ಅರಕಲಗೂಡು: ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಂಗಸ್ವಾಮಿ ನಡೆಸದ ಕೃಷಿ ಇಲ್ಲ. ಯಾವುದೇ ಹೊಸ ಕೃಷಿ ಬಗ್ಗೆ ತಿಳಿದರೂ ತಮ್ಮ ಕೃಷಿ ಕ್ಷೇತ್ರದಲ್ಲಿ ಅದನ್ನು ಅಳವಡಿಸುವ ಪ್ರಯೋಗಶೀಲರು.
ತಾಲ್ಲೂಕಿನ ದೊಡ್ಡಮಗ್ಗೆಯ ಪ್ರಗತಿಪರ ಕೃಷಿಕ ಎಂ.ಸಿ. ರಂಗಸ್ವಾಮಿ ಅವರ ಕೃಷಿ ಕ್ಷೇತ್ರದ ಸಾಧನೆ ಇತರರಿಗೆ ಮಾದರಿಯಾಗಿದೆ.
ಅರಣ್ಯ ಕೃಷಿಯತ್ತ ಆಕರ್ಷಿತರಾಗಿ ತಮ್ಮ ಜಮೀನಿನಲ್ಲಿ ಸುಮಾರು 50 ಸಾವಿರ ಶ್ರೀಗಂಧದ ಗಿಡ ಬೆಳೆಸಿದ್ದಾರೆ. ಸಿಲ್ವರ್, ತೇಗ, ಹೆಬ್ಬೇವು ಸೇರಿದಂತೆ ವಿವಿಧ ಜಾತಿಯ ಮರಗಳ ಕೃಷಿ ನಡೆಸಿದ್ದಾರೆ.
5 ಸಾವಿರ ಅವಕಾಡೊ (ಬೆಣ್ಣೆಹಣ್ಣು), 3 ಸಾವಿರ ಸೀತಾಫಲ, 3 ಸಾವಿರ ಲಕ್ಷ್ಮಣ ಫಲ, 3 ಸಾವಿರ ನುಗ್ಗೆ, 3 ಸಾವಿರ ಹಲಸು, 6 ಸಾವಿರ ತೆಂಗಿನ ಗಿಡಗಳ ಕೃಷಿ ನಡೆಸಿದ್ದಾರೆ. ಪಾಲಿ ಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ.
ಹೈನುಗಾರಿಕೆಯನ್ನೂ ಅಳವಡಿಸಿ ಕೊಂಡಿರುವ ಇವರು ಅತ್ಯುನ್ನತ ತಂತ್ರಜ್ಞಾನದ ಡೇರಿ ತೆರೆದಿದ್ದು, 800 ಎಚ್ ಎಫ್ ತಳಿಯ ಹಸುಗಳು ನಿತ್ಯ 6 ಸಾವಿರ ಲೀಟರ್ ಹಾಲು ನೀಡುತ್ತವೆ. ನೀರಾವರಿಗಾಗಿ ನಿರ್ಮಿಸಿ ಕೊಂಡಿರುವ 4 ಕೆರೆಗಳಲ್ಲಿ 3 ಲಕ್ಷ ಮೀನಿನ ಮರಿಗಳ ಸಾಕಣೆ ನಡೆಸುವ ಮೂಲಕ ಮತ್ಸೋದ್ಯಮ ಮತ್ತು ನಾಟಿ ತಳಿ ಕೋಳಿಗಳು, ಜೇನು ಸಾಕಣೆಯನ್ನೂ ನಡೆಸಿದ್ದಾರೆ.ರಾಜ್ಯದ ವಿವಿಧ ಭಾಗಗಳಿಂದ ರೈತರು, ಕೃಷಿ ವಿದ್ಯಾರ್ಥಿಗಳು ಇವರ ಜಮೀನಿಗೆ ಭೇಟಿ ನೀಡುತ್ತಾರೆ. ಇವರ ಸಾಧನೆ ಗುರುತಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದಲ್ಲಿ 2021 ನೇ ಸಾಲಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಗಿದೆ. ರಂಗಸ್ವಾಮಿ ತಂದೆ ಎಂ.ಜೆ. ತಿಮ್ಮೇಗೌಡ, ತಾಯಿ ಲಕ್ಷ್ಮಮ್ಮ ಮತ್ತು ಸಹೋದರರು ಸೇರಿದಂತೆ ಇಡೀ ಕುಟುಂಬವೇ ಕೃಷಿಯಲ್ಲಿ ತೊಡಗಿಸಿಕೊಂಡಿದೆ.
ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿದೆ.