ಬಿಎಸ್‌ವೈ ಸರ್ಕಾರ ಭದ್ರವಾಗಿರಲು ಕಾಂಗ್ರೆಸ್ ನಾಯಕರಿಂದಲೇ ಪರೋಕ್ಷ ಸಹಕಾರ..!?

 ಬೆಂಗಳೂರು, ಸೆ.29- ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರವನ್ನು ಇನ್ನು ಆರು ತಿಂಗಳ ಕಾಲ ಗಟ್ಟಿಯಾಗಿ ಉಳಿಯಲು ಅವಿಶ್ವಾಸದ ನಿರ್ಣಯದ ಮೂಲಕ ಕಾಂಗ್ರೆಸ್ ನಾಯಕರೇ ಪರೋಕ್ಷ ಸಹಕಾರ ನೀಡಿದ್ದಾರೆಯೇ ? ಈ ರೀತಿಯ ಚರ್ಚೆಯೊಂದು ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಸಂವಿಧಾನದ ಪ್ರಕಾರ ಯಾವುದೇ ಮುಖ್ಯಮಂತ್ರಿ ತಮ್ಮ ನಾಯಕತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಒಮ್ಮೆ ವಿಶ್ವಾಸ ಮತ ಪಡೆದು ಯಶಸ್ವಿಯಾದರೆ ಆರು ತಿಂಗಳವರೆಗೆ ಮತ್ತೊಮ್ಮೆ ವಿಶ್ವಾಸ ಸಾಬೀತು ಪಡಿಸುವ ಅಗತ್ಯ ಇಲ್ಲ. ವಿಶ್ವಾಸಮತ ಯಾಚನೆಯ ದಿನಾಂಕದಿಂದ ಆರು ತಿಂಗಳ ಕಾಲ ಸರ್ಕಾರ ಸುಭದ್ರವೆಂದೇ ಭಾವಿಸಲಾಗುತ್ತದೆ.



ವಿಧಾನಸಭೆಯಲ್ಲಿ ಕೇವಲ 68 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಏಕಾಏಕಿ ಅವಿಶ್ವಾಸ ನಿರ್ಣಯ ಮಂಡನೆಯ ನಿರ್ಧಾರ ಪ್ರಕಟಿಸಿದಾಗ ರಾಜಕೀಯ ವಲಯದಲ್ಲಿ ಆಶ್ಚರ್ಯದ ಪ್ರಶ್ನೆಗಳೆದ್ದವು. ವಿಧಾನಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಸ್ಪಿಕರ್ ಅವರನ್ನು ಒಳಗೊಂಡು 117 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 67, ಜೆಡಿಎಸ್ 33, ಬಿಎಸ್‍ಪಿ ಒಂದು ಸಂಖ್ಯಾಬಲವನ್ನು ಹೊಂದಿದ್ದರೆ. ನಾಲ್ಕು ಸ್ಥಾನಗಳು ಖಾಲಿ ಇವೆ.

ಅವಿಶ್ವಾಸ ಮತ ಗೆಲ್ಲಬೇಕಾದರೆ ಬಿಜೆಪಿಗಿಂತ ಕನಿಷ್ಟ ಒಂದು ಮತವಾದರೂ ಹೆಚ್ಚಿರಬೇಕು. ಅಂದರೆ ಪ್ರತಿಪಕ್ಷಗಳು ಕನಿಷ್ಟ 118 ಶಾಸಕರನ್ನು ಕ್ರೂಢಿಕರಿಸಬೇಕಿತ್ತು. ಕಾಂಗ್ರೆಸ್, ಜೆಡಿಎಸ್ ಎರೆಡು ಪಕ್ಷಗಳ ಶಾಸಕರನ್ನು ಸೇರಿದರೂ ಗರಿಷ್ಠ ಮತಗಳು 101ನ್ನು ದಾಟುವುದಿಲ್ಲ. ಕೊರೊನಾ ಸೋಂಕಿನಿಂದಾಗಿ ಬಿಜೆಪಿಯ 12, ಕಾಗ್ರೆಸ್‍ನ 10, ಜೆಡಿಎಸ್ನ 6 ಮಂದಿ ಶಾಸಕರು ಅವೇಶನಕ್ಕೆ ಬಂದಿರಲಿಲ್ಲ.

ಅವೇಶನದಿಂದ ದೂರ ಉಳಿದ ಶಾಸಕರನ್ನು ಹೊರತು ಪಡಿಸಿ ಬಿಜೆಪಿ 105, ಕಾಂಗ್ರೆಸ್ 57, ಜೆಡಿಎಸ್ 27 ಶಾಸಕರನ್ನು ಹೊಂದಿತ್ತು. ಜೆಡಿಎಸ್-ಕಾಂಗ್ರೆಸ್ ಶಾಸಕರ ಸಂಖ್ಯಾಬಲ 87 ಮಂದಿಯಷ್ಟೇಕ್ಕೆ ಸೀಮಿತವಾಗಿತ್ತು. ಬಿಎಸ್‍ಪಿಯ ಮಹೇಶ್ ತಟಸ್ಥವಾಗಿದ್ದು, ಪಕ್ಷೇತರ ಶಾಸಕ ನಾಗೇಶ್ ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ.

ಹೀಗಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ನಿರ್ಧಾರ ಕೈಗೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಸಕಾಂಗ ಸಭೆಯ ನಿರ್ಣಯದ ಬಳಿಕವಾದರೂ ಕಾಂಗ್ರೆಸ್ ನಾಯಕರು ಜೆಡಿಎಸ್ ವರಿಷ್ಠರ ಜೊತೆ ಚರ್ಚಿಸದೆ ತಮ್ಮಷ್ಟಕ್ಕೆ ತಾನೇ ಅವಿಶ್ವಾಸ ಮಂಡಿಸಿ ಚರ್ಚೆಗೆ ಅವಕಾಶ ಕೇಳಿದರು.

ಬಿಡಿಎ ಹಗರಣವನ್ನು ನಿಲುವಳಿ ಅಥವಾ ಸಾರ್ವಜನಿಕ ಮಹತ್ವದ ವಿಷಯ ಸೇರಿದಂತೆ ಯಾವುದೇ ರೂಪದಲ್ಲೂ ಚರ್ಚೆ ನಡೆಸಲು ಬಿಜೆಪಿ ಬಿಡುವುದಿಲ್ಲ. ಸಿಎಂ ಕುಟುಂಬದ ಸದಸ್ಯರು ಹಗರಣದಲ್ಲಿ ಭಾಗಿಯಾಗಿರುವ ಮತ್ತು ಆರ್‍ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವ ಆರೋಪಗಳಿದ್ದು, ಅದಕ್ಕೆ ಪೂರಕವಾಗಿ ಕೆಲವು ಸಾಕ್ಷ್ಯಗಳಿರುವುದರಿಂದ ಚರ್ಚೆಯ ವೇಳೆ ಬಿಜೆಪಿ ಆಕ್ರಮಣಕಾರಿಯಾಗಿ ತಿರುಗಿ ಬೀಳಲಿದೆ.

ಚರ್ಚೆಗೆ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಅವಿಶ್ವಾಸ ನಿಲುವಳಿಯನ್ನು ಮಂಡಿಸಿದರೆ ಯಾವ ವಿಷಯ ಬೇಕಾದರೂ ಚರ್ಚಿಸಬಹುದು, ಅವಿಶ್ವಾಸ ನಿಲುವಳಿ ಇತ್ಯರ್ಥವಾಗದೆ ಅವೇಶನವನ್ನು ಅನಿದೀಷ್ಟಾವಗೆ ಮುಂದೂಡುವಂತೆಯೂ ಇಲ್ಲ. ಒಂದು ವೇಳೆ ಆ ರೀತಿ ಮುಂದೂಡಿದ್ದರೆ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತೆ. ಹಾಗಾಗಿ ಚರ್ಚೆಗೆ ಅವಕಾಶ ಸಿಕ್ಕೆ ಸಿಗುತ್ತೆ ಎಂಬೇಲ್ಲಾ ಲೆಕ್ಕಾಚಾರಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿರುವುದಾಗಿ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಅದು ನಿಜವೆಂದೇ ಭಾವಿಸಬಹುದು. ಆದರೆ ಅವಿಶ್ವಾಸ ನಿರ್ಣಯದಂತ ಮಹತ್ವದ ವಿಷಯವನ್ನು ಸೂರ್ಯ ಮುಳುಗಿದ ಮೇಲೆ ಚರ್ಚೆಗೆ ಕೈಗೆತ್ತಿಕೊಂಡಿದ್ದು ಪ್ರಶ್ನಾರ್ಹವಾಗಿದೆ. ಆ ವೇಳೆಗೆ ಚರ್ಚೆ ಮಾಡಲು ಯಾರಿಗೂ ಆಸಕ್ತಿ ಉಳಿದಿರಲಿಲ್ಲ. ಸಮಯದ ಕೊರತೆಯಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್ ಮಾತ್ರ ಮಾತನಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನೇ ಸದನದಲ್ಲಿ ಪುನರುಚ್ಚರಿಸಿದರು. ಈ ಮಾತುಗಳನ್ನು ಮೊದಲೇ ನಿರೀಕ್ಷಿಸಿದ್ದ ಬಿಜೆಪಿ ನಾಯಕರು ಕಾಂಗ್ರೆಸ್‍ನ ಆರೋಪಗಳಿಗೆ ಆಕ್ರಮಣಕಾರಿ ವಾಗ್ಧಾಳಿ ನಡೆಸಿದರು. ರಾಜಕೀಯ ನಿವೃತ್ತಿಯ ಸವಾಲುಗಳನ್ನೊಡ್ಡಿದರು.

ಒಂದು ಹಂತದಲ್ಲಿ ಬಿಡಿಎ ಹಗರಣಕ್ಕೆ ಕಾಂಗ್ರೆಸ್‍ನ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ, ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೂ ಹಗರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿರುಗುಬಾಣ ಎಸೆದಾಗ, ಕಾಂಗ್ರೆಸ್ ಪಾಳೇಯ ಒಂದು ಕ್ಷಣ ತಬ್ಬಿಬ್ಬಾಯಿತು.

ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಖಾಸಗಿ ಚಾನೇಲ್ ನೀಡಿದ್ದ ಮಾಹಿತಿಯನ್ನಷ್ಟೇ ಇಟ್ಟುಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರು ಅವಿಶ್ವಾಸ ನಿಲುವಳಿಯ ಚರ್ಚೆಯಲ್ಲೂ ಪರಿಣಾಮಕಾರಿ ಪರಿಣಾಮಗಳನ್ನೇನು ಉಂಟು ಮಾಡಲಿಲ್ಲ. ಕನಿಷ್ಠ ಪ್ರಮಾಣದ ತನಿಖೆ ನಡೆಸಲು ಸರ್ಕಾರ ಒಪ್ಪಲಿಲ್ಲ.

ಆರೋಪ ಮಾಡಿದವರು ನೀವು, ನೀವೆ ಕೋರ್ಟ್‍ಗೆ ಹೋಗಿ ಸಾಬೀತು ಮಾಡಿ ಎಂಬ ವಿತಂಡ ವಾದ ಆಡಳಿತ ಪಕ್ಷದಿಂದ ಬಂತು. ಅವರು ಒಪ್ಪಲಿಲ್ಲ ಇವರು ಪಟ್ಟು ಹಿಡಿಯಲಿಲ್ಲ. ಮಾತನಾಡಲು ಅವಕಾಶ ಪಡೆದ ಇಬ್ಬರು ನಾಯಕರು ತಮಗನಿಸಿದ್ದನ್ನೇಲ್ಲಾ ಹೇಳಿ ಸದನದಿಂದ ಹೊರ ಹೋಗಿ ವಿಶ್ರಾಂತಿ ಪಡೆಯಲಾರಂಭಿಸಿದರು.

ಮೊದಲೇ ನಿರ್ಧರಿಸಿದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿಶ್ವಾಸ ನಿರ್ಣಯವನ್ನು ಧ್ವನಿಮತಕ್ಕೆ ಹಾಕಿ ಅವಿಶ್ವಾಸ ಗೋತ್ತುವಳಿ ತಿರಸ್ಕøತವಾಗಿದೆ ಎಂದು ಪ್ರಕಟಿಸಿಬಿಟ್ಟರು. ಅಲ್ಲಿಗೆ ಕಾಂಗ್ರೆಸ್ ತಾನಂದುಕೊಂಡಂತೆ ವಿಧಾನಸಭೆಯ ಕಡತಗಳಲ್ಲಿ ಬಿಡಿಎ ಹಗರಣದ ಮಾಹಿತಿಯನ್ನು ದಾಖಲಾಗುವಂತೆ ಮಾಡಿದ ಬಿಗುಮಾನದಿಂದ ಎದೆಯುಬ್ಬಿಸಿ ಹೊರ ಬಂದಿತ್ತು. 0

ಈ ಮೂಲಕ ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದ್ದನ್ನು ಕಂಡು ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಿರಿಯ ಸಚಿವರು ಮಾಸ್ಕ್ ಮರೆಯಲ್ಲಿ ಮುಸುಮುಸು ನಗುತ್ತಿದ್ದರು.

ಸಂಪುಟ ವಿಸ್ತರಣೆಯ ಮೂಲಕ ಅಂತಂತ್ರಕ್ಕೆ ಸಿಲುಕುವ ಅಳುಕಿನಲ್ಲೇ ದಿನ ಕಳೆಯುತ್ತಿದ್ದ ಯಡಿಯೂರಪ್ಪ ಅವರ ಸರ್ಕಾರ ಕಾಂಗ್ರೆಸ್‍ನ ಪರೋಕ್ಷ ಸಹಕಾರದಿಂದ ನಿರಾತಂಕವಾಗಿದೆ. ಇನ್ನಾರು ತಿಂಗಳ ಕಾಲ ಯಡಿಯೂರಪ್ಪ ಅವರ ದರ್ಬಾರ್ ಅಭಾದಿತವಾಗಿ ಮುಂದುವರೆಯಲಿದೆ.

ಕಾಂಗ್ರೆಸ್‍ನಂತೆ ಬಿಜೆಪಿಯಲ್ಲೂ ಮೂಲನಿವಾಸಿಗಳು ಮತ್ತು ವಲಸಿಗರು ಎಂಬ ತಿಕ್ಕಾಟ ಆರಂಭವಾಗಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಈವರೆಗೂ 28 ಸ್ಥಾನಗಳು ಭರ್ತಿಯಾಗಿ ಆರು ಬಾಕಿ ಉಳಿದಿವೆ. ಭರ್ತಿಯಾದ ಸ್ಥಾನಗಳಲ್ಲಿ 11 ಮಂದಿ ವಲಸಿಗರೆ ಇದ್ದಾರೆ. ಬರೋಬರಿ ಶೇ.40ರಷ್ಟು ಸ್ಥಾನಗಳನ್ನು ವಲಸಿಗರು ತುಂಬಿಕೊಂಡಿದ್ದಾರೆ.

ಖಾಲಿ ಇರುವ ಆರು ಸ್ಥಾನಗಳಿಗೆ ಸಂಪುಟ ವಿಸ್ತರಣೆಯಾದರೆ ಅದರಲ್ಲೂ ಮೂರು ಮಂದಿ ಮತ್ತೆ ವಲಸಿಗರೆ ಬಂದು ಕೂರುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಆರು, ಏಳು ಬಾರಿ ಆಯ್ಕೆಯಾದ ಘಟಾನುಘಟಿಗಳು ರಾಜಕೀಯ ಅನಿವಾರ್ಯತೆಯೆಂದು ಈವರೆಗೂ ತುಟಿಪಿಟಿಕ್ ಎನ್ನದೆ ಅವುಡುಗಚ್ಚಿ ಸಹಿಸಿಕೊಂಡಿದ್ದಾರೆ.

ವಲಸಿಗರ ತ್ಯಾಗದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬುದು ಎಷ್ಟು ಸತ್ಯವೋ, ಮೂಲ ನಿವಾಸಿಗಳ ಸಹಿಷ್ಣುತೆಯಿಂದ ಸರ್ಕಾರ ಉಳಿದಿದೆ ಎಂಬುದು ಅಷ್ಟೆ ಸತ್ಯ. ಆದರೆ ಮುಂದಿನ ಸಂಪುಟ ವಿಸ್ತರಣೆಯ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಈವರೆಗಿನ ಪ್ರಶಾಂತತೆ ಉಳಿದಿರುತ್ತೆ ಎಂದು ಹೇಳಲು ಸಾಧ್ಯವಿರಲಿಲ್ಲ. ಈ ಹಿಂದೆ ಯಡಿಯೂರಪ್ಪ ಅವರು ಅಕಾರ ಕಳೆದುಕೊಳ್ಳುವಾಗಿನ ಅಲ್ಲೋಲ್ಲಕಲ್ಲೋಲ ಪರಿಸ್ಥಿತಿ ಮತ್ತೆ ನಿರ್ಮಾಣವಾಗಬಹುದು ಎಂಬ ಆತಂಕ ಇತ್ತು. ಆದರೆ ಈಗ ಕಾಂಗ್ರೆಸ್ ನಾಯಕರೆ ತಮ್ಮ ಎದುರಾಳಿ ಸರ್ಕಾರವನ್ನು ಭದ್ರಗೊಳಿಸಿ ಬಿಟ್ಟಿದ್ದಾರೆ.

ಸಂಪುಟ ವಿಸ್ತರಣೆಯ ಬಳಿಕ ಒಂದು ವೇಳೆ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡರು ಆರು ತಿಂಗಳವರೆಗೆ ಅವಿಶ್ವಾಸ ನಿಳುವಳಿ ಮಂಡಿಸಲು ಯಾರಿಗೂ ಅವಕಾಶ ಇಲ್ಲ. ಅಂದ ಮೇಲೆ ಕಾಂಗ್ರೆಸ್ ನಾಯಕರ ರಾಜಕೀಯೇತರ ಆಪ್ತಮಿತ್ರ ಯಡಿಯೂರಪ್ಪ ಅವರು ಮತ್ತಷ್ಟು ಗಟ್ಟಿಯಾದರು. ಬಿಜೆಪಿಯಲ್ಲಿ ಒಳಜಗಳ ಹೆಚ್ಚಾಗಿ ಹೈಕಮಾಂಡ್‍ನ ಒತ್ತಡಕ್ಕೆ ಮಣಿದೋ ಅಥವಾ ಸ್ವಯಂ ಇಚ್ಚೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಂತೂ ತೀರಾ ಕಡಿಮೆ.

ಒಂದು ವೇಳೆ ಸಂಪುಟ ವಿಸ್ತರಣೆಯ ಬಳಿಕ ಭಿನ್ನಮತ ಭುಗಿಲೇದ್ದರೂ ಅದನ್ನು ತಣಿಸಲು ಸಾಕಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಈ ನಡುವೆ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳು ಎದುರಾಗಲಿವೆ. ಅವುಗಳಲ್ಲಿ ಬಿಜೆಪಿ ಗೆದ್ದರೆ ಮತ್ತೆ ಯಡಿಯೂರಪ್ಪ ಅವರ ನಾಯಕತ್ವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಬಾಕಿ ಉಳಿದ ಸಮಯದಲ್ಲಿ ಭೀನ್ನಮತೀಯರನ್ನು ಮನವೋಲಿಸಿ ಸರ್ಕಾರ ಉಳಿಸಿಕೊಳ್ಳುವುದನ್ನು ರಾಜಾಹುಲಿಗೆ ಯಾರು ಹೇಳಿ ಕೊಡಬೇಕಿಲ್ಲ.

ಬಹಿರಂಗವಾಗಿ ಯಡಿಯೂರಪ್ಪ ಅವರನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಇದ್ದೇಲ್ಲಾ ಗೋತ್ತಿಲ್ಲದೆ ಏನಿಲ್ಲ. ಗೋತ್ತಿದ್ದು ಪ್ರಯೋಜನಕ್ಕೆ ಬಾರದ ಅವಿಶ್ವಾಸ ನಿಲುವಳಿ ಸೂಚನೆ ಮಂಡಿಸಿದ್ದಾದರೂ ಯಾಕೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್‍ನಲ್ಲಿ ಮೂಲೆ ಗುಂಪಾಗಿರುವ ನಾಯಕರು ಕೇಳಲಾಂಭಿಸಿದ್ದಾರೆ.

ಅವಿಶ್ವಾಸ ನಿರ್ಣಯ ಗೆದ್ದ ಬಳಿಕ ಯಡಿಯೂರಪ್ಪ ಅವರು ತರಾತುರಿಯಲ್ಲಿ ದೆಹಲಿ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಕ್ಷಣವೇ ಸಂಪುಟ ವಿಸ್ತರಣೆಯಾದರೆ ಯಾವುದೇ ಅಡ್ಡ ಪರಿಣಾಮಗಳಾದರೂ ಸರಿಪಡಿಸಿಕೊಂಡು ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.

Post a Comment

Previous Post Next Post