ಹಾಸನ: ಬೇಲೂರು ತಾಲೂಕಿನಲ್ಲಿ ವಾಟೆಹೊಳೆ, ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಗೋಳು ಐದಾರು ದಶಕಗಳಿಂದ ಸಮಸ್ಯೆಯ ಸಂಕೋಲೆಯಾಗಿಯೇ ಉಳಿದಿದೆ. ಸಂಬಂಧಪಟ್ಟವರು ಇನ್ನಾದರೂ ಇದನ್ನು ಬಗೆಹರಿಸಲು ಪ್ರಯತ್ನಿಸಿ, ಇಲ್ಲವಾದರೆ ರಾಜ್ಯ ಸರ್ಕಾರ ಎಲ್ಲ ಮಂಜೂರಾತಿ ಯನ್ನೂ ನೋಟಿಫಿಕೇಶನ್ ಮಾಡುವಂತೆ ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ೩೮೩ ಹಳ್ಳಿಗಳಲ್ಲಿ ೧೯೩ ಗ್ರಾಮಗಳನ್ನು ಮುಳುಗಡೆ ಸಂತ್ರಸ್ತ ಹಳ್ಳಿಗಳೆಂದು ಘೋಷಿಸಲಾಗಿದೆ. ಹೆಚ್ಚು ಕಡೆ ಗೋಮಾಳಗಳೇ ಗ್ರಾಮಗಳಾಗಿವೆ. ಸುಮಾರು ೪೨೬೨ ಅನಧಿಕೃತ ಮನೆಗಳಿದ್ದು, ೯೪ಸಿ ಅಡಿ ಅರ್ಜಿ ಹಾಕಿದ್ದರೂ ಅಧಿಕೃತ ಆಗಿಲ್ಲ. ಅಲ್ಲಿ ಅಭಿವೃದ್ಧಿ ಇಲ್ಲ, ಮೂಲ ಸೌಕರ್ಯ ಇಲ್ಲ ಎಂದು ಬೇಸರ ಹೊರ ಹಾಕಿದರು.
ಗಣಕೀರಣ ಅಂತೀರಿ, ಇಂತಹ ಸಮಸ್ಯೆಗೆ ಪರಿಹಾರ ಯಾವಾಗ, ಹೆಗ್ಗಡಿಹಳ್ಳಿಯ ಸ.ನಂ.೪೬ ರಲ್ಲಿ ೨೧ ಎಕರೆ ಜಮೀನಿದೆ. ವಿಪರ‍್ಯಾಸ ಎಂದರೆ ೪೦ ಎಕರೆ ಮಂಜೂರು ಮಾಡಲಾಗಿದೆ. ಯಾರಿಗೆ ಎಷ್ಟು ಜಾಗ ಸೇರಿದೆ ಗೊತ್ತಿಲ್ಲ ಎಂದರು. ಹಾಗೆಯೇ ಇಬ್ಬೀಡು ಗ್ರಾಮದಲ್ಲಿ ೨೩ ಎಕರೆ ಜಮೀನಿದ್ದರೆ ೯೬ ಜನರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಹೆಚ್ಚು ಮಂದಿಗೆ ಮಂಜೂರೇ ಆಗಿಲ್ಲ ಎಂದು ದೂರಿದರು.
ಈ ರೀತಿಯ ಹಲವು ಪ್ರಕರಣ ತಾಲೂಕಿನಲ್ಲಿ ಕಾಣಸಿಗುತ್ತವೆ. ಮುಳುಗಡೆ ಹಳ್ಳಿಗಳು ಎಂದು ಘೋಷಣೆ ಮಾಡಿ ಭೂಮಿಯನ್ನೂ ಮಂಜೂರು ಮಾಡಲಾಗಿದೆ. ಆದರೆ ಹಕ್ಕು ಪತ್ರ ನೀಡಿಲ್ಲ, ಮನೆ ನನ್ನದು ಎಂಬುದಕ್ಕೆ ಅನೇಕರಲ್ಲಿ ದಾಖಲೆಗಳೇ ಇಲ್ಲ. ಹಕ್ಕು ಕೊಟ್ಟಿಲ್ಲ, ಹೀಗಾದರೆ ಭವಿಷ್ಯದಲ್ಲಿ ಅವರ ಪಾಡೇನು ಎಂದು ಪ್ರಶ್ನಿಸಿದರು.
ಇನ್ನು ಫಾರಂ ನಂ.೫೩ ಅಡಿ ಅರ್ಜಿ ಹಾಕಿದರೂ, ಯಾವುದೇ ಪರಿಶೀಲನೆ ಮಾಡದೇ ತಿರಸ್ಕಾರ ಮಾಡಲಾಗುತ್ತಿದೆ. ಹೀಗಾಗಿ ಜ್ವಲಂತ ಸಮಸ್ಯೆಗೆ ಮುಕ್ತಿ ಸಿಗಬೇಕಾದರೆ, ಮಂಜೂರಾತಿ ಆಗಿಲ್ಲ ಅಂದ್ರೆ ಡಿ ನೋಟಿಫೈ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
೨೦೧೭ ಹಾಗೂ ೧೯ ರಲ್ಲಿ ಯಾವುದೇ ಮಂಜೂರಾತಿ ಮಾಡುವ ಹಾಗಿಲ್ಲ ಎಂದು ಸರ್ಕಾರದ ಆದೇಶದ ಮೇರೆಗೆ ಅಂದಿನ ಡಿಸಿ ಅವರು ಆದೇಶ ಹೊರಡಿಸಿದರು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವರು ಹೈಕೋರ್ಟ್‌ವರೆಗೂ ಹೋಗಿದ್ದಾರೆ. ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಆಗಲೀ, ಸರ್ಕಾರ ಆಗಲೀ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಾದರೂ ಶಾಸಕರು ಸಚಿವರು, ಸರ್ಕಾರದ ಗಮನ ಸೆಳೆಯದಿರುವುದು ದುರದೃಷ್ಟಕರ ಎಂದರು.
ತಾಲೂಕಿನಲ್ಲಿ ಈಗಲೂ ಶೇ.೬೦ ರಷ್ಟು ಜನ ಭೂಮಿ ಇಲ್ಲದೆ, ಮನೆಯಿದ್ದರೂ ತಮ್ಮದಲ್ಲ ಎಂಬಂತೆ ಬದುಕುತ್ತಿದ್ದಾರೆ. ಅಂತಹವರು ಸಮಸ್ಯೆಯನ್ನು ಈಗಲಾದರೂ ಬಗೆಹರಿಸಲು ಪ್ರಯತ್ನ ಮಾಡಿ ಎಂದು ಮನವಿ ಮಾಡಿದರು. ಮಂಜೂರಾತಿಯಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಇಷ್ಟೊಂದು ದಿನಗಳು ಬೇಕಾ ಎಂದು ಕೇಳಿದ ಶಿವರಾಂ, ಬಗೆ ಹರಿಸಲು ಸಾಧ್ಯವಾಗುವುದಿಲ್ಲ ಎಂದರೆ ಡಿನೋಟಿಫೈ ಮಾಡಿ ಎಂದು ಒತ್ತಾಯಿಸಿದರು.
📌 ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ, ೧೯೭೧ ರಿಂದ ಈವರೆಗೂ ಮುಂದುವರಿದಿದೆ. ಅನೇಕರ ಬದುಕು ಅತಂತ್ರವಾಗಿಯೇ ಇದೆ. ಅನಧಿಕೃತ ಗ್ರಾಮಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ತಮಗೆ ಹಕ್ಕುಬಾಧ್ಯತೆ ಮಾಡಿಕೊಡದವರನ್ನು ಪ್ರಶ್ನೆ ಮಾಡಲು ಜನರು ಹೊರ ಬರಬೇಕು. ತಮ್ಮ ಹಕ್ಕಿಹಾಗಿ ಹೋರಾಟ ಮಾಡಬೇಕು ಎಂದು ಶಿವರಾಂ ಕರೆ ನೀಡಿದರು.