ಬೇಲೂರು : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಅವ್ಯವಸ್ಥೆಯಿಂದ ಕೂಡಿದ್ದು ಅಶುಚಿತ್ವ ತಾಂಡವಾಡುತ್ತಿದೆ ಎಂದು ಆರೋಪಿಸಿ ಕರವೇ (ಪ್ರವೀಣಶೆಟ್ಟಿಬಣ) ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬೇಲೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು |
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ವಿ.ಎಸ್. ಭೋಜೇಗೌಡ, ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ, ಅಲ್ಲದೆ ನೂರು ಹಾಸಿಗೆಗಳ ಮೇಲ್ದರ್ಜೆಗೆ ಏರಿದ್ದರೂ ಸಹ ರೋಗಿಗಳಿಗೆ ಯಾವುದೇ ಮೂಲಭೂತ ಸೌಲಭ್ಯ ದೊರಕುತ್ತಿಲ್ಲ. ಶೌಚಾಲಯ ಮತ್ತು ಆಸ್ಪತ್ರೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗುತ್ತಿಗೆದಾರರ ಹಿಡಿತದಲ್ಲಿ ಇಲ್ಲಿಯ ಅಧಿಕಾರಿಗಳಿದ್ದಾರೆ ಎಂದು ಆರೋಪಿಸಿದರು.
ಕೆಲವು ವೈದ್ಯರು ಯಾವುದೇ ಔಷಧಿ ಹಾಗೂ ಪರೀಕ್ಷೆಗಳನ್ನು ಹೊರಗಡೆ ಮಾಡಿಸುವಂತೆ ಬಂದಂತ ರೋಗಿ ಗಳಿಗೆ ತಾಕೀತು ಮಾಡಿ ಚೀಟಿ ಬರೆದು ಕಳುಹಿಸುತ್ತಿದ್ದಾರೆ ಎಂದು ದೂರಿದರು. ಉಪಾಧ್ಯಕ್ಷ ಎ.ರಾಘವೇಂದ್ರ ಹೊಳ್ಳ ಮಾತನಾಡಿ, ತಾಲೂಕಿನಲ್ಲಿ ಕಾಫಿ ತೋಟ ಶುಂಠಿ ಗದ್ದೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದಾರೆ. ಕೋವೀಡ್ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿದ್ದಾರೆ. ರೋಗ ರುಜಿನ ಬಂದಾಗ ಸರ್ಕಾರಿ ಆಸ್ಪತ್ರೆಯನ್ನು ನಂಬಿಕೊಂಡು ಚಿಕಿತ್ಸೆಗೆ ಬರುತ್ತಾರೆ. ರಕ್ತ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳು ಆಸ್ಪತ್ರೆ ಯಲ್ಲಿದ್ದರೂ ಸಹ ಕೆಲ ವೈದ್ಯರು ಖಾಸಗಿ ಪರೀಕ್ಷಾ ಕೇಂದ್ರಗಳಿಗೆ ಬರೆದು ಕಳಿಸುತ್ತಿದ್ದು ಒಮ್ಮೆ ರಕ್ತ ಪರೀಕ್ಷೆಗೆ ತೆರಳಿದರೆ ೧ ರಿಂದ ೨ ಸಾವಿರ ಹಣ ಕಟ್ಟಿಸಿಕೊಳ್ಳಲಾಗುತ್ತದೆ. ವೈದ್ಯರೆ ಮಧ್ಯ ವರ್ತಿಗಳಂತೆ ವರ್ತಿಸಿದ್ದು ಖಾಸಗಿ ಕ್ಲಿನಿಕ್ ಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಕೂಡಲೆ ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.
ಯುವ ಘಟಕದ ಅಧ್ಯಕ್ಷ ಅರುಣ್ ಸಿಂಗ್ ಮಾತನಾಡಿ, ಕೇವಲ ಕೋವಿಡ್ ಟೆಸ್ಟ್ ಮಾಡುವಾಗ ಸಮಯವನ್ನು ನಿಗದಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಡಯಾಲಿಸಿಸ್ ಹಾಗೂ ಅಪಘಾತವಾದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡದೆ ಬೇರೆ ಆಸ್ಪತ್ರೆಗೆ ಕಳುಹಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಾಲೂಕು ಆರೋಗ್ಯ ವೈಧ್ಯಾದಿಕಾರಿ ಡಾ ವಿಜಯ್ ಮಾತನಾಡಿ, ಅತಿ ಶೀಘ್ರದಲ್ಲಿ ವೈಧ್ಯರ ಸಭೆ ಕರೆದು ಯಾರು ಹೊರಗಡೆ ಔಷಧಿಗಳನ್ನು ಚೀಟಿ ಬರೆದು ಹೊರಗಡೆ ಕಳುಹಿಸುತ್ತಿದ್ದಾರೆ ಅವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಜೊತೆ ಸೌಜನ್ಯತೆಯಿಂದ ವರ್ತಿಸುವಂತೆ ಹಾಗೂ ಸ್ವಚ್ಚತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಪಧಾದಿಕಾರಿಗಳಾದ ರತ್ನಾಕರ್ ಕಾರ್ತಿಕ್, ಆದೇಶ್, ರಕ್ಷಿತ್, ಮೋಹಿತ್, ಚಂದನ್, ಹುಸೇನ್, ದೀಕ್ಷಿತ್ ಇತರರು ಹಾಜರಿದ್ದರು.