ಮೂಲ ಯೋಜನೆಯಂತೆ ಕಾಮಗಾರಿ ನಡೆಸಿ ಇಲ್ಲವಾದ್ರೆ ವಿಮಾನ ನಿಲ್ದಾಣ ಕೆಲಸ ನಿಲ್ಲಿಸಿ: ರಾಜ್ಯ ಸರ್ಕಾರಕ್ಕೆ ರೇವಣ್ಣ ಒತ್ತಾಯ

ಹಾಸನ: ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮೂಲ ಯೋಜನೆಗೆ ವಿರುದ್ಧವಾಗಿ ನಡೆಯುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರಂಭದ ಯೋಜನೆಯಂತೆ ಏರ್‌ಪೋರ್ಟ್ ನಿರ್ಮಾಣವಾದರೆ 6500 ಜನರಿಗೆ ಉದ್ಯೋಗ ಸಿಗುತ್ತಿತ್ತು. ಅದನ್ನು ಬದಲಿಸಿ ಹೊಸ ಯೋಜನೆ ತಯಾರಿಸಿ ಅದರ ಪ್ರಕಾರ ವಿಮಾನ ನಿಲ್ದಾಣ ಮಾಡುತ್ತಿದ್ದಾರೆ ಎಂದು ದೂರಿದರು.
ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಹಿಂದಿನ ಡಿಸಿ ಹಾಗೂ ಶಾಸಕರು ಅದು ಫಲವತ್ತಾದ ಭೂಮಿ, ಅಷ್ಟು ಜಾಗ ಅವಶ್ಯಕತೆ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಕಿಡಿ ಕಾರಿದರು.
ನನ್ನ ಐಡಿಯಾಲಜಿಯಿಂದ ಹಾಸನಕ್ಕೆ ವಿಮಾನ ನಿಲ್ದಾಣ ತಂದಿದ್ದೇನೆ ಎನ್ನುವ ಮೂಲಕ ರೇವಣ್ಣ ಐಡಿಯಾಲಜಿ ಹಾಸನದಲ್ಲಿ ವರ್ಕ್ ಆಗಲ್ಲ ಎಂದಿದ್ದ ಶಾಸಕ ಪ್ರೀತಂಗೌಡ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.
ಐಡಿಯಾಲಜಿ ಇರುವ ರಾಜಕಾರಣಿ,ಭೂಮಿಯನ್ನು ರಿಯಲ್ ಎಸ್ಟೇಟ್‌ನವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಲೂಟಿ ನಡೆಯುತ್ತಿದೆ, ಇದು ಲೂಟಿ ಹೊಡೆಯುವ ಐಡಿಯಾಲಜಿ ಎಂದು ಪ್ರಶ್ನಿಸಿದರು.

ಗಿರೀಶ್ ವಿರುದ್ಧ ವಾಗ್ದಾಳಿ:
ನಿರ್ಗಮಿತ ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇವಣ್ಣ, ಅವನೊಬ್ಬ ಕಳ್ಳ. ಈಗ ಬೆಂಗಳೂರಿಗೆ ಹೋಗಿದ್ದಾನೆ.
ನನ್ನ ಕೈಗೆ ಸಿಗದೆ ಎಲ್ಲೂ ಹೋಗಲ್ಲ, ಬಲಿ ಹಾಕ್ತೀನಿ ಎಂದು ಗುಡುಗಿದರು. 
ಇಲ್ಲಿ 11 ಎಕರೆ ಜಾಗ ಹೊಡೆದ, ಅಲ್ಲಿ 250 ಎಕರೆ ಹೊಡೆಯಲು ಹೊರಟಿದ್ದಾನೆ. ಕರಾಬ್ ಡಿಸಿಗೆ ಅವಾರ್ಡ್ ಕೊಡಬೇಕು. ಜಿಲ್ಲೆಗೆ ಅತಿ ಹೆಚ್ಚು ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾನೆ. ಒಂದು ಲೈಸನ್ಸ್ಗೆ 50 ಲಕ್ಷ ಲಂಚ ಪಡೆದಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಇಂತವನನ್ನು ಹಾಸನ ಜಿಲ್ಲಾಧಿಕಾರಿ ಮಾಡಿದವರಿಗೆ ಅವಾರ್ಡ್ ಕೊಡಬೇಕು. ಈಗ ಬೆಂಗಳೂರಿನ ಕೆಐಎಡಿಬಿಯಲ್ಲಿ ಫಲವತ್ತಾದ ಜಾಗದಲ್ಲಿ ಕೂರಿಸಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರೀತಂಗೌಡ ವಿರುದ್ಧ ಗರಂ:
ನಿರ್ಗಮಿತ ಡಿಸಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಕರಾಬ್ ಡಿಸಿ,ಅವನ ಜೊತೆ ಸೇರಿಕೊಂಡು ಇವನು ಅಷ್ಟು ಭೂಮಿ ಅವಶ್ಯಕತೆ ಇಲ್ಲ ಎಂದು ಪತ್ರ ಬರೆಯುತ್ತಾನೆ ಎಂದು ಪ್ರೀತಂಗೌಡ ವಿರುದ್ಧವೂ ಹರಿಹಾಯ್ದರು.
ವಿಮಾನ ನಿಲ್ದಾಣಕ್ಕೆ 1224 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
630 ಕೋಟಿ ಬಂಡಾಯ ಹೂಡಿಕೆ ಪ್ರಸ್ತಾವನೆಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಅನುಮೋದನೆ ನೀಡಿತ್ತು. ಜ್ಯುಪಿಟರ್ ಏವಿಯೇಷನ್ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿತ್ತು. 

ತನಿಖೆಗೆ ಆಗ್ರಹ:
ಇದನ್ನು ಯಾವ ಉದ್ದೇಶಕ್ಕೆ ಮಾಡಿದ್ದೇವೆ ಅಂಥ ಶಾಸಕರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದ ಅವರು, ಒಬ್ಬ ಮಾಜಿ ಪ್ರಧಾನಿ ತಂದಿರುವ ಯೋಜನೆ ಇದು. ಮೂಲ ಯೋಜನೆ ಯಂತೆ ವಿಮಾನ ನಿಲ್ದಾಣ ಮಾಡಲಿ, ಇಲ್ಲವಾದರೆ ಕಾಮಗಾರಿ ನಿಲ್ಲಿಸಲಿ, ಹಾಗೆ ಬಿದ್ದಿರುತ್ತೆ ಎಂದರು. ಭೂಮಾಪಿಯಾದವರ ಜೊತೆ ಸೇರಿ ಭೂಮಿ ಕಬಳಿಸಲು ಹೊರಟಿದ್ದಾರೆ, ಈ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ಸ್ವರೂಪ್‌ನನ್ನು ಕೈ ಬಿಡುವುದಿಲ್ಲ
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ವಿಚಾರವಾಗಿ ಪ್ರತಿಕ್ರಯಿಸಿ,
ನಾವು ಟಿಕೆಟ್ ಘೋಷಣೆ ಮಾಡಲು ಸಭೆ ಕರೆದಿರಲಿಲ್ಲ. ಸಭೆಗೆ ಕೆಲ ರೌಡಿ ಶೀಟರ್‌ಗಳು ಬಂದಿದ್ದರು. ಬಿಜೆಪಿ ಸರ್ಕಾರ ಬಂದಮೇಲೆ ಕೆಲವರನ್ನು ರೌಡಿಶೀಟರ್‌ನಿಂದ ಕೈಬಿಟ್ಟಿದ್ದಾರೆ, ಕೆಲವರನ್ನು ಬೆಳೆಸುತ್ತಿದ್ದಾರೆ. ಅವರೇ ಬ್ಯಾನರ್ ಹರಿದು ಹಾಕಿದ್ದಾರೆ ಎಂದು ದೂರಿದರು. 
ಅವರನ್ನು ಸಭೆಗೆ ಕಳಿಸಿದ್ದು ಯಾರು? ಗದ್ದಲ ಹಿಂದೆ ಯಾರ ಕೈವಾಡವಿದೆ.
ಸಭೆಯಲ್ಲಿ ಗಲಾಟೆ ಮಾಡಿದ ಕೆಲ ರೌಡಿಶೀಟರ್‌ಗಳ ಬಗ್ಗೆ ಎಸ್ಪಿಗೆ ಹೇಳಿದ್ದೇನೆ ಎಂದರು. ಕೆಲವರು ಸ್ವರೂಪ್ ಹೆಸರು ಕೆಡಿಸಬೇಕೆಂದೇ ಹಾಗೆ ಮಾಡಿದ್ದಾರೆ. ಶೋಭಾಯಾತ್ರೆಗೆ 500 ಜನ ಪೊಲೀಸ್ ಹಾಕ್ತಾರೆ.ನಮ್ಮ ಸಭೆಗೆ ಯಾಕೆ ಪೊಲೀಸ್ ಹಾಕಿರಲಿಲ್ಲ ಎಂದು ಪ್ರಶ್ನಿಸಿದರು.
ಹಾಸನದಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂದು ಎಲ್ಲರೂ ಕುಳಿತುಕೊಂಡು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸ್ವರೂಪ್‌ನನ್ನು ಕೈ ಬಿಡೋದಿಲ್ಲ, ನಮ್ಮ ಪಾರ್ಟಿ, ನಮ್ಮ ಸ್ವಂತ ವಿಚಾರ ಎಂದರು. ಹಾಸನ ಶಾಸಕರು ನನ್ನನ್ನೇ ಕರೆಯುತ್ತಿದ್ದಾರೆ. ಅವರ ಸವಾಲನ್ನು ಸ್ವೀಕರಿಸಿ ಅಭ್ಯರ್ಥಿ ಹಾಕಬೇಕಲ್ವಾ, ಈ ಬಗ್ಗೆ ಕುಮಾರಸ್ವಾಮಿ, ಇಬ್ರಾಹಿಂ, ಜಿಲ್ಲೆಯ ಶಾಸಕರು, ಮುಖಂಡರು ಕುಳಿತು ತೀರ್ಮಾನ ಮಾಡುತ್ತೇವೆ ಎಂದ ಅವರು, ಕಾರ್ಯಕರ್ತರನ್ನು ಎದ್ದು ಹೋಗಿ ಎಂದ ಮಾತನ್ನು ವಾಪ್ ಪಡೆಯುವೆ ಎಂದರು.

Post a Comment

Previous Post Next Post