ಹೊಳೆನರಸೀಪುರ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಂಸ್ಕೃತಿಯ ಪಾಲನೆಯೊಂದಿಗೆ ವೈಭವದಿಂದ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ವೀಕ್ಷಿಸುವ ಅವಕಾಶ ನಮಗೆ ದೊರೆತಿರುವುದು ಪುಣ್ಯ ಎಂದು ಶಾಸಕ ಎಚ್.ಡಿ.ರೇವಣ್ಣ ನುಡಿದರು.
ಗುರುವಾರ ಪಟ್ಟಣದ ಬಸವ ಭವನದ ಸಮೀಪ ಶ್ರೀ ಸುತ್ತೂರು ಜಾತ್ರಾ ಮಹೋತ್ಸವದ ಸಂಚಾರ ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಜ್ಯದ ಜನರ ಆಮಂತ್ರಣಕ್ಕಾಗಿ ಪೂಜ್ಯ ಗುರುಗಳ ರಥ ಆಗಮಿಸಿದ್ದು, ಇದನ್ನು ಸ್ವಾಗತಿಸುವ ಸೌಭಾಗ್ಯ ದೊರೆತಿದೆ. ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಭಾಗವಹಿಸಿ, ಜಾತ್ರಾ ಮಹೋತ್ಸವದ ವೈಭವವನ್ನು ನೋಡುವುದೇ ಒಂದು ಹಬ್ಬವೆಂದರು.
ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ಮಾತನಾಡಿ, ಸುತ್ತೂರಿನ ಧಾರ್ಮಿಕ ವೈಭವದ ಜಾತ್ರೆ ಜ. 26ರಿಂದ 31ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ ಮತ್ತು ಛಾಯಾಚಿತ್ರ ಸ್ಪರ್ಧೆ, ಜಾನಪದ, ಕೃಷಿ ಪ್ರಾತ್ಯಕ್ಷಿಕೆ, ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ಅತ್ಯಂತ ವೈಭವ ಹಾಗೂ ಶಿಸ್ತುಬದ್ಧವಾಗಿ ನಡೆಯುವ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ವೀಕ್ಷಿಸಲು ನಾಡಿನ ಜನತೆಯನ್ನು ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲು ಅತ್ಯಂತ ಪ್ರೀತಿ ಪೂರ್ವಕವಾಗಿ ಒಬ್ಬರು ಮೇಲ್ವಿಚಾರಕರನ್ನು ನೇಮಿಸಿ, ಸುತ್ತೂರು ರಥದ ಮೂಲಕ ಆಮಂತ್ರಿಸುವ ಅವರ ಕಾರ್ಯವೂ ಅನನ್ಯವಾದದ್ದು. ಪೂಜ್ಯರ ಅಭಿಮಾನಕ್ಕೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಪುರಸಭಾಧ್ಯಕ್ಷ ಕೆ.ಶ್ರೀಧರ್, ಮುಖಂಡರಾದ ನಂಜಪ್ಪ, ಸುರೇಶ್ ಮಾತನಾಡಿದರು. ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ಸಮಿತಿ ಸದಸ್ಯ ಪಂಚಾಕ್ಷರಿ, ಹಿರಿಯ ವಕೀಲರಾದ ಬಿ.ಆರ್.ವಸಂತಕುಮಾರ್ ಹಾಗೂ ರಾಜಶೇಖರಯ್ಯ, ತಾಲೂಕು ವೀರಶೈವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಹೂವಿನಹಳ್ಳಿ ತಮ್ಮಯ್ಯ, ತೇಜೋಮೂರ್ತಿ, ಮಹಂತೇಶಪ್ಪ್ಪ, ಪ್ರಕಾಶ್, ತೀರ್ಥೇಶ್, ಪತ್ರಕರ್ತ ಕುಮಾರಸ್ವಾಮಿ ಇತರರು ಹಾಜರಿದ್ದರು.