ವೀರ ಯೋಧ ಅತ್ನಿ ಮಲ್ಲೇಶ್ ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ.

ಅರಕಲಗೂಡು: ತಾಲೂಕಿನ ಅತ್ನಿಸಿದ್ದಾಪುರ ಗ್ರಾಮದ ಯೋಧ ಮಲ್ಲೇಶ್ ಭಾರತ-ಚೀನಾ ಗಡಿ ಅರುಣಾಚಲ ಪ್ರದೇಶದ ಬೆಟಾಲಿಯನ್-18ರಲ್ಲಿ ಕಾರ್ಯ ನಿರ್ವಹಿಸುವ ವೇಳೆ ಹುತಾತ್ಮನಾಗಿದ್ದು, ಕುಟುಂಬಸ್ತರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಕಳೆದ 17ವರ್ಷಗಳಿಂದಲೂ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಮಲ್ಲೇಶ್ ಕಳೆದ ಏಪ್ರಿಲ್‌ನಲ್ಲಿ ರಜೆಮೇಲೆ ಊರಿಗೆ ಬಂದಿದ್ದರು.ಸೇವಾ ಅವಧಿ ಮುಗಿದಿದ್ದರೂ ಸಹ ಹೆಚ್ಚುವರಿ ಸೇವೆ ಸಲ್ಲಿಸಲು ಮುಂದುವರಿದಿದ್ದರು.ಊರಿಗೆ ಬಂದ ವೇಳೆ ಕೃಷಿಯಲ್ಲಿ ತೊಡಗಿಕೊಂಡಿದ್ದು,ಹೊಸದಾಗಿ ಪಿರಿಯಾಪಟ್ಟಣದಲ್ಲಿ ಸೈಟ್ ಸಹ ಕೊಂಡು ಮನೆಕೆಲಸ ಆರಂಭಿಸಿದ್ದರು ಎನ್ನಲಾಗಿದೆ.
ಪತ್ನಿ ಪೂರ್ಣೀಮಾ ಬೆಟ್ಟದಪುರದವರಾಗಿದ್ದು, ಮೈಸೂರಿನಲ್ಲಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿ ವಾಸವಾಗಿದ್ದರು. ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು 8ಮತ್ತು 6ವರ್ಷದ ಇಬ್ಬರು ಗಂಡುಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿಸಿ ಸುಖಿಕುಟುಂಬದ ಕನಸನ್ನು ಮೃತಯೋಧ ಮಲ್ಲೇಶ್ ಕಂಡಿದ್ದರು.

ಶನಿವಾರ ಸಂಜೆ 5ರ ಸುಮಾರಿಗೆ ಸೇನೆಯ ಅಧಿಕಾರಿ ಮಲ್ಲೇಶ್ ಪತ್ನಿ ಪೂರ್ಣೀಮಾಗೆ ಕರೆಮಾಡಿ ನಿಮ್ಮ ಪತಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಇದರಿಂದ ಗಾಬರಿಗೊಂಡ ಪೂರ್ಣೀಮಾ ಪತಿಯ ಮನೆಯವರಿಗೆ ಆತಂಕದಲ್ಲಿ ವಿಷಯ ಮುಟ್ಟಿಸಿದ್ದಾರೆ.ಇದಾದ ಕೆಲ ಗಂಟೆ ಬಳಿಕ ಮತ್ತೊಮ್ಮೆ ದೂರವಾಣಿ ಮೂಲಕ ಕರೆಮಾಡಿ ಮಲ್ಲೇಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ ಎಂದು ಸುದ್ದಿತಿಳಿಸಿದ್ದಾರೆ.
ಅತ್ನಿಸಿದ್ದಾಪುರ ಗ್ರಾಮದ ಮಲ್ಲೇಗೌಡರ 6ಜನ ಮಕ್ಕಳಲ್ಲಿ ಮೃತ ಯೋಧ ಮಲ್ಲೇಶ್ ಕೊನೆಯವರಾಗಿದ್ದಾರೆ. ತಂದೆ ಮೃತರಾಗಿದ್ದು,ತಾಯಿ ಪುಟ್ಟಮ್ಮ, ಅಣ್ಣಂದಿರಾದ ನಿಂಗೇಗೌಡ, ಮೈಲಾರಿಗೌಡ, ಕೃಷ್ಣೇಗೌಡ, ಪುಟ್ಟರಾಜು ಹಾಗೂ ಒಬ್ಬರು ಅಕ್ಕ ಇದ್ದಾರೆ.

ಮಗನ ಸಾವಿನ ಸುದ್ದಿಕೇಳಿ ತಾಯಿ ಕಣ್ಣೀರು ಹಾಕುತಿದ್ದರೇ,ಈಗತಾನೆ ಕುಟುಂಬದ ದೊಡ್ಡಕನಸು ಕಟ್ಟಿಕೊಂಡಿದ್ದ ಪತ್ನಿ ಪೂರ್ಣೀಮಾ,ಇಬ್ಬರು ಮಕ್ಕಳ ಆಕ್ರಂದನ ಮುಗಿಲುಮುಟ್ಟಿತು.

ಬಿಎಸ್ಪಿ ಜಿಲ್ಲಾಧ್ಯಕ್ಷ ಅತ್ನಿಹರೀಶ್, ಯೋಧನ ಪಾರ್ಥಿವಶರೀರ ಬರುವ ಮಾರ್ಗದ ರಸ್ತೆಯನ್ನು ಜೆಸಿಬಿಯಿಂದ ಅಗಲೀಕರಣ ಮತ್ತು ಸ್ವಚ್ಛತಾ ಕಾರ್ಯವನ್ನು ಸ್ವತಃ ನಿಂತ್ತು ನಿರ್ವಹಿಸಿದರು.

Post a Comment

Previous Post Next Post