ರಸ್ತೆ ಬದಿಯಲ್ಲಿ ಹೊಗೆಸೊಪ್ಪಿಗೆ ಸೌದೆ ಮತ್ತು ತೆಂಗಿನಕಾಯಿ ಮಟ್ಟೆ ವ್ಯಾಪಾರ

ರಾಮನಾಥಪುರ:-  ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪಿನ ಉತ್ಪಾದನಾ ಕಾರ್ಯ ಬಿರುಸಿನಿಂದ ಸಾಗಿದೆ. ಜೊತೆಗೆ ತಂಬಾಕು ಉತ್ಪಾದಿಸುವ ಕಟ್ಟಿಗೆ ಸಾಮಾಗ್ರಿಗಳಿಗೂ ಅಧಿಕ ಬೇಡಿಕೆ ಉಂಟಾಗಿದೆ.
ಇಲ್ಲಿನ ಸುಬ್ರಹ್ಮಣ್ಯನಗರದಲ್ಲಿರುವ ಪಾಟ್ಲ್ ಪಾರಂ 7 ಹಾಗೂ 63ರ ವ್ಯಾಪ್ತಿಯಲ್ಲಿ ವರುಣನ ಕೃಪೆಗೆ ಅಲ್ಪ-ಸಲ್ಪ ಬೆಳೆದಿರುವ ಸುಮಾರು 30 ಸಾವಿರಕ್ಕೂ ಅಧಿಕ ತಂಬಾಕು ಬೆಳೆಗಾರರು ತಂಬಾಕು ಎಲೆಗಳನ್ನು ರೈತರು ಕಟಾವಿನ ಕಾರ್ಯ ಚುರುಕುಗೊಳಿಸಿದ್ದಾರೆ. ಇದಲ್ಲದೇ ಮಳೆ ಬಿಡುವು ನೀಡಿರುವುದರಿಂದ ಕಟಾವಿನ ಕೆಲಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದೆ.
ಒಂದೆಡೆ ತಂಬಾಕಿನ ಕಟಾವಿನ ಕೆಲಸ ಭರದಿಂದ ಸಾಗಿದ್ದರೆ, ಇನ್ನೊಂದೆಡೆ ಹೊಗೆಸೊಪ್ಪು ಹದಗೊಳಿಸಲು ಬಳಸುವ ಕಟ್ಟಿಗೆ ಉರುವಲಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಒಂದು ಸೌದೆ ಲೋಡ್, ಕಾಫಿಹೊಟ್ಟು, ತೆಂಗಿನ ಮಟ್ಟೆ, ಮರದಹೊಟ್ಟು, ಚಿಪ್ಪುಗಳ ಬೆಲೆ ಏರಿಕೆಯಾಗಿದ್ದು ಬೆಳೆಗಾರರನ್ನು ಬೆಚ್ಚಿ ಬೀಳಿಸಿದೆ.
ಕಟ್ಟಿಗೆ ಸೌದೆಯಲ್ಲದೇ ಇದಕ್ಕೆ ಪರ್ಯಾಯವಾಗಿ ಬಳಸುವ ಕಾಫಿಹೊಟ್ಟು, ಮರದಹೊಟ್ಟು, ತೆಂಗಿನ ಮಟ್ಟೆ, ಚಿಪ್ಪುಗಳಿಗೆ ಬೇಡಿ ಹೆಚ್ಚಿದ್ದು ಬೆಲೆ ಗಗನಕ್ಕೇರಿದೆ. ಪ್ರತಿನಿತ್ಯ ಇಲ್ಲಿನ ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿ ಕಳೆದ ಕೆಲವು ದಿನಗಳಿಂದ ಸೌದೆ, ತೆಂಗಿನಮಟ್ಟೆ ತುಂಬಿದ ಲಾರಿಗಳು ಸಾಲಾಗಿ ನಿಂತು ವ್ಯಾಪಾರದಲ್ಲಿ ತೊಡಗಿವೆ.
ಪ್ರಾರಂಭದಲ್ಲಿ ಸೌದೆ ಹಾಗೂ ಕಾಫಿ ಹೊಟ್ಟು ಒಂದು ಲಾರಿ ಲೋಡ್ 60ರಿಂದ 65 ಸಾವಿರದವರೆಗೆ ಏರಿಕೆ ಈ ಹಿಂದೆ ಇತ್ತು. ಈವಾಗ ಮತ್ತೆ ಒಂದು ಲಾರಿ ಲೋಡ್ ಸೌದೆಗೆ 10ರಿಂದ 15 ಸಾವಿರ ಬೆಲೆ ಹೆಚ್ಚಾಗುತ್ತಿದೆ. ಇದೇ ರೀತಿ ಪ್ರಾರಂಭದಲ್ಲಿ 11ರಿಂದ 12 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಮಟ್ಟೆ ಈ ವಾರ ರೂ. 16ರಿಂದ 20 ಸಾವಿರಕ್ಕೆ ದಿಢೀರ್ ಏರಿಕೆಯಾಗಿದೆ.
ಇಲ್ಲಿನ ತಂಬಾಕು ಮಂಡಳಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಸೊಪ್ಪು ಹದಗೊಳಿಸಲು ಬಳಸುವ ಸೌದೆಯ ಬೆಲೆಗಳು ಗಗನಕ್ಕೇರುತ್ತಿದ್ದು, ಉತ್ಪಾದನಾ ವೆಚ್ಚ ಅಧಿಕಗೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಮುಂಜಾಗ್ರತೆ ವಹಿಸಿ ನಾಟಿ ಕಾರ್ಯ ಮುಗಿಸಿದ ಬಳಿಕ ಮೂರ್ನಾಲ್ಕು ತಿಂಗಳ ಹಿಂದೆಯೇ ಕಾಫಿ ಹೊಟ್ಟು, ಸೌಧೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ ಹಣದ ಅಭಾವ ಇರುವವರು ಇಲ್ಲವೇ ಅನಿವಾರ್ಯ ಕಾರಣಗಳಿಂದಾಗಿ ಸೌದೆ ಸಂಗ್ರಹಿಸಿಟ್ಟುಕೊಳ್ಳದಿರುವ ರೈತರಿಗೆ ಪ್ರಸ್ತುತ ಬೆಲೆ ಏರಿಕೆ ಬಿಸಿ ತಟ್ಟಿದ್ದು, ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾಗಿ ಬಂದಿದೆ.
ಇದಲ್ಲದೇ ಈ ಬಾರಿ ತಂಬಾಕು ಬೆಳವಣಿಗೆ ಹಂತದಲ್ಲಿ ನಿರೀಕ್ಷಿತ ಮಳೆ ಬಾರದೆ ಕೈಕೊಟ್ಟ ಪರಿಣಾಮ ಇಳುವರಿ ಕುಂಠಿತಗೊಂಡಿದೆ. ಹಾಗಾಗಿ ತಂಬಾಕು ಹದಗೊಳಿಸುವ ಕಾರ್ಯಕ್ಕೆ ಹಿನ್ನೆಡೆ ಉಂಟಾಗಿತ್ತು. ಇದರಿಂದ ಉರುವಲು ಸೌದೆ ಹಾಗೂ ಕಾಫಿ ಹೊಟ್ಟಿಗೂ ಬೆಲೆ ಕೊಂಚ ಇಳಿಕೆಯಾಗಿದ್ದರೂ ಕೂಡ ಇದೀಗ ಬೆಲೆ ದಿಢೀರನೇ ಭಾರಿ ಏರಿಕೆ ಕಂಡಿದೆ. ಬೆಲೆ ಏರಿಕೆಯ ಜೊತೆಗೆ ದಲ್ಲಾಳಿಗಳ ಹಾವಳಿ ಹೆಚ್ಚಿರುವುದು ಕೊಳ್ಳುವ ರೈತರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ತಂಬಾಕು ಬೆಳೆಗಾರರು.

Post a Comment

Previous Post Next Post