ ಸರಿಯಾದ  ಸೂರು  ಇಲ್ಲದೆ   ಗೋಣಿಚೀಲ ಮತ್ತು ಟಾರ್ಪಲ್ ಗಳಿಂದ ನಿರ್ಮಿಸಿದ ಮನೆ ಈಗ ಇವರು ಹಿಡಿದ ಕೃಷಿಯಿಂದ 15 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಸ್ವಂತ ಮನೆಯನ್ನು ಮಾಡಿಕೊಳ್ಳುವಂತಾಗಿದೆ. ಇಷ್ಟೆಲ್ಲಾ  ಕಷ್ಟದಿಂದ ಒಂದು ಹಂತಕ್ಕೆ ಬಂದಿರುವ ಯಶೋಧರ  ಈಗಲೂ ಕೃಷಿಯನ್ನು ಕೈ ಬಿಟ್ಟಿಲ್ಲ. ಹೃದಯಕ್ಕೆ ಸಂಬಂಧಪಟ್ಟಂತ ಚಿಕಿತ್ಸೆ  ಆಗಿದ್ದರು ಕೂಡ ತಾವೇ ಸ್ವತಹ ಕಾರನ್ನು ಓಡಿಸಿಕೊಂಡು ಕೆಲಸಕ್ಕೆ ಬರುವ ಜನರನ್ನು ಕರೆದುಕೊಂಡು ಕೆಲಸ ಮಾಡಿಸುತ್ತಾರೆ. ಒಟ್ಟಾರೆ ಇವರಿಗೆ ಕೃಷಿ ಎಂಬುವುದು ಮರುಜೀವನ ಕೊಟ್ಟಿದೆ ಎಂದರೆ ತಪ್ಪಾಗಲಾರದು. ಪ್ರತಿದಿನ ತೋಟಗದ್ದೆಯಲ್ಲಿ ಕೆಲಸ ಮಾಡುತ್ತಾ  25 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಗಂಡನ ನೆನಪಿನೊಂದಿಗೆ ಮತ್ತೆ ಬರಬಹುದೇನೋ ಎಂಬ ಆಶಾಭಾವದ ಕಣ್ಣೀರು ತುಂಬಿದ ಕಣ್ಣುಗಳಿಂದ ಕಾಯುತ್ತಿದ್ದಾರೆ. ಇವರಿಗೊಂದು ನಮ್ಮ ವೈಚಾರಿಕ ದಿನಪತ್ರಿಕೆಯ ಮೂಲಕ ದೊಡ್ಡ ಸಲ್ಯೂಟ್. 

ವರದಿ : ಅರುಣ್‌ ಗೌಡ ಕರಡಿಗಾಲ

Post a Comment

Previous Post Next Post