19 ವರ್ಷಗಳಿಂದ ಗುಡಿ ಕಟ್ಟಿ ಕೊರಗಜ್ಜ ದೈವ ಆರಾಧಿಸುತ್ತಿರುವ ಮುಸ್ಲಿಂ ಕುಟುಂಬ

ಮಂಗಳೂರು: ಕೊರಗಜ್ಜ ದೈವದ ಮೇಲೆ ಕರಾವಳಿ ಜನರಿಗೆ ಅಪಾರ ನಂಬಿಕೆ. ತುಳುನಾಡಿನ ಆರಾಧ್ಯ ದೈವ ಹಾಗು ಕಾರಣಿಕ ಶಕ್ತಿ ಎಂದೇ ಕೊರಗಜ್ಜನನ್ನು ಪರಿಗಣಿಸಲಾಗುತ್ತದೆ.  ಹಿಂದೂಗಳು ಆರಾಧಿಸುವ ಕೊರಗಜ್ಜ ದೈವವನ್ನು ಮುಸ್ಲಿಂ ಕುಟುಂಬವೊಂದು ಗುಡಿ ಕಟ್ಟಿ ಭಯಭಕ್ತಿಯಿಂದ ಆರಾಧಿಸುವ ಮೂಲಕ ಧರ್ಮ ಸಾಮರಸ್ಯಕ್ಕೊಂದು ಬೆಸುಗೆ ಹಾಕಿದ್ದಾರೆ.


ಮಂಗಳೂರು ಹೊರವಲಯದ ಮುಲ್ಲಿ ಸಮೀಪದ ಕವತ್ತಾರು ಗ್ರಾಮದ ಖಾಸಿಮ್ ಸಾಹೇಬ್ ಕಳೆದ 19 ವರ್ಷಗಳಿಂದ ತಮ್ಮ ಮನೆ ಆವರಣದಲ್ಲಿ ತುಳನಾಡಿನ ಆರಾಧ್ಯ ದೈವಗಳಿಗೆ ಗುಡಿ ಕಟ್ಟಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಖಾಸಿಮ್ ಸಾಹೇಬರಿಗೆ ಸ್ವಾಮಿ ಕೊರಗಜ್ಜನೆಂದರೆ ಎಲ್ಲಿಲ್ಲದ ಭಯಭಕ್ತಿ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಸ್ಲಿಂ ಕುಟುಂಬದಿದವರಾದ ಖಾಸಿಮ್ ಸಾಹೇಬ್ 35 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಮಂಗಳೂರಿನ ಮುಲ್ಕಿ ಬಳಿಯ ಕವತ್ತಾರು ಗ್ರಾಮದ ಅತಿಕಾರಿಬೆಟ್ಟು ಎಂಬಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು‌.

ಮರದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರಿಗೆ 19 ವರ್ಷಗಳ ಹಿಂದೆ ಒಂದಿಲ್ಲ ಒಂದು ಸಮಸ್ಯೆಗಳು ಶುರುವಾಯ್ತಂತೆ. ಮಗನೊಬ್ಬ ಅಕಾಲಿಕ ಮರಣ ಹೊಂದಿ ಖಾಸಿಮ್ ಸಾಹೇಬರು ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಮಕ್ಕಳ ಮದುವೆಯಾಗದ ಚಿಂತೆ ಜೊತೆಗೆ ಅವರ ಕಾಲಿಗೂ ಗಾಯವಾಗಿತ್ತಂತೆ. ಈ ಬಗ್ಗೆ ಹಲವೆಡೆ ವಿಚಾರಿಸಿದಾಗ, ಕೊರಗಜ್ಜ ದೈವವನ್ನು ಆರಾಧಿಸಬೇಕು ಅಥವಾ ಆ ಜಾಗ ಬಿಟ್ಟು ಹೋಗಬೇಕು ಎಂದು ದೈವ ನುಡಿದಿತ್ತಂತೆ. ಈ ನಿಟ್ಟಿನಲ್ಲಿ ಕೊರಗಜ್ಜನ ಸೇವೆಗೆ ಮುಂದಾದ ಖಾಸಿಮ್ ಸಾಹೇಬ್ ತಮ್ಮ ಸಮುದಾಯದಿಂದ ಭಾರೀ ವಿರೋಧ ಕೂಡ ಎದುರಿಸಬೇಕಾಯಿತಂತೆ.

ಅದನ್ನೆಲ್ಲ ಲೆಕ್ಕಿಸದ ಖಾಸಿಮ್ ಸಾಹೇಬರು ತುಳುನಾಡಿನ ರೂಢಿಯಂತೆ ಕೊರಗಜ್ಜ ದೈವವನ್ನು ಆರಾಧಿಸಲು ಮುಂದಾದರು. ಭಯಭಕ್ತಿಯಿಂದ ದೈವಗಳನ್ನು ಆರಾಧಿಸಿದರು. ಆನಂತರ ಖಾಸಿಮ್ ಸಾಹೇಬರ ಎಲ್ಲ ಸಮಸ್ಯೆಗಳೂ ಪರಿಹಾರವಾದವಂತೆ. ಅಂದಿನಿಂದ ಇಂದಿನವರೆಗೂ ತಮ್ಮ ಮನೆಯ ಪಕ್ಕದಲ್ಲಿಯೇ ಕೊರಗಜ್ಜನ ಗುಡಿ ನಿರ್ಮಿಸಿ ಪ್ರತಿದಿನ ಅದರ ಪೂಜೆಯಲ್ಲಿ ತೊಡಗಿದ್ದಾರೆ.

ಖಾಸಿಮ್ ಸಾಹೇಬರು ನಿರ್ಮಿಸಿರುವ ದೈವಸ್ಥಾನದಲ್ಲಿ ಕೊರಗಜ್ಜ ದೈವದ ಜೊತೆಗೆ ಕೊರತಿ ದೈವ, ಗುಳಿಗ ದೈವ ಮತ್ತು ದುರ್ಗಿಯನ್ನು ಪೂಜಿಸುತ್ತಿದ್ದಾರೆ. ಕೊರಗಜ್ಜ ದೈವಕ್ಕೆ ಪ್ರತಿದಿನ ಎರಡು ಬಾರಿ ಪೂಜೆ ಸಲ್ಲಿಸುವ ಇವರು ಇಡೀ ದಿನ ಗುಡಿಯ ಬಳಿಯೇ ಕಾಲ ಕಳೆಯುತ್ತಾರೆ. ದೈವದ ಪೂಜೆ ಮಾಡಿ ಭಕ್ತರಿಗೆ ಪ್ರಸಾದ ನೀಡುವುದು, ದೈವದ ಮುಂದೆ ಪ್ರಶ್ನೆಗಳನಿಟ್ಟು ಪರಿಹಾರ ಸೂಚಿಸುವ ಕಾರ್ಯಕ್ಕೆ ಇವರೀಗ ಹೆಸರುವಾಸಿಯಾಗಿದ್ದಾರೆ. ದೈವದ ಆರಾಧನೆಯಲ್ಲಿ ತೊಡಗಿರುವುದರಿಂದ ಖಾಸಿಂ ಅವರು ಶುದ್ಧ ಸಸ್ಯಹಾರಿಗಳಾಗಿದ್ದಾರೆ. ಖಾಸಿಂ ಅವರ ಕುಟುಂಬವೇ ಕೊರಗಜ್ಜನ ಆರಾಧನೆ ಮಾಡುತ್ತದೆ. ಈ ಕ್ಷೇತ್ರಕ್ಕೆ ಎಲ್ಲಾ ಸಮುದಾಯದವರು ಯಾವುದೇ ಬೇಧವಿಲ್ಲದೆ ಪ್ರಾರ್ಥನೆಗೆ ಬರುತ್ತಾರೆ.

ಪ್ರತಿ 2 ವರ್ಷಕ್ಕೊಮ್ಮೆ ಇಲ್ಲಿ ಕೋಲ ಕೂಡ ನಡೆಯುತ್ತದೆ. ಗ್ರಾಮದ 75ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲ ಧರ್ಮದ ಜನರು ಭೇದ ಭಾವ ಇಲ್ಲದೇ ಈ ಗುಡಿಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ತುಳನಾಡಿನ ಅರಾಧ್ಯ ದೈವಗಳ ಗುಡಿಗಳಿಗೆ ಸರಣಿ ಅಪಚಾರ ಎಸಗುತ್ತಿರುವ ದುರುಳರು ಒಂದೆಡೆಯಾದರೆ ಇನ್ನೊಂದೆಡೆ ಖಾಸಿಮ್ ಸಾಹೇಬರಂತವರು ಸಾಮರಸ್ಯವನ್ನು ಎತ್ತಿಹಿಡಿದ್ದಾರೆ.

Post a Comment

Previous Post Next Post