ಇಂತಹ ಏಜೆನ್ಸಿಗಳ ಮೇಲೀಗ ಯಾವುದೇ ನಿಯಂತ್ರಣವಿಲ್ಲ. ಇವುಗಳ ವಿರುದ್ಧ ಸರ್ಕಾರಕ್ಕೂ ದೂರು ಬರುತ್ತಿವೆ. ಆದ್ದರಿಂದ ಕಾಯ್ದೆ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕುವ ಜತೆಯಲ್ಲೇ ಅಸಂಘಟಿತ ವಲಯದಲ್ಲಿರುವ ಉದ್ಯೋಗಿಗಳಿಗೆ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ಕಾರ್ವಿುಕ ಇಲಾಖೆ ಕರ್ನಾಟಕ ಖಾಸಗಿ ಉದ್ಯೋಗ ಏಜೆನ್ಸಿ (ನಿಬಂಧನೆಗಳು) ವಿಧೇಯಕ 2022 ರೂಪಿಸುತ್ತಿದೆ. ಮುಂದಿನ ತಿಂಗಳು ಮಸೂದೆ ಸಿದ್ಧವಾಗಲಿದ್ದು, ಬಹುತೇಕ ವಿಧಾನಮಂಡಲದ ಜಂಟಿ ಅಧಿವೇಶನ ಅಥವಾ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಹಳ್ಳಿಗಾಡಿನಿಂದ ನಗರಗಳಿಗೆ ವಲಸೆ ಹೆಚ್ಚಾಗುತ್ತಿದೆ. ಪರಿಣಾಮ ವಂಚನೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರುದ್ಯೋಗವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಸಂಸ್ಥೆಗಳು ಖಾಸಗಿ ಹಾಗೂ ಸರ್ಕಾರದಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆಗೆ ಅಭ್ಯರ್ಥಿಗಳನ್ನು ಸರಬರಾಜು ಮಾಡಿ ವೇತನ ಸೇರಿ ಯಾವುದೇ ಸೌಲಭ್ಯ ನೀಡದೆ ವಂಚಿಸುತ್ತಿವೆ.
ಕಾಗದದಲ್ಲೇ ಸೌಲಭ್ಯ!: ಕಾರ್ವಿುಕರಿಗೆ ನಿರ್ದಿಷ್ಟ ಸೌಲಭ್ಯ ನೀಡಬೇಕೆಂಬ ನಿಯಮಗಳಿವೆ. ಕನಿಷ್ಠ ವೇತನ ಎಂಬುದು ಕಾಗದದಲ್ಲಿಯೇ ಉಳಿದಿದೆ. ಖಾಸಗಿ ಸಂಸ್ಥೆಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲದಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ಕಮಿಷನ್ ಮಾತ್ರವಲ್ಲ: ಖಾಸಗಿ ಸಂಸ್ಥೆಗಳಲ್ಲಿ, ಸರ್ಕಾರದಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆಯಲ್ಲಿ, ವಿದೇಶದಲ್ಲಿ, ಬೇರೆ ರಾಜ್ಯಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜಾಹೀರಾತು ನೀಡುವ ಸಂಸ್ಥೆಗಳು ಕಮಿಷನ್ಗಿಂತ ಹೆಚ್ಚಾಗಿ ಅರ್ಧ ಸಂಬಳವನ್ನೇ ಧೋಖಾ ಮಾಡುವುದು ಹೆಚ್ಚು.
ಅನೇಕ ಸಂಸ್ಥೆಗಳು ಖಾಸಗಿ ಹಾಗೂ ಸರ್ಕಾರಕ್ಕೆ ಉದ್ಯೋಗಿಗಳನ್ನು ಕಳುಹಿಸಿ ನೇರವಾಗಿ ತಮಗೆ ಹಣ ಬರುವಂತೆ ನೋಡಿಕೊಳ್ಳುತ್ತವೆ. ಕೆಲವು ಕಡೆ ಅಧಿಕಾರಿಗಳು ಹಾಗೂ ಏಜೆನ್ಸಿಗಳ ನಡುವೆ ಅಲಿಖಿತ ಒಪ್ಪಂದವಾಗಿ ನೇಮಕದ ಅರ್ಧ ಸಿಬ್ಬಂದಿಯೂ ಕೆಲಸ ಮಾಡುತ್ತಿರುವುದಿಲ್ಲ. ಹಣ ಮಾತ್ರ ಬಿಡುಗಡೆಯಾಗಿರುತ್ತದೆ. ಇಂತಹ ಎಷ್ಟು ಸಂಸ್ಥೆಗಳಿವೆ ಎಂಬ ಮಾಹಿತಿ ಸರ್ಕಾರದಲ್ಲೂ ಇಲ್ಲ. ಹೀಗಾಗಿ ಸರ್ಕಾರ ಕಾಯ್ದೆ ಮೊರೆ ಹೋಗುತ್ತಿದೆ. ದೆಹಲಿ, ಜಾರ್ಖಂಡ್ ಸೇರಿ ಕೆಲ ರಾಜ್ಯಗಳಲ್ಲಿ ಇಂತಹ ಕಾನೂನಿದೆ.
ನಕಲಿ ಸಂಸ್ಥೆಗಳೂ ಇವೆ: ಹಣ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಸಂಸ್ಥೆಗಳೂ ಇವೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಕಲಿ ಸಂದರ್ಶನ ನಡೆಸುತ್ತವೆಯಾದರೂ ಯಾವುದೇ ಉದ್ಯೋಗ ನೀಡಿರುವುದಿಲ್ಲ. ಜಾಹೀರಾತು ನೋಡಿ ಹಣ ಕಳೆದುಕೊಳ್ಳುವವರು ನಂತರ ಸರ್ಕಾರದ ಮೊರೆ ಹೋಗುತ್ತಾರೆ.
ಕಳ್ಳಸಾಗಣೆ ಆರೋಪ: ಕೆಲ ಸಂಸ್ಥೆಗಳು ಮಾನವ ಕಳ್ಳಸಾಗಣೆಗೂ ನೆರವಾಗುತ್ತಿವೆ; ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವೇಶ್ಯಾವಾಟಿಕೆಗೂ ತಳ್ಳಲಾಗುತ್ತಿದೆ ಎಂಬ ದೂರುಗಳಿವೆ.
ಕೋಟ್ಯಂತರ ರೂ. ವೆಚ್ಚ: ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರಕ್ಕೆ ನೇರವಾಗಿ ಸುಮಾರು 25 ಸಾವಿರ ನೌಕರರು ಗುತ್ತಿಗೆ ಅಥವಾ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಗಮ ಮಂಡಳಿಗಳು, ವಿಶ್ವವಿದ್ಯಾಲಯಗಳು, ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಸೇರಿ 1 ಲಕ್ಷಕ್ಕೂ ಹೆಚ್ಚಿನ ಕಾರ್ವಿುಕರಿದ್ದಾರೆ ಎಂದು ಹೇಳಲಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಇಂತಹ ಏಜೆನ್ಸಿಗಳ ಮೂಲಕ ನೌಕರಿ ಪಡೆದವರ ಮಾಹಿತಿ ಸರ್ಕಾರದಲ್ಲಿ ಇಲ್ಲ. ಸರ್ಕಾರ ಪ್ರತಿ ವರ್ಷ ಸುಮಾರು 400 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವೇತನಕ್ಕಾಗಿ ಪಾವತಿಸುತ್ತದೆ. ಅದರಲ್ಲಿ 150 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಖಾಸಗಿ ಏಜೆನ್ಸಿಗಳ ಪಾಲಾಗುತ್ತಿದೆ ಎಂಬ ಮಾಹಿತಿ ಇದೆ.
ಕಾಯಂ ನೇಮಕ ಪ್ರಸ್ತಾಪ: ಸರ್ಕಾರದ ಮಟ್ಟದಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆ ನೇಮಕ ಬಿಟ್ಟು ಖಾಲಿ ಹುದ್ದೆ ಭರ್ತಿ ಮಾಡಬೇಕೆಂಬ ಒತ್ತಾಯ ಇದೆ. ಹಿಂದೆ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಈ ನಿಟ್ಟಿನಲ್ಲಿ ಆಗಿನ ಸಿಎಂಗೆ ಪತ್ರ ಸಹ ಬರೆದಿದ್ದರು. ಆದರೆ ಆ ವಿಚಾರವಾಗಿ ಯಾವುದೇ ಬೆಳವಣಿಗೆ ಆಗಲಿಲ್ಲ. ಖಾಲಿ ಹುದ್ದೆಗಳ ಸಂಖ್ಯೆ 2.50 ಲಕ್ಷ ಮೀರಿದೆ.
ಖಾಸಗಿ ಏಜೆನ್ಸಿಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಅವುಗಳಿಗೆ ಕಡಿವಾಣ ಹಾಕಲು ಕಾಯ್ದೆ ಸಿದ್ಧಪಡಿಸುತ್ತಿದ್ದೇವೆ. ಸರ್ಕಾರಕ್ಕೇ ಇರಲಿ, ಖಾಸಗಿಗೇ ಇರಲಿ, ಉದ್ಯೋಗಿಗಳನ್ನು ಪೂರೈಸುವವರು ಕಾರ್ವಿುಕರಿಗೆ ಸರಿಯಾದ ಸೌಲಭ್ಯ ನೀಡಲೇ ಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇವೆ.
| ಅರಬೈಲ್ ಶಿವರಾಮ ಹೆಬ್ಬಾರ್ ಕಾರ್ವಿುಕ ಸಚಿವ
ಕಾನೂನಿನಲ್ಲಿ ಏನಿರುತ್ತದೆ?
- ಎಲ್ಲ ಖಾಸಗಿ ಏಜೆನ್ಸಿಗಳು ಸರ್ಕಾರದಲ್ಲಿ ನೋಂದಣಿ ಆಗಿರಬೇಕು, ಕಚೇರಿ ಮುಂಭಾಗದಲ್ಲಿ ನೋಂದಣಿ ಸಂಖ್ಯೆ ಸಹಿತ ಎಲ್ಲ ವಿವರ ಪ್ರಕಟಿಸಬೇಕು
- ಇಂತಹ ಸಂಸ್ಥೆ ಕಡ್ಡಾಯವಾಗಿ ರಾಜ್ಯದಲ್ಲಿ ಕಚೇರಿ ಹೊಂದಿರಬೇಕು, ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬ ಮಾಹಿತಿಯ ರಿಜಿಸ್ಟ್ರಾರ್ ಹೊಂದಿರಬೇಕು
- ಪ್ರತಿ ವರ್ಷ ನೋಂದಣಿ ನವೀಕರಣ ಕಡ್ಡಾಯ
- ಉದ್ಯೋಗಕ್ಕಾಗಿ ಬರುವವರಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ, ಉದ್ಯೋಗಿಗಳಿಗೆ ಫೋಟೋ ಗುರುತಿನ ಚೀಟಿ ನೀಡಬೇಕು
- ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕು
- ಉದ್ಯೋಗಿಗಳಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಠ ವೇತನ ಕೊಡಲೇಬೇಕು, ಉದ್ಯೋಗಿಗಳ ಖಾತೆಗೆ ನೇರವಾಗಿ ಪಾವತಿ ಅಥವಾ ಚೆಕ್ ವ್ಯವಸ್ಥೆ ಇರಬೇಕು
- ಪಿಎಫ್, ವಿಮೆ, ರಜೆ ಸೌಲಭ್ಯಗಳು ಕಡ್ಡಾಯ
- ಸರ್ಕಾರ ನಿಯೋಜನೆ ಮಾಡುವ ಇನ್ಸ್ಪೆಕ್ಟರ್ ಯಾವುದೇ ಸಂದರ್ಭದಲ್ಲಿ ಪರಿಶೀಲನೆ ಮಾಡಬಹುದು, 18 ವರ್ಷದೊಳಗಿನವರಿಗೆ ಉದ್ಯೋಗ ನೀಡುವಂತಿಲ್ಲ, ನೋಂದಣಿ ಮಾಡದ ಸಂಸ್ಥೆ ನೇಮಕ ಮಾಡುವಂತಿಲ್ಲ
ಯಾವ ಹುದ್ದೆ?: ಸೆಕ್ಯೂರಿಟಿ ಗಾರ್ಡ್, ಡೇಟಾ ಎಂಟ್ರಿ ಆಪರೇಟರ್, ಡಿ. ಗ್ರೂಪ್ ನೌಕರ, ಲಿಫ್ಟ್ ಆಪರೇಟರ್, ವಾಹನ ಚಾಲಕ, ಕಿರಿಯ ಸಹಾಯಕ, ಹೌಸ್ ಕೀಪಿಂಗ್, ಅಡುಗೆ ಯವರು, ವೈರ್ವುನ್, ಕಾರ್ಪೆಂ ಟರ್, ಮೆಕ್ಯಾನಿಕ್, ಮಾಲಿ, ಪೋಟೋಗ್ರಾಫರ್ ಇತ್ಯಾದಿ
ಮೋಸ ಹೇಗೆ?: ಡೇಟಾ ಎಂಟ್ರಿ ಆಪರೇಟರ್ಗೆ ಒಟ್ಟು ವೇತನ 16 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಮಾಡಿರುತ್ತದೆ. ಹಣ ಖಾಸಗಿ ಏಜೆನ್ಸಿಗೆ ಹೋಗುತ್ತದೆ. ಅವರು 10 ಸಾವಿರ ರೂ. ನೀಡಿ ಉಳಿದ ಮೊತ್ತ ಇಟ್ಟು ಕೊಳ್ಳುತ್ತಾರೆ.
ಶಿಕ್ಷೆ ಏನಿರಲಿದೆ?: ನಿಯಮ ಉಲ್ಲಂಘಿಸಿದಲ್ಲಿ ಎರಡು ವರ್ಷಗಳ ತನಕ ವಿಸ್ತರಿಸ ಬಹುದಾದ ಸಜೆಯ ಜತೆಗೆ ದಂಡ ವಿಧಿಸಬಹುದು. ಇನ್ಸ್ಪೆಕ್ಟರ್ಗಳು ನೀಡುವ ವರದಿ ಆಧರಿಸಿ ಶಿಕ್ಷೆಯ ಪ್ರಮಾಣ ನಿಗದಿ ಯಾಗುತ್ತದೆ. ಈ ವಿಚಾರದಲ್ಲಿ ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ. ಏಜೆನ್ಸಿಯ ಲೈಸನ್ಸ್ ರದ್ದು ಮಾಡಲಾಗುತ್ತದೆ.
ಕೃಪೆ: ವಿಜಯವಾಣಿ