ಬೇಲೂರು ಪುರಸಭೆ ಅಧ್ಯಕ್ಷ ಅಶೋಕ್ ವಿರುದ್ದ ವಾಮಾಚಾರ

 ಬೇಲೂರು: ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಕುಳಿತುಕೊಳ್ಳುವ ಕೊಠಡಿಯ ಹಿಂಭಾಗದಲ್ಲಿರುವ ಮರವೊಂದಕ್ಕೆ ವಾಮಾಚಾರ ಮಾಡಿ ವಸ್ತುಗಳನ್ನು ತಂದು ಹಾಕಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಕೆಲ ಸಮಯ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿತ್ತು.

ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ ಈ ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದರು. ಆದರೆ ಕೊನೆಗೆ ಎ.ಆರ್.ಅಶೋಕ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿ, ಒಡಂಬಡಿಕೆಯಂತೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಆದರೆ ಅಶೋಕ್ ಅವರು ಅಧ್ಯಕ್ಷರಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದಿದ್ದು, ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಆದರೆ ಇದ್ದಕ್ಕಿದ್ದಂತೆ ಶನಿವಾರ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಕುಳಿತು ಕೊಳ್ಳುವ ಕೊಠಡಿಯ ಹಿಂಭಾಗದಲ್ಲಿನ ಮರಕ್ಕೆ ಮಂತ್ರಿಸಿದ ನಿಂಬೆಹಣ್ಣು, ತಾಯತ, ವೀಳ್ಯದೆಲೆ, ತಗಡು, ಅರಿಶಿನ-ಕುಂಕುಮ, ಕುಡಿಕೆ ಸೇರಿಸಿ ಮರಕ್ಕೆ ಮೊಳೆ ಹೊಡೆದು ಇನ್ನಿತರ ವಾಮಾಚಾರದ ವಸ್ತುಗಳನ್ನು ತಂದು ಹಾಕಿದ್ದಾರೆ. ಆದರೆ ಎರಡನೇ ಶನಿವಾರವಾದ್ದರಿಂದ ಕಚೇರಿಗೆ ರಜೆ ಇದ್ದು ಸಿಬ್ಬಂದಿ ಹಿಂಭಾಗದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಂದರ್ಭದಲ್ಲಿ ಕಂಡು ಬಂದಿದ್ದು, ಪುರಸಭೆ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಅಧ್ಯಕ್ಷ ಎ.ಆರ್.ಅಶೋಕ್ ಸ್ವತಃ ಸಿಬ್ಬಂದಿಯೊಂದಿಗೆ ಸುಟ್ಟು ಹಾಕಿದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ನಾನು ಯಾರಿಗೂ ಕೇಡು ಬಗೆಯುವವನಲ್ಲ. ಸ್ವಪಕ್ಷದವರೇ ಇಲ್ಲ ಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ನನ್ನ ಪಕ್ಷದ ಸದಸ್ಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಕಾರಣವಿಲ್ಲದೆ ಅಧಿಕಾರಿಗಳಿಗೆ ಫೋನ್ ಮಾಡಿ ಬೆದರಿಸುವುದೆಲ್ಲ ಮಾಡುತ್ತಾರೆ. ಈಗ ವಾಮಾಚಾರದ ದಾರಿ ಕಂಡು ಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿಯ ಮಾಟ-ಮಂತ್ರಗಳಿಗೆ ಹೆದರುವುದಿಲ್ಲ. ಭಗವಂತನ ಆಶೀರ್ವಾದ ನನ್ನ ಮೇಲಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಯಾರು ಇಂತಹ ಕೆಟ್ಟ ಕೆಲಸ ಮಾಡಿದ್ದಾರೋ, ಅದು ಅವರಿಗೇ ತಗುಲುತ್ತದೆ. ನನಗೆ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಜನಸೇವೆ ಮಾಡುವುದು ನನ್ನ ಗುರಿ. ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದರು.

ಪುರಸಭೆ ಸದಸ್ಯರಾದ ಬಿ.ಆರ್.ಅಶೋಕ್, ಸೌಮ್ಯಾ ಸುಬ್ರಹಣ್ಯ, ಜಮಿಲಾ ತೌಫಿಕ್, ಸಿಬ್ಬಂದಿ ನಟರಾಜ್, ಚೇತನ್, ವಿಶ್ವನಾಥ ಇತರಿದ್ದರು.

Post a Comment

Previous Post Next Post