ಅರಸೀಕೆರೆ (ಉಚ್ಚಂಗಿದುರ್ಗ): ಗ್ರಾಮ ದೇವತೆ ದಂಡಿನ ದುರ್ಗಮ್ಮ ದೇವಿ ಜಾತ್ರೆಯನ್ನು ಕೋವಿಡ್ ಕಾರಣ ಸೀಮಿತ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸುವಂತೆ ತಹಶೀಲ್ದಾರ್ ಎಲ್.ಎಂ. ನಂದೀಶ್ ಸೂಚಿಸಿದರು.
ಅರಸೀಕೆರೆ ಗ್ರಾಮ ದೇವತೆ ದಂಡಿನ ದುರ್ಗಮ್ಮ ದೇವಿ ಜಾತ್ರೋತ್ಸವದ ಅಂಗವಾಗಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಡಿ.31ರಿಂದ ಜ.2ರವರೆಗೆ ನಡೆಯಲಿರುವ ಜಾತ್ರೆಗೆ 100 ಜನರು ಮಾತ್ರ ಸೇರಬೇಕು. ಜಾತ್ರೆಯನ್ನು ದೇವಸ್ಥಾನದ ಧಾರ್ಮಿಕ ಪಾರಂಪರಿಕ ಪೂಜೆಗಳಿಗೆ ಸೀಮಿತಗೊಳಿಸಲಾಗಿದೆ. ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಡಿಜೆ, ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ, ಹಾಗೂ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು.
ವೈದ್ಯರ ನೇಮಕಕ್ಕೆ ಒತ್ತಾಯ: ಅರಸೀಕೆರೆ ಅತಿ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಜಾತ್ರೆಗೆ ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ಕೂಡಲೇ ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ವೈದ್ಯರ ನೇಮಕಾತಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗೆ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ ಲಕ್ಷಣ, ಉಪಾಧ್ಯಕ್ಷ ಅಡ್ಡಿ ಚನ್ನವೀರಪ್ಪ, ಸಬ್ ಇನ್‌ಸ್ಪೆಕ್ಟರ್ ಕೆ.ನಾಗರತ್ನ, ಪಿಡಿಒ ಅಂಜಿನಪ್ಪ, ಪೂಜಾರ ಚಂದ್ರಪ್ಪ, ಪೂಜಾರಿ ಮರಿಯಪ್ಪ, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.