ಈಗಿನ ಕಾಲದ ಪೋಷಕರಿಗೆ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಿದರೆ,ಒಳ್ಳೆಯ ಭವಿಷ್ಯ, ವಿದ್ಯಾಭ್ಯಾಸ, ಒಳ್ಳೆಯ ಉದ್ಯೋಗ,ದೊರೆಯುವುದಿಲ್ಲ ಎಂಬುದು ಪೋಷಕರ ಅಭಿಪ್ರಾಯ. ಹಾಗಾಗಿ ದುಬಾರಿ ಶುಲ್ಕ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇನ್ನೊಬ್ಬ ಹುಡುಗ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಅದರಲ್ಲೂ ಸ್ವಲ್ಪ ಮಟ್ಟಿಗೆ ವಿದ್ಯಾಭ್ಯಾಸವನ್ನು ಕಲಿತ ತಂದೆ ತಾಯಿಯ ಮಗನಾಗಿ ಈ ದಿನ ಸಿವಿಲ್ ಕೋರ್ಟ್ ನ್ಯಾಯಾಧೀಶನಾಗೆ ನೇಮಕಗೊಂಡಿರುವುದು ಹೆಮ್ಮೆಯ ವಿಷಯ. ವೈದ್ಯರು, ವಕೀಲರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಾಲೂಕ ದಂಡಾಧಿಕಾರಿಗಳು, ಉದ್ಯಮಿಗಳ ಮಕ್ಕಳು ಈ ರೀತಿ ಸಾಧನೆ ಮಾಡುವುದು ವಿಶೇಷವಲ್ಲ. ಏಕೆಂದರೆ ಈ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲವನ್ನು ತಂದೆ ತಾಯಿಗಳು ಒದಗಿಸಿರುತ್ತಾರೆ ಆದರೆ ಇಂತಹ ಕುಟುಂಬದಲ್ಲಿ ಹುಟ್ಟಿದ ಮಕ್ಕಳು ಮಾಡುವ ಸಾಧನೆ ವಿಶೇಷವೆನಿಸಿಕೊಳ್ಳುತ್ತದೆ. ಅಂತಹ ಒಬ್ಬರ ಪರಿಚಯವನ್ನು ನಾನಿಲ್ಲಿ ಮಾಡಿಕೊಡುತ್ತೇನೆ. ನಟರಾಜ್ ಎಸ್ ಟಿ ಎನ್ನುವ ಮುಗ್ಧ ಮುಖದ ಈ ಹುಡುಗ 5-6- 1993 ರಲ್ಲಿ ವಸಂತ ತೀರ್ಥಾಚಾರ್ ಎಂಬ ದಂಪತಿಗಳಿಗೆ ಬೇಲೂರು ತಾಲೂಕು ಸಂಶಟ್ಟಿ ಹಳ್ಳಿಯಲ್ಲಿ ಜನಿಸುತ್ತಾನೆ,
ತಂದೆ ತಾಯಿಗಳು ಜೀವನೋಪಾಯಕ್ಕಾಗಿ ಎನ್ ನಿಡಗೋಡು ಗ್ರಾಮ ಬೇಲೂರು ತಾಲೂಕು ಇಲ್ಲಿಗೆ ಬಂದು ನೆಲೆಸುತ್ತಾರೆ. ತಂದೆ ತಾಯಿ ಕೃಷಿ ಕಾರ್ಮಿಕರು, ತಂದೆ ಇದರ ಜೊತೆಗೆ ಮರಗೆಲಸ ಮಾಡುತ್ತಾರೆ, ಒಂದರಿಂದ ಐದನೇ ತರಗತಿಯ ವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಎನ್ ನಿಡಗೂಡು ಗ್ರಾಮದಲ್ಲಿ ವ್ಯಾಸಂಗ, 6ರಿಂದ 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಬೇಲೂರು ಇಲ್ಲಿ ವ್ಯಾಸಂಗ, ಎಂಟರಿಂದ ಎರಡನೇ ವರ್ಷದ ಪಿಯುಸಿ ವರೆಗೆ ಸರ್ಕಾರಿ ಜೂನಿಯರ್ ಕಾಲೇಜ್ ಬೇಲೂರು ಇಲ್ಲಿ ವ್ಯಾಸಂಗ, ಬಿ ಎಸ್ ಸಿ ಸರ್ಕಾರಿ ವಿಜ್ಞಾನ ಕಾಲೇಜ್ ಹಾಸನ, ಎಲ್‌ಎಲ್‌ಬಿ ಎಂ ಕೃಷ್ಣ ಕಾನೂನು ಕಾಲೇಜು ಹಾಸನ, ಇದು ಇವರು ವಿದ್ಯಾಭ್ಯಾಸದ ಹಾದಿ. ಪದವಿ ಪಡೆಯುವವರೆಗೂ ಇವರ ವಿದ್ಯಾಭ್ಯಾಸ ಎಲ್ಲಾ ಕಡೆಯಲ್ಲೂ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ನಡೆದಿದೆ.2017ರಲ್ಲಿ ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾವಣೆ, ಹಾಸನದ ಹಿರಿಯ ವಕೀಲರಾದ ಎ ಹರೀಶ್ ಬಾಬು ಇವರ ಕಚೇರಿಯಲ್ಲಿ ಸುಮಾರು ಐದು ತಿಂಗಳುಗಳ ಕಾಲ ವೃತ್ತಿ ಅಭ್ಯಾಸ. ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ, ವೃತ್ತಿ ಜೀವನದ ಅನುಕೂಲಕ್ಕಾಗಿ ಬೇಲೂರು ತಾಲೂಕು ವಕೀಲರ ಸಂಘದಲ್ಲಿ ನೋಂದಾವಣೆ, ಹಿರಿಯ ವಕೀಲರಾದಂತಹ ಬಿಎಸ್ ರಾಜಶೇಖರ್ ಅವರ ಕಚೇರಿಯಲಿ ರೊಟ್ಟಿ ಜೀವನ ಐದೂವರೆ ವರ್ಷಗಳ ಕಾಲ.16-8-2020 ರಲ್ಲಿ ಭಾವನ ಎಂಬ ಕನ್ಯಾರತ್ನ ರೊಂದಿಗೆ ವಿವಾಹ ಜೀವನಕ್ಕೆ ಪಾದಾರ್ಪಣೆ, ಧರ್ಮ ಪತ್ನಿಯಾಗಿ ಇವರ ಬಾಳನ್ನು ಪ್ರವೇಶಿಸಿದ, ಇಕೆ ಕೂಡ ಅವರ ಸಾಧನೆಗೆ ಒತ್ತು ನೀಡಿರುತ್ತಾರೆ. ದಿನಾಂಕ 8-7-2022 ರಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿರುತ್ತಾರೆ.
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬಂತೆ, ದೊಡ್ಡವರು ಹೇಳುವ ಹಾಗೆ ಹಾಲು ಉಯ್ಯಾಲು ನಾವೆಂದರೆ ಹಣೆಯಲ್ಲಿ ಬರೆಯಲು ನಾವೇ ಎಂದಂತೆ, ಜನ್ಮ ನೀಡಿದ ತಂದೆ ತಾಯಿಗಾಗಲಿ,ಜೊತೆಯಲ್ಲಿ ಆಡಿ ಬೆಳೆದ ಗೆಳೆಯರಿಗಾಗಲಿ, ಶಿಕ್ಷಣ ನೀಡುವ ಶಿಕ್ಷಕರಿಗಾಗಲಿ, ಒಡಹುಟ್ಟಿದವರಿಗಾಗಲಿ, ಯಾರು ಏನಾಗುತ್ತಾರೆ ಎಂಬುದು ತಿಳಿದಿರುವುದಿಲ್ಲ. ಮಕ್ಕಳು ಸರ್ಕಾರಿ ಶಾಲೆಯಲ್ಲೆ ಓದಲಿ,ಖಾಸಗಿ ಶಾಲೆಯಲ್ಲಿ ಓದಲಿ, ಮಕ್ಕಳ ಹಣೆಯ ಬರಹವನ್ನು ಬದಲಾಯಿಸಲು ಸಾಧ್ಯವಿಲ್ಲ. ಇಂತಹ ಒಂದು ಸಾಧನೆ ಮಾಡಿದ ನನ್ನ ಶಿಷ್ಯನಿಗೆ ನ್ಯಾಯಾಧೀಶನಾಗಿ ಕೋರುವ ಸ್ಥಳದಲ್ಲಿ ಯಾವುದೇ ಅಡೆ-ತಡೆಗಳು ಬಾರದಿರಲಿ. ಬಂದರೂ ಕೂಡ ಅದನ್ನು ಎದುರಿಸುವಂತಹ ಶಕ್ತಿಯನ್ನು ಆ ಭಗವಂತ ಅವನಿಗೆ ನೀಡಲಿ ಎಂದು ಹಾರೈಸುತ್ತೇನೆ.
ಮಕ್ಕಳೇ ನೀವು ಏನಾದರೂ ಆಗಿ ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ.