ಚನ್ನರಾಯಪಟ್ಟಣ: ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣ ಪಡೆಯುವ ಮೂಲಕ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಪಥದತ್ತ ಸಾಗಬೇಕೆಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡ ತಿಳಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಯ 2024-25ನೇ ಸಾಲಿನ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ತುಂಬ ಮಹತ್ವ ನೀಡಲಾಗಿದೆ. ಎಲ್ಲ ಹುದ್ದೆಗಳಿಗೂ ಅದರದೇ ಮಹತ್ವವೂ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗಟ್ಟಿಯಾಗಿ ನಿಲ್ಲಲು ಚೆನ್ನಾಗಿ ಓದಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳೆದು ದೇಶದ ಬೆಳವಣಿಗೆಯಲ್ಲಿ ಭಾಗಿಯಾಗಿಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರವೂ ಅಗತ್ಯವಾಗಿದೆ. ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು. ಶಿಸ್ತು, ಸಂಯಮ, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವು ಮನುಷ್ಯರ ಬದುಕಿನಲ್ಲಿ ಬಹುಮುಖ್ಯ ಘಟ್ಟವಾಗಿರುತ್ತದೆ. ಹೀಗಿರುವಾಗ ಸಮಯದ ಸರಿಯಾದ ಬಳಕೆ ಮತ್ತು ಸಮಯಪ್ರಜ್ಞೆ ಎರಡೂ ಅತ್ಯವಶ್ಯಕವಾದ ಅಂಶಗಳಾಗುತ್ತವೆ. ಸಮಯಪಾಲನೆಯ ಪ್ರಾಮುಖ್ಯವನ್ನು ನಾವು ಅರ್ಥಮಾಡಿಕೊಂಡಾಗಲೇ ನಮ್ಮ ಜೀವನದಲ್ಲಿ ಸಂಯೋಜಿಸಲು ಸರಳವಾಗುತ್ತದೆ. ಸಮಯಪ್ರಜ್ಞೆಯು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತರನ್ನಾಗಿಸುವಲ್ಲಿ ಸಹಕರಿಸುತ್ತದೆ. ಶಿಸ್ತನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಕಾರ್ಯಗಳು, ಆಯ್ಕೆಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಬಿ.ಆರ್.ರಮೇಶ್ ಪ್ರಾಸ್ತಾವಿಕ ನುಡಿಗಳನಾಡಿದರು. ಪುರಸಭಾ ಅಧ್ಯಕ್ಷ ಬನಶಂಕರಿ ರಘು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್, ನಿವೃತ್ತ ಅಪರ ಜಿಲ್ಲಾಧಿಕಾರಿ ನಾಗಪ್ಪ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ರಾಮೇಗೌಡ, ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಪ್ರಾಂಶುಪಾಲ ಬಸವಲಿಂಗಮೂರ್ತಿ, ದೇವರಾಜೇಗೌಡ, ಎಚ್.ಜಿ.ಮಲ್ಲೇಗೌಡ, ಕೆ.ಟಿ.ಆನಂದ್ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.