ಶಾಸನ ನೀಡಿದ ಹಲ್ಮಿಡಿ ಗ್ರಾಮದಲ್ಲಿ ೩ ವರ್ಷಕ್ಕೊಮ್ಮೆ ವಿಶೇಷ ಹಬ್ಬ. ನಾಲ್ಕು ಸಾವಿರ ಜನರಿಂದ ಬಾಗಿನ ಅರ್ಪಣೆ: ಇಲ್ಲಿಲ್ಲ ಜಾತಿ, ಮತ, ಪಂಥ

ಅನಂತರಾಜೇಅರಸು ಬೇಲೂರು

ಇದೊಂದು ಅಪರೂಪದ, ೩ ವರ್ಷಕ್ಕೆ ಒಮ್ಮೆ ನಡೆಯುವ ಹಿರೆಯೊಡೆಯಲಿಂಗೇಶ್ವರ  ದೇವರ ಜಾತ್ರಾಮಹೋತ್ಸವ. ೩ ಸಾವಿರಕ್ಕೂ ಹೆಚ್ಚು ಬಾಗಿನ ಅರ್ಪಣೆ, ಸುಮಾರು ೪ ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿ ಸೇರುತ್ತಾರೆ. 


ಹೂವಿನಿಂದ ಪೂಜಿಸುವಂತಿಲ್ಲ, ಮಹಿಳೆಯರು ಹೂವು ಮುಡಿಯುವಂತಿಲ್ಲ. ದೇವರ ಒಕ್ಕಲಿಗ ಕುಟುಂಬದಲ್ಲಿ ಮುಟ್ಟುಮೈಲಿಗೆ ಆಗುವಂತಿಲ್ಲ. ಜಾತ್ರಾ ಮಹೋತ್ಸವ ನಡೆಯುವ ೭ ದಿನ ಮುಂಚಿನಿಂದಲೇ  ಮಾಂಸಾಹಾರ ಸೇವನೆ, ರಾತ್ರಿ ವೇಳೆ ಯಾವುದೇ ರೀತಿಯ ಗಟ್ಟಿ ಶಬ್ಧ ಹೊರಹೊಮ್ಮಿಸುವಂತಿಲ್ಲ.

ಇಂತಹದ್ದೊಂದು ಸಂಸ್ಕಾರಯುತ, ಅರ್ಥಪೂರ್ಣ ಆಚರಣೆಯ ಜಾತ್ರಾಮಹೋತ್ಸವ ನಡೆದಿರುವುದು ನಾಡಿಗೆ ಪ್ರಥಮ ಕನ್ನಡ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮದಲ್ಲಿ. ವಿಶೇಷ ಎಂದರೆ ಇಲ್ಲಿ ಈ ಹಿರೆಡೆಲಿಂಗೇಶ್ವರ ದೇವರ ಜಾತ್ರಾಮಹೋತ್ಸವದಲ್ಲಿ ಸಕಲ ಪೂಜಾಕಾರ್ಯದ ಜವಾಬ್ದಾರಿ  ಪರಿಶಿಷ್ಟಜಾತಿಗೆ ಸೇರಿದವರಾಗಿದ್ದು ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತಿ, ಮತ, ಪಂಥ ಇಲ್ಲದೆ ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ ಹಾಗೂ ವಾಸ್ತವ




ಹೀಗಿದೆ ನೋಡಿ ಆಚರಣೆ: ಗ್ರಾಮಕ್ಕೆ ಅರ್ಧ ಫರ್ಲಾಂಗ್ ದೂರದಲ್ಲಿರುವ  ದೇವರ ಗದ್ದುಗೆ ಇರುವ ಬನದ ಬಳಿ ಈ ಪೂಜಾಕಾರ್ಯ ನಡೆಯಲಿದೆ. ಗ್ರಾಮಸ್ಥರು ತಮ್ಮ ಮನೆಯ ಹೆಣ್ಣು ಮಕ್ಕಳ ಹೆಸರಿನಲ್ಲಿ ಅರ್ಪಿಸುವ ಈ ಮರದ ಬಾಗಿನವನ್ನು ಜಾತ್ರೆಗೆ ೩ ದಿನ ಇರುವಾಗ ಗ್ರಾಮದ ವೀರಭದ್ರೇಶ್ವರ ದೇವಾಲಯದ ಬಳಿ ತುಂಬಿಕೊಡುತ್ತಾರೆ. ತುಂಬಿಕೊಟ್ಟ ಬಾಗಿನವನ್ನು ಪರಿಶಿಷ್ಟಜಾತಿ ಕುಟುಂಬದ ಪುರುಷರೇ ಹೊತ್ತುಕೊಂಡೊ ಹೋಗಬೇಕು. ಇದು ಸಂಪ್ರದಾಯ.

ಮೂರು ದಿನದ ಮುಂಚೆ ತೆಗೆದುಕೊಂಡು ಹೋದ ಬಾಗಿನವನ್ನು ೨ ರಾತ್ರಿ ಗದ್ದುಗೆ ಬಳಿ ಇಟ್ಟು ಪೂಜಿಸಲಾಗುತ್ತದೆ. ಪರಿಶಿಷ್ಟಜಾತಿಯ ಕುಟುಂಬಸ್ಥರು ಗದ್ದುಗೆ ಬಳಿಯೇ ಬಾಗಿನ ತುಂಬಿಡುತ್ತಾರೆ. ಪರಿಶಿಷ್ಟಜಾತಿಯ ದೇವರ ಒಕ್ಕಲಿಗರಾದ ಕಾಡಯ್ಯ ನೇತೃತ್ವದಲ್ಲಿನ ೯ ಕುಟುಂಬ ಈ ಎಲ್ಲಾ ಕಾರ್ಯಗಳ ನಡೆಸುತ್ತದೆ. ಈ ಕುಟುಂಬಗಳ ಸದಸ್ಯರು ಜಾತ್ರಾಮಹೋತ್ಸವಕ್ಕೆ ೧೫ ದಿನ ಮುಂಚಿತವಾಗೆ ಮಾಂಸಾಹಾರ ಬಿಟ್ಟಿರುತ್ತಾರೆ. ದೇವರ ಒಕ್ಕಲಿಗರು ೧ ವಾರದ ಮುಂಚಿನಿಂದಲೇ ಸೋರೆಕಾಯಿ ಹಾಗೂ ಕಾಳುಮೆಣಸು ಬಳಕೆ ಮಾಡಿದ ಸಾರನ್ನೇ ಸೇವಿಸಬೇಕು. ಇದೆ ಕುಟುಂಬ ೭ ದಿನದ ಹಿಂದೆ ಕಳಸಾಪುರದಿಂದ ೪ ಬಾಳೆಗೊನೆ ತಂದು ದೇವರ ಗದ್ದುಗೆಯ ಬನದ ಬಳಿ ಇರುವ ಹಗೇವಿನಲ್ಲಿ ಹಣ್ಣಾಗಲು ಹಾಕುತ್ತಾರೆ. ಹಗೇವಿಗೆ ಬಾಳೆಗೊನೆ ಹಾಕಿದ ಮೇಲೆ ಗ್ರಾಮದಲ್ಲಿ ಯಾವುದೇ ರೀತಿ ಗಟ್ಟಿಯಾದ ಶಬ್ಧ ಮಾಡುವಂತಿಲ್ಲ. ರಾತ್ರಿವೇಳೆ ಒಂದು ನಾಯಿ ಸಹ ಬೊಗಳುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥ ಚನ್ನೇಗೌಡ ಅವರು. ಈ ಹಗೇವಿನಲ್ಲಿ ಹಾವೊಂದು ಇದ್ದು ಇದು ಕೆಲವರಿಗೆ ಮಾತ್ರ ಕಣ್ಣಿಗೆ ಕಾಣಿಸುತ್ತದೆ ಎಂಬ ಪ್ರತೀತಿಯಿದೆ.





ಬಲಿಪಾಢ್ಯಮಿ ಹಿಂದಿನ ದಿನ ರಾತ್ರಿ ಬಾಗಿನಗಳಿಗೆ ಮತ್ತು ಹಿರೆಯೊಡೆಯಲಿಂಗೇಶ್ವರ ದೇವರ ದೊಡ್ಡ ಗದ್ದುಗೆ ಸೇರಿದಂತೆ ೭ ಗದ್ದುಗೆಗೆ ಅನ್ನಸಾರಿನ ಎಡೆ ಇಡಲಾಗುತ್ತದೆ. ಬಾಯಿಗೆ ಬಟ್ಟೆ ಕಟ್ಟಿಕೊಂಡು ಗುಡಾಣಗಳಿಗೆ ಸಾರಿಗೆ ಮೆಣಸಿನ ಕಾಯಿ ಬಳಸುವಂತಿಲ್ಲ. ಮೆಣಸು, ಜೀರಿಗೆ, ಕುಂಬಳಕಾಯಿಯಲ್ಲಿ ಸಾರು ಮಾಡಲಾಗುವುದು. ೭ ಗುಡಾಣಗಳಲ್ಲಿ ಎಡೆಗೆ ಆಹಾರ ತಯಾರಿಸಲಾಗುತ್ತದೆ. ಪರಿಶಿಷ್ಟಜಾತಿಯವರು ಸೇರಿದಂತೆ ಯಾರೂ ಬೇಕಾದರೂ ಎಡೆ ಇಟ್ಟ ಪ್ರಸಾದ ಸೇವಿಸಬಹುದು. ಈ ದೇವರಿಗೆ ಹೂವು ಬಳಸುವಂತಿಲ್ಲ. ವಿಬೂತಿ, ತೆಂಗಿನಕಾಯಿ, ಗಂಧದ ಕಡ್ಡಿ ಮಾತ್ರ ಬಳಕೆ. ಜಾತ್ರಾಮಹೋತ್ಸವದ ೧ ವಾರದ ಮುಂಚಿನಿಂದಲೇ ಇಡಿ ಗ್ರಾಮಸ್ಥರು ಮಾಂಸಾಹಾರ ಸೇವಿಸುವುದಿಲ್ಲ. ನಾವು ಬಾಗಿನ ಕಟ್ಟುವುದರಿಂದ ನಾವುಗಳೂ ಸಹ ಕಟ್ಟುನಿಟ್ಟು ಪಾಲನೆ ಮಾಡಲೇಬೇಕು ಎನ್ನುತ್ತಾರೆ ಗ್ರಾಮಸ್ಥರು. 

ಬೆಳಿಗ್ಗೆ ಭಕ್ತರಿಗೆ ಹಣ್ಣುಕಾಯಿ ಪೂಜೆ ಮಾಡಿಕೊಡುತ್ತಾರೆ. ದೂಪ್‌ಕೆಂಡ ಹಿಡಿಯುತ್ತಾರೆ. ಈ ದೇವರಿಗೆ ಅಡಿಕೆ, ಮೆಣಸು ಇಷ್ಟವಾದ ವಸ್ತು. ಭಕ್ತರು ಹರಕೆ ರೂಪದಲ್ಲಿ ನೀಡಿದ ಅಡಿಕೆ, ಮೆಣಸು, ಕರ್ಪೂರ ಇದನ್ನು ೭  ಮಂಗಳಾರತಿ ನಂತರ ಸೋರೆ ಬಿಡುತ್ತಾರೆ (ಭಕ್ತರತ್ತ ಚಿಮ್ಮುವುದು) ಇದನ್ನು ಪಡೆದ ಭಕ್ತರು ಸೇವಿಸುತ್ತಾರೆ. ಇದು ಸೇವಿಸಿದರೆ ಒಳ್ಳೆಯದಾಗಲಿದೆ ಎಂಬುದು ನಂಬಿಕೆ.

ಮಂಗಳಾರತಿ ಆದನಂತರ ದೇವರ ಒಕ್ಕಲಿಗರು ಹಾಗೂ ಬಾಗಿನ ಹೊತ್ತು ತಂದವರು ದೇವರಿಗೆ ಸಾಸ್ಟಾಂಗ ನಮನ ಅರ್ಪಿಸುತ್ತಾರೆ. ವಿಶೇಷ ಎಂದರೆ ಪದ್ಧತಿಯಂತೆ ಈ ದೇವರ ಒಕ್ಕಲಿಗರು ಕರಿಕಂಬಳಿ ಹೊತ್ತುಕೊಂಡೇ ಪೂಜಾಕಾರ್ಯದಲ್ಲಿ ತೊಡಗುತ್ತಾರೆ. ನಂತರ ಬಾಗಿನ ಕೊಟ್ಟವರ ಬಾಗಿನವನ್ನು ವಾಪಸ್ ತಂದು ವೀರಭದ್ರೇಶ್ವರ ದೇಗುಲದ ಬಳಿಗೆ ಹೊತ್ತು ತರುತ್ತಾರೆ. ಇದನ್ನು ಗ್ರಾಮದ ಇತರರು ಮನೆಗಳಿಗೆ ಕೊಂಡೊಯ್ಯುತ್ತಾರೆ. ಇನ್ನೊಂದು ವಿಶೇಷ ಎಂದರೆ ಅಡುಗೆ ಮಾಡಲು ಬಳಕೆ ಮಾಡಿದ್ದ ೭ ಗುಡಾಣಗಳನ್ನು ದೇವರ ಒಕ್ಕಲು ಕುಟುಂಬಸ್ಥರೆ ಕೊಂಡೊಯ್ಯುತ್ತಾರೆ. 

ದೇವರ ಕಾರ್ಯಕ್ಕೆ ಬರುವವರು ಚಪ್ಪಲಿ ಹಾಕಿ ಬರುವಂತಿಲ್ಲ. ಇಲ್ಲಿ ರಾಜಕಾರಣ ಪ್ರವೇಶ ಇಲ್ಲವೇ ಇಲ್ಲ. ೪೦೦ ಮನೆಗಳಿರುವ ಇಲ್ಲಿ ೧೫೦ ಕುಟುಂಬಗಳು ಪರಿಶಿಷ್ಟಜಾತಿಯವರು ಇದ್ದಾರೆ. ಇಂತಹದ್ದೊಂದು ಸಂಸ್ಕಾರ, ಸಂಸ್ಕೃತಿ ಪರವಾದ ಆಚರಣೆಗೆ ಕಿಂಚಿತ್ತೂ ಅಡ್ಡಿ ಬಾರದಂತೆ ನಡೆಸಿಕೊಂಡು ಬರುತ್ತಿರುವುದೆಂದರೆ ನಿಜಕ್ಕೂ ಮೆಚ್ಚತಕ್ಕದ್ದಾಗಿದೆ. ಇದೂ ನಮ್ಮ ಭಾರತದ ಹಳ್ಳಿಗಾಡಿನ ಸಂಸ್ಕಾರ-ಸಂಸ್ಕೃತಿ ಅಲ್ಲವೆ. ಇದು ನಿರಂತರವಾಗಿರಬೇಕಷ್ಟೇ.

೧೫ ಬಿಎಲ್‌ಆರ್‌ಪಿ-೪

ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ಬಾಗಿನದ ಮರಗಳನ್ನು ಪೂಜಿಸುತ್ತಿರುವುದು ಮತ್ತು ದೂಪರ‍್ಥಿ ಮಾಡುತ್ತಿರುವುದು

೧೫ ಬಿಎಲ್‌ಆರ್‌ಪಿ-೫

ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ಹಿರಿಯೊಡೆಯಲಿಂಗೇಶ್ವರ ದೇವರ ಜಾತ್ರಾಮಹೋತ್ಸವ ವೀಕ್ಷಿಸುತ್ತಿರುವ ಭಕ್ತರು

೧೫ ಬಿಎಲ್‌ಆರ್‌ಪಿ-೬

ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ಬಾಗಿನದ ಮರಗಳನ್ನು ಪುರುಷರು ವೀರಭದ್ರೇಶ್ವರಸ್ವಾಮಿ ದೇವಾಲಯದಿಂದ ಹೊತ್ತು ತರುತ್ತಿರುವುದು




Post a Comment

Previous Post Next Post