ಬೇಲೂರು/ ಹಗರೆ : ಕೊರೋನ ಮನುಷ್ಯನ ಜೀವನವನ್ನೇ ನರಕಯಾತನೆಗೆ ತಂದಿದ್ದು, ಸಂಬಂಧಗಳೆ ಮಾಯವಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಲೂರು ತಹಶಿಲ್ದಾರ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಯು.ಮೋಹನ್‍ಕುಮಾರ್ ಹೇಳಿದರು.
ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೇಲೂರು ಘಟಕ ಹಾಗೂ ಹಗರೆ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಿಬ್ಬಂದಿಗಳಿಗೆ ಲಘು ಉಪಹಾರ ಹಾಗೂ ಮಾಸ್ಕ್, ಆಕ್ಸಿಮೀಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಆರೋಗ್ಯ ಕ್ಷೇತ್ರದ ಮಹತ್ವ ಈಗ ದೇಶದ ಪ್ರತಿ ಜನರಿಗೆ ತಿಳಿದಿದೆ, ಏಕೆಂದರೆ ಯಾವ ಅಧಿಕಾರ ಇದ್ದರೂ, ಎಷ್ಟೇ ಹಣ ಇದ್ದರೂ ಬದುಕಲು ಆರೋಗ್ಯ ಬೇಕು, ಇದನ್ನು ಜನತೆ ಅರ್ಥಮಾಡಿಕೊಳ್ಳಬೇಕೆಂದರು.
ರೆಡ್‍ಕ್ರಾಸ್ ಸಂಸ್ಥೆಯ ಬೇಲೂರು ಸಭಾಪತಿ ಬಲ್ಲೇನಹಳ್ಳಿ ರವಿಕುಮಾರ್ ಮಾತನಾಡಿ, ಕಳೆದ ವರ್ಷ ಇದೆ ಕೊರೊನಾ ಕಡಿಮೆಯಾಯಿತು ಎಂಬ ಆಶಾಭಾವನೆ ಇರಿಸಿಕೊಂಡು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ನವಕರ್ನಾಟಕ ಯುವಶಕ್ತಿ ಸಂಘಟನೆ ಸಹಭಾಗಿತ್ವದಲ್ಲಿ ಕೊರೊನ ವಾರಿಯರ್ರ್ಸಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೀಗ ಎರಡನೆ ಅಲೆ ಕಾಡುತ್ತಿದೆ. ಕೊರೋನ ನಿರ್ವಹಣೆಯಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ತಾಲ್ಲೂಕಿನ ಎಲ್ಲಾ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್,ತಂಪುಪಾನೀಯಗಳು, ಮತ್ತು ನೀರಿನ ಬಾಟಲಿಗಳನ್ನು ನೀಡುತ್ತಿದ್ದೇವೆ ಇದರ ಜೊತೆಗೆ ಲಯನ್ಸ್ ಸಂಸ್ಥೆ ಲಘು ಉಪಹಾರ ವ್ಯವಸ್ಥೆ ಮಾಡಿದೆ ಎಂದರು.
ಆರೋಗ್ಯ ಕೇಂದ್ರದಲ್ಲಿ ಸುಮಾರು 950 ಕ್ಕೂ ಅಧಿಕ ಕೊರೊನ ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು.ಪರೀಕ್ಷೆಗಳನ್ನು ಹೆಚ್ಚಿಸಿ ಗುಣಮಟ್ಟದ ಚಿಕಿತ್ಸೆ ನೀಡಿದ್ದೇವೆ,ಸಿಬ್ಬಂದಿಗಳೇ ಸೋಂಕಿತರಾದರು ನಂತರ ಗುಣಮುಖರಾಗಿ ಮರಳಿ ಕರ್ತವ್ಯಕ್ಕೆ ಹಾಜರಾದರು ಇದೆಲ್ಲದರ ನಡುವೆ ಆಸ್ಪತ್ರೆಗೆ ಅತ್ಯವಶ್ಯಕ ಸೌಲಭ್ಯಗಳಿಗಾಗಿ ಕೆಲವು ಮಾರ್ಪಾಡುಗಳನ್ನು ಇದೆ ಜುಲೈ ತಿಂಗಳಿನಿಂದ ಪ್ರಾರಂಭಿಸಲಾಗುತ್ತಿದೆ, ಸಿಬ್ಬಂದಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯಕ್ಕೆ ವೈದ್ಯಾಧಿಕಾರಿ ಡಾ.ವಿ.ಎಲ್.ಶಾಲಿನಿ ಶ್ಲಾಘನೆ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್‍ನ ಅಧ್ಯಕ್ಷ ಮಂಜೆಗೌಡ,ಅಂತೋಣಿಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಶಾಲಿನಿ, ರೆಡ್‍ಕ್ರಾಸ್ ಕಾರ್ಯದರ್ಶಿ ಮಹೇಶ್,ನಿರ್ದೇಶಕರಾದ ಹೆಚ್.ವಿ.ಗಿರೀಶ್, ಅಹಮದ್ಅಲಿಖಾನ್, ಮೋಹನ್‍ರಾಜ್,ಸೌಭಾಗ್ಯ ಅಂಥೋಣಿ, ಎ.ಸಿ.ನಿರಂಜನ್, ಧನಂಜಯ, ಎಸ್.ಕೆ.ಶಿವರಾಜ್,ಹೆಚ್,ಎಂ.ಕಾಂತರಾಜು, ಎಂ.ಜೆ.ಶಂಕರ್, ನಿವೃತ್ತ ಶಿಕ್ಷಕ ರಾಜೇಗೌಡ ಸಿಬ್ಬಂದಿಗಳಾದ ನಾಗರಾಜ್, ಮುಜೀಬ, ಅವಿನಾಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
