Wishing to be friends is quick work, but friendship is a slow ripening fruit. ಹೀಗೆಂದು ಅರಿಸ್ಟಾಟಲ್ ಉದ್ಗರಿಸಿದ್ದಾನೆ. ಸ್ನೇಹಿತರಾಗುವುದು ತ್ವರಿತ ಕ್ರಿಯೆಯಾದರೆ ಸ್ನೇಹವು ನಿಧಾನವಾಗಿ ಹಣ್ಣಾಗುವ ಪ್ರಕ್ರಿಯೆ. 1983ರಿಂದ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸೇವೆ ಸಲ್ಲಿಸಿ 2014ರ ಮೇ 31ರಂದು ನಿವೃತ್ತಿ ಹೊಂದಿರುವ ಜಿ.ಎಸ್.ಪ್ರಕಾಶ್‍ರವರನ್ನು 1966ರಿಂದಲೂ ಬಲ್ಲೆ. ಶ್ರೀಕೃಷ್ಣ ಸಂಧಾನ ನಾಟಕದ ಮೇಷ್ಟ್ರು ಪಾತ್ರಕ್ಕೆಂದು ಕೆ.ಜಿ.ಎಸ್. ಕ್ಲಬ್‍ಗೆ ಹೋದಾಗ ಪರಿಚಯವಾದ ಇವರು ನಟ, ನಿರ್ದೇಶಕ, ನಾಟಕಕಾರ ಅಷ್ಟೇ ಅಲ್ಲ ಸ್ನೇಹಜೀವಿ ಸಮಾಜಸೇವಕ.. ಹೀಗೆ ಇವರ ಬಗ್ಗೆ ಎಷ್ಟು ಹೇಳಿದರೂ ಸಾಲದು ಎನ್ನುತ್ತಾರೆ ರಾಗರಂಗ ನಾಗರಾಜ್. 1995 ರಿಂದ 1998ರವರೆಗೆ ಕೆಜಿಎಸ್ ಕ್ಲಬ್ ಪ್ರಕಾಶಮಯವಾಗಿತ್ತು. ರಂಗ ತರಬೇತಿ ಶಿಬಿರ ನಡೆಸಿ ಶ್ರೀಮತಿ ಬಿ.ಜಯಶ್ರೀರವರು ಒಂದು ತಿಂಗಳ ಕಾಲ ರಂಗತರಬೇತಿ ನಡೆಸಿಕೊಟ್ಟಿದ್ದರು. ದಿ. ಸಿ.ಆರ್.ಸಿಂಹ, ರಂಗಕರ್ಮಿ ಸುರೇಶ್ ಆನಗಳ್ಳಿ, ರಾಮಕೃಷ್ಣ ಕನ್ನರ ಪಾಡಿ, ಸುಜೆಂದ್ರ ಪ್ರಸಾದ್ ತ್ರಿವೇದಿ ಶಿಬಿರದಲ್ಲಿ ತರಬೇತಿಗೆ ಸಾತ್ ನೀಡಿದ್ದರು. ಇಂತಹ ಕಾರ್ಯಕ್ರಮಗಳಾಗಲು ಪ್ರಕಾಶ್‍ರವರ ಕೊಡುಗೆ ಸ್ಮರಣೀಯವಾದುದು ಎಂದಿದ್ದಾರೆ ಅಂದಿನ ಸರ್ಕಾರದ ಉಪ ಕಾರ್ಯದರ್ಶಿ ಎನ್.ಆರ್.ಪ್ರಭು. ಇವರ ವಯೋನಿವೃತ್ತಿ ಸಂದರ್ಭ ಜೂನ್ 11ರಂದು ಕುದುರೆ ಮೊಟ್ಟೆ, 12ರಂದು ಗೂಡು ಹಾಗೂ 13ರಂದು ಮುದ್ದಣ್ಣನ ಪ್ರಮೋಸನ್ ಪ್ರಸಂಗ ನಾಟಕಗಳನ್ನು ರಂಗದ ಮೇಲೆ ತಂದರು. ಪ್ರಕಾಶ್ ಹುಟ್ಟಿದ ಊರು ಗೊರೂರು. ಬಿಎಸ್ಸಿ ಪದವಿ ನಂತರ ಶಿಕ್ಷಕರಾಗಿ, ಗುತ್ತಿಗೆದಾರರಾಗಿ 1982ರಲ್ಲಿ ಹಾಸನದ ಕೆಜಿಐಡಿ ಸರ್ಕಾರಿ ಸೇವೆಗೆ ಸೇರಿ ದಿ.15-2-1984ರಲ್ಲಿ ಕಿರಿಯ ಸಹಾಯಕರಾಗಿ ಕರ್ನಾಟಕ ಸರ್ಕಾರದ ಸಚಿವಾಲಯದ ಸೇವೆಗೆ ಸೇರಿ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿ ಯುವಜನಸೇವಾ ಇಲಾಖೆಯಲ್ಲಿ ಶಾಖಾಧಿಕಾರಿಯಾಗಿ ನಿವೃತಿ ಹೊಂದಿದ್ದಾರೆ. ಕರ್ನಾಟಕ ಸಚಿವಾಲಯದ ಗೃಹ ನಿರ್ಮಾಣ ಸಹಕಾರ ಸಂಘದ ಖಜಾಂಚಿ ಯÁಗಿ, ಸಚಿವಾಲಯ ಕ್ಲಬ್‍ನ ಕಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2005 ರಿಂದ 2010ರ ಅವಧಿಯಲ್ಲಿ ಸಚಿವಾಲಯದ ದೇವಾಂಗ ನೌಕರರ ಸಂಘದ ಸಂಸ್ಥಾಪಕರಾಗಿ ಸೇವೆ ಸಲ್ಲಿಸಿದವರು. ಗೊರೂರಿನಲ್ಲಿ ಹೇಮಾವತಿ ಯುವಜನ ವೃಂದ ಮತ್ತು ಹೇಮಾವತಿ ಕಲಾವೃಂದ ಸ್ಥಾಪಿಸಿದವರು. ಆದರೆ ಪ್ರಕಾಶ್ ಬೆಂಗಳೂರಿಗೆ ಹೋಗಿ ಅಲ್ಲಿಯೇ ನೆಲೆಯಾದ ಮೇಲೆ ಬಹುತೇಕ ಊರಿನಲ್ಲಿ ರಂಗ ಚಟುವಟಿಕೆ ನಿಂತ ನೀರಾಗುತ್ತದೆ. ಆಗ ತಾನೇ ನಾನು (ಗೊರೂರು ಅನಂತರಾಜು) ರಂಗ ಚಟುವಟಿಕೆ ಆರಂಭಿಸಿ ವಿದ್ಯಾರ್ಥಿಗಳ ತಂಡ ಕಟ್ಟಿ ಹಾಸನ ಯುವಜನ ಸೇವಾ ಕ್ರೀಡಾ ಇಲಾಖೆಯಲ್ಲಿ ಇದೇ ಸಂಘದ ಹೆಸರಿನಲ್ಲಿ 2 ವರ್ಷ ಭಾಗವಹಿಸಿ ಒಂದಿಷ್ಟು ಅನುಭವ ಗಳಿಸಿಕೊಂಡಿರುವೆ.
ಪ್ರಕಾಶ್ ಬರೆದ ಸರಿದ ತೆರೆ ನಾಟಕದಲ್ಲಿ ನನಗೆ ಒಂದು ಅವಕಾಶ ಕೊಟ್ಟರು. ಆದರೆ ಪ್ರಾಕ್ಟಿಸ್ ಕೊರತೆ ಜೊತೆಗೆ ಮೊದಲ ರಂಗ ಪ್ರವೇಶ. ನಾಟಕ ಮಧ್ಯೆ ಡೈಲಾಗ್ ಮರೆತು ತೊಡೆ ನಡುಗಿ ನಾಟಕ ಹರಿದ ತೆರೆಯಾಯಿತು. ಇದಕ್ಕೂ ಮೊದಲು ನೋಡಲು ಕೆಂಪಗಿದ್ದ ನನಗೆ ಸ್ತ್ರೀ ಪಾತ್ರ ಮಾಡು ಎನ್ನುತ್ತಿದ್ದರು. ರಾತ್ರಿ ಊಟವಾದ ಮೇಲೆ ಇವರ ಅಟ್ಟದ ಮೇಲಿನ ರೂಮಿನಲ್ಲಿ ಕಲಾವಿದರು ಸೇರಿ ರಂಗತಾಲೀಮು ನಡೆಸುತ್ತಿದ್ದರು. ನಾನು ಆಗತಾನೆ ಪಿಯುಸಿ ವ್ಯಾಸಂಗ ಮುಗಿಸಿದ್ದೆನು. ನವೆಂಬರ್ 1ರಂದು ಹೇಮಾವತಿ ಪ್ರಾಜೆಕ್ಟಿನಲ್ಲಿ ದಾಶರಥಿ ದೀಕ್ಷಿತ್‍ರ ಗಾಂಪರ ಗುಂಪು ನಾಟಕ. ನಮ್ಮ ದೊಡ್ಡಪ್ಪನ ಮಗ ಮಂಜಣ್ಣ ತ್ಯಾಗಿ ಮಂಜು ಎಂದೇ ಊರಿನಲ್ಲಿ ಹೆಸರಾಗಿದ್ದರು. ತ್ಯಾಗಿ ಬೇಲೂರು ಕೃಷ್ಣಮೂರ್ತಿಯವರ ಸಾಮಾಜಿಕ ನಾಟಕ. ತ್ಯಾಗ ಮನೋಭಾವದ ಅತ್ತು ಕರೆವ ಪಾತ್ರದಲ್ಲಿ ಮಿಂಚಿ ತ್ಯಾಗಿ ಹೆಸರನ್ನು ಬಲಬದಿಗೆ ಹಾಕಿಕೊಂಡಿದ್ದರು. ಗಾಂಪರ ಗುಂಪು ನಾಟಕದಲ್ಲಿ ಇವರೇ ಮಠದ ಗುರು. ರಂಗದ ಮೇಲೆ ಬರುವ ನನ್ನ ಆಸೆ ಅರಿತು ನೀನು ಮಠಕ್ಕೆ ಬರುವ ವಿದ್ಯಾರ್ಥಿಯಾಗಿ ಹಾಗೇ ಬಂದು ಹೋಗು ಎಂದಿದ್ದರು. ನನಗೆ ಯಾವುದೇ ಮಾತುಗಳಿರಲಿಲ್ಲ. ರಂಗದ ಮೇಲೆ ಬಂದನು. “ ಯಾರಪ್ಪ ನೀನು” ಗಾಂಪರ ಗುರು ಕೇಳಿದರು. ಅನಂತರಾಜು ಎಂದೆನು. “ ಏನು ಓದ್ತಿದ್ದಿಯಾ?” ಮಂಜಣ್ಣನ ಕುಹಕದ ಪ್ರಶ್ನೆ? ಏಕೆಂದರೆ ನಾನು ಪಿಯುಸಿ 2ನೇ ವರ್ಷದಲ್ಲಿ ಇಂಗ್ಲೀಷ್ ವಿಷಯದಲ್ಲಿ 2 ಅಂಕ ಕಡಿಮೆಯಾಗಿ ಫೇಲಾಗಿ ಅಕ್ಟೋಬರ್ ಮರುಪರೀಕ್ಷೆಯಲ್ಲಿ ಪಾಸಾಗಿ ನವೆಂಬರ್‍ನಲ್ಲಿ ರಂಗದ ಮೇಲೆ ಬಂದಿದ್ದೇನೆ. ತ್ಯಾಗಿಗೆ ನನ್ನನ್ನು ಅವಮಾನಿಸಲು ಯೋಚಿಸಿರುವ ವಾಸನೆ ಮೂಗಿಗೆ ಬಡಿಯಿತು. ಸ್ಪಾಟ್ ಲೈಟ್ ಹೀಟಿಗೆ ಮೈ ಬೆವರುತ್ತಿದೆ. “ ಓದುತ್ತಿಲ್ಲ..! ಉಸುರಿದೆನು. “ಏಕೆ?” ಛೇಡಿಸುವ ಪ್ರಶ್ನೆ. “ ಫೇಲ್..ಫೇಲ್.. ತೊದಲಿದೆನು. ಗಾಂಪರ ಶಿಷ್ಯರು ಗೊಳ್ಳೆಂದು ನಕ್ಕರು. ಪ್ರೇಕ್ಷಕರು ಧ್ವನಿಗೂಡಿಸಿದರು. ಚಿಗುರು ಮೀಸೆಯ ಹದಿನೆಂಟರ ಪ್ರಾಯದ ನಾನು ಪ್ರಾಜೆಕ್ಟ್ ಹುಡುಗಿಯರ ಎದುರು ಮಿಂಚಲು ಹೋಗಿ ಅವಮಾನಿತನಾಗಿದ್ದೆನು. “ ಪೋಲಿ ಅಲೆಯುವುದು ಬಿಡು. ಪಾಠ ಓದು. ಆಗಿಂದಾಗ್ಗೆ ಮಠಕ್ಕೆ ಬಂದು ಗುರುಗಳ ಆಶೀರ್ವಾದ ಪಡೆ ಈಗ ಮನೆಗ ನಡೆ. ಎಲೈ ಶಿಷ್ಯೋತ್ತಮನೇ, ಈ ದಡ್ಡ ಶೀಖಾಮಣಿಗೆ ಒಂದು ಚಿಪ್ಪು ಬಾಳೆಹಣ್ಣು ಕೊಡು” ಎಂದರು ಗುರುಗಳು. ಬಾಳೆಹಣ್ಣು ಇಲ್ಲ, ತೆಂಗಿನಕಾಯಿ ಚಿಪ್ಪಿದೆ. ಒಬ್ಬ ಶಿಷ್ಯನ ಡೈಲಾಗ್‍ಗೆ ಉಳಿದ ಶಿಷ್ಯರು ಚಪ್ಪಾಳೆ ಹೊಡೆದುಕೊಂಡು ನಕ್ಕರೆ ಪ್ರೇಕ್ಷಕರು ಅನುಕರಿಸಿದರು. “ ತಪ್ಪು.. ತಪು.. ಮಠಕ್ಕೆ ಬಂದ ಭಕ್ತರನ್ನು ಹಾಗೆಯೇ ಬರಿಗೈಯಲ್ಲಿ ಕಳಿಸಬಾರದು..ಗುರುಗಳ ಮಾತನ್ನು ತುಂಡರಿಸಿ ಮಧ್ಯೆ ಬಾಯಿಹಾಕಿದ ಮಲ್ಲಪ್ಪ ಶಿಷ್ಯ “ ಹಾಲಿದೇ ಕುಡಿಸಲೇ?” ಕಕ್ಕಿರಿದು ನೆರೆದಿದ್ದ ಹೇಮಾವತಿ ಮನರಂಜನಾ ಮಂದಿರದಲ್ಲಿ ನಗೆಯ ಅಲೆ. ನಾನಾದರೂ ಡಿವಿಜಿಯವರ ಮಂಕುತಿಮ್ಮ. ಮತ್ತೆ ಎಂದಿಗೂ ರಂಗ ಹತ್ತಬಾರದೆಂದು ಅಂದು ನಿರ್ಧರಿದೆ. ಆದರೆ ಕಾಮಿಡಿ ನಾಟಕದಲ್ಲಿ ಪೆದ್ದನಂತೆ ನಟಿಸುವುದು ಒಂದು ಕಲೆಯೇ? ಬೇಡರಕಣ್ಣಪ್ಪ ಚಿತ್ರದಲ್ಲಿ ನರಸಿಂಹರಾಜು ಒಂದು ಉದಾಹರಣೆ. ಕಾಲಾಂತರದಲ್ಲಿ ನಾನೇ ಒಂದು ತಂಡ ಕಟ್ಟಿ ವೀರಪ್ಪನ್ ಭೂತ ನಾಟಕ ಬರೆದು ಇದೇ ಜಿ.ಆರ್. ಮಂಜುನಾಥ್ ಮತ್ತು ಮಲ್ಲಪ್ಪದೂರ ಅವರನ್ನು ನನ್ನ ನಾಟಕದಲ್ಲಿ ಪಾತ್ರ ನೀಡಿದ್ದನ್ನು ನಾನೆಂತು ಮರೆಯಲಿ. ಒಂದರ್ಥದಲ್ಲಿ ನಾನು ರಂಗಭೂಮಿಯಲ್ಲಿ ಸೋತು ಸೋತು ಮತ್ತೆ ಮತ್ತೆ ಪ್ರಯತ್ನದಲ್ಲಿ ಯಶ ಸಾಧಿಸಿದವನು. ಆದರೆ ಪ್ರಕಾಶ್‍ರವರ ರಂಗ ಸಂಘಟನೆ, ಅವರ ಪ್ರೋತ್ಸಾಹದ ನುಡಿಗಳು, ನಗುನಗುತ್ತಾ ಮಾತನಾಡುವ ವಿಶೇಷತೆ ಅಪ್ಪಟ ಕಲಾವಿದ ಜಿ.ಎಸ್.ಪ್ರಕಾಶ್‍ಗೆ ರಂಗ ಸಲಾಂ ಎಂಬ ಹೊತ್ತಿಗೆಯನ್ನು 2017ರಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು ರೇವಪ್ಪ ಎಂ ಪಾಟೀಲ ಬರೆದಂತೆ
ನಗುವು ಸಹಜ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ
ಬಹುಶ: ಡಿವಿಜಿ ಅವರ ಈ ಆಶಯದಂತೆ ನಗುವ, ನಗುತ್ತಲೇ ನಗಿಸುವ ವರವನ್ನು ಪಡೆದ ಸಚಿವಾಲಯದ ಜಿ.ಎಸ್.ಪ್ರಕಾಶ್‍ರವರು ತಮ್ಮ ಮಾತಿನ ಮೂಲಕ, ತಾವು ನಟಿಸುವ ನಾಟಕಗಳಲ್ಲಿನ ಪಾತ್ರಗಳ ಮೂಲಕ, ಹಾಸ್ಯ ಪ್ರಜ್ಞೆಯನ್ನು ಹಾಸುಹೊಕ್ಕಾಗಿಸಿ, ಒಡನಾಡಿಗಳಿಗೆ ಪ್ರೇಕ್ಷಕರಿಗೆ ನಗುವನ್ನು ಉಣಬಡಿಸಿದರು. ರಂಗಸಲಾಂನಲ್ಲಿ ಇವರ ರಚನೆಯ ಕಾಮಿಡಿ ಕುರುಕ್ಷೇತ್ರ ನಾಟಕ ಪ್ರಕಟಿಸಲಾಗಿದೆ. ಸರಿದ ತೆರೆ, ಪುನರ್ಭವ, ಹಾಸ್ಯ ರಾಮಾಯಣ ಅಪ್ರಕಟಿತ ನಾಟಕಗಳು. 1998ರಲ್ಲಿ ನಾಗಪುರದಲ್ಲಿ ನಡೆದ ಅಖಿಲ ಭಾರತ ನಾಗರೀಕ ಸೇವಾ ನಾಟಕ ಸ್ಫರ್ದೆಯಲ್ಲಿ ಪ್ರಕಾಶ್ ನಟಿಸಿ ನಿರ್ದೇಶಿಸಿದ ಗೂಡು ನಾಟಕ ಪ್ರಥಮ ಬಹುಮಾನ ಗಳಿಸಿದೆ. ನಟಿಸಿದ ನಾಟಕಗಳಲ್ಲಿ ಬೂಟು ಬಂದೂಕುಗಳ ನಡುವೆ ಪ್ರಮುಖವಾಗಿದೆ. ಗೊರೂರಿನಲ್ಲಿ ಇವರ ತಂಡ ಪ್ರದರ್ಶಿಸಿದ ಸುಳಿಯಲ್ಲಿ ಸಿಕ್ಕವರು ನಾಟಕ ಇಂದಿಗೂ ನನ್ನ ಮನದಲ್ಲಿ ಸ್ಥಿರವಾಗಿ ನಿಂತಿದೆ.
-ಗೊರೂರು ಅನಂತರಾಜು, ಹಾಸನ.
Tags
ಲೇಖನ