ಅನಂತರಾಜೇಅರಸು ಬೇಲೂರು:
ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾದ ಬೇಲೂರು ಹಾಗೂ ಹಳೇಬೀಡಿಗೆ ಶೈಕ್ಷಣಿಕ ಪ್ರವಾಸ ಬರುವ ಶಾಲಾ ಮಕ್ಕಳು ತಂಗಲು ಅನುಕೂಲ ಆಗುವಂತೆ ಹೈಟೆಕ್ ತಂಗುದಾಣಗಳನ್ನು ಹಳೇಬೀಡು-ಬೇಲೂರು ನಡುವೆ ನಿರ್ಮಿಸಲು ಪ್ರವಾಸೋಧ್ಯಮ ಇಲಾಖೆ ನಿರ್ಧರಿಸಿದೆ.ಪ್ರವಾಸಿಕ್ಷೇತ್ರಕ್ಕೆ ಆಗಮಿಸುವ ಶಾಲಾ, ಕಾಲೇಜು ಮಕ್ಕಳಿಗೆ ಸುಸಜ್ಜಿತವಾದ ವಸತಿಗೃಹಗಳಿಲ್ಲ. ಖಾಸಗಿ ವಸತಿಗೃಹಗಳಲ್ಲಿ ಮಕ್ಕಳನ್ನು ಉಳಿಸಿಕೊಂಡು ಸಿಕ್ಕ ಸ್ಥಳದಲ್ಲೆ ಮಲಗಿ ಹೋಗುವ ಸ್ಥಿತಿಯೂ ಇದೆ. ಮಕ್ಕಳ ರಕ್ಷಣೆ ದೃಷ್ಟಿಯಿಂದ ಪೋಷಕರು ಮಕ್ಕಳನ್ನು ಪ್ರವಾಸ ಕಳುಹಿಸಲು ಹಿಂಜರಿಯುತ್ತಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆ, ಶಾಲಾ ಮಕ್ಕಳ ಅದರಲ್ಲೂ ಹೆಣ್ಣುಮಕ್ಕಳು ಹಾಗೂ ಶಿಕ್ಷಕಿಯರ ಹಿತದೃಷ್ಟಿಯಿಂದ ಹೊಟೇಲ್ ಒಳಗೊಂಡಂತೆ ಹೈಟೆಕ್ ವಸತಿಗೃಹಗಳ ನಿರ್ಮಿಸಲು ಯೋಜನೆ ರೂಪಿಸಿದೆ.
ಏಕಕಾಲದಲ್ಲಿ 1 ಸಾವಿರ ಮಕ್ಕಳು ಉಳಿದುಕೊಳ್ಳಲು ಅನುಕೂಲ ಆಗುವಂತೆ ಕಟ್ಟಡ ನಿರ್ಮಾಣ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಸರ್ಕಾರಿ ಶಾಲಾ ಮಕ್ಕಳಿಗೆ ಆದ್ಯತೆ ಖಾಸಗಿ ಶಾಲಾ ಮಕ್ಕಳಿಗೂ ಅವಕಾಶ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹಳೇಬೀಡು ಹಾಗೂ ಬೇಲೂರು ನಡುವೆ ರಸ್ತೆಪಕ್ಕದಲ್ಲಿ ಸೂಕ್ತವಾದ ಸರ್ಕಾರಿ ಸ್ಥಳ ಗುರುತಿಸಿ ಅಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ತರಹದ ಯೋಜನೆ ಇಡಿ ದೇಶದಲ್ಲಿ ಪ್ರಥಮ ಎನ್ನಲಾಗಿದೆ. ಇದೆ ಮಾದರಿಯಲ್ಲಿ ಹಂಪಿ,ವಿಜಯಪುರದಲ್ಲೂ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು ಇದು ಯಶಸ್ವಿಯಾದರೆ ಇತರ ಪ್ರವಾಸಿ ಸ್ಥಳದಲ್ಲಿ ನಿರ್ಮಿಸಲು ಪ್ರವಾಸೋಧ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಆಲೋಚಿಸಿದ್ದಾರೆ ಎನ್ನಲಾಗಿದೆ.
