ರವಿ ಬೆಟ್ಟಸೋಗೆ ಅರಕಲಗೂಡು
ತಾಲೂಕಿನ ರಾಮನಾಥಪುರ ಹಾಗೂ ಹಳ್ಳಿಮೈಸೂರು ಹೋಬಳಿ ಕೇಂದ್ರದಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಹೊಸದಾಗಿ ಭತ್ತ, ರಾಗಿ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆದಿರುವುದು ಈ ಭಾಗ ರೈತರ ಪಾಲಿಗೆ ವರದಾನವಾಗಿದೆ.
ತಾಲೂಕು ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುತ್ತಿದ್ದ ಕಾರಣ ಗಡಿ ಭಾಗದ ಗ್ರಾಮಗಳಿಂದ ಬರುವ ರೈತರಿಗೆ ಸಾಗಾಟ ವೆಚ್ಚ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುವಂತಾಗಿತ್ತು. ಹೀಗಾಗಿ ರಾಮನಾಥಪುರ ಹಾಗೂ ಹಳ್ಳಿಮೈಸೂರು ಹೋಬಳಿ ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ನೋಂದಣಿ ಖರೀದಿ ಕೇಂದ್ರ ಆರಂಭಿಸಬೇಕು ಎಂಬುದು ರೈತರ ಹಲವು ವರ್ಷಗಳ ಕೂಗಾಗಿತ್ತು. ಇದೀಗ ಸರ್ಕಾರ ಇಲ್ಲಿ ಹೊಸದಾಗಿ ನೋಂದಣಿ ಖರೀದಿ ಕೇಂದ್ರ ತೆರೆಯುವ ಮೂಲಕ ಅನ್ನದಾತರ ಬೇಡಿಕೆ ಈಡೇರಿಸಿದೆ.
ಹೇಮಾವತಿ ಹಾಗೂ ಕಾವೇರಿ ನದಿ ಹಾದು ಹೋಗಿರುವ ತಾಲೂಕಿನಲ್ಲಿ ರೈತರು ಹೆಚ್ಚಾಗಿ ಭತ್ತದ ಹಾಗೂ ರಾಗಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಪ್ರಮುಖವಾಗಿ ಮುಂಗಾರಿನಲ್ಲಿ ಆಲೂಗಡ್ಡೆ, ಮುಸುಕಿನ ಜೋಳ ಹಾಗೂ ಹೊಗೆಸೊಪ್ಪು ಬೆಳೆ ಕಟಾವಿನ ನಂತರ ಹಿಂಗಾರಿನಲ್ಲಿ ಅಧಿಕವಾಗಿ ರಾಗಿ ಬೆಳೆ ಬೆಳೆಯುವುದು ವಾಡಿಕೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿಗೆ ಪ್ರತಿ ಕ್ವಿಂಟಾಲ್‌ಗೆ 4290 ರೂ ಉತ್ತಮ ಬೆಂಬಲ ಬೆಲೆ ಘೋಷಿಸಿರುವುದು ರೈತರಿಗೆ ಆಶಾದಾಯಕವಾಗಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ಮುಂಗಾರಿನಲ್ಲಿ 9900 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಇಲಾಖೆ ಗುರಿ ಮೀರಿ ರೈತರು 1073 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಮುಂಗಾರಿನಲ್ಲಿ 5050 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದು, 5030 ಹೆಕ್ಟೇರ್ ಜಮೀನಿನಲ್ಲಿ ನಾಟಿ ಮಾಡಲಾಗಿತ್ತು. ಹಿಂಗಾರಿನಲ್ಲಿ 2024 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದು, 1950 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದೆ. ಮುಂಗಾರಿನಲ್ಲಿ ಹೊಗೆಸೊಪ್ಪು ಬೆಳೆಯನ್ನೇ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವ ರಾಮನಾಥಪುರ ಮತ್ತು ಹಳ್ಳಿಮೈಸೂರು ಹೋಬಳಿ ಭಾಗದ ರೈತರು ಬೆಳೆ ಕಟಾವಿನ ನಂತರ ಅಧಿಕ ಪ್ರಮಾಣದಲ್ಲಿ ಹಿಂಗಾರಿನಲ್ಲಿ ರಾಗಿ ಬಿತ್ತನೆ ಮಾಡುತ್ತಾರೆ. ಇದೀಗ ಹಿಂಗಾರಿನಲ್ಲಿ ಬೆಳೆದ ರಾಗಿ ಬೆಳೆಯೂ ಕಟಾವಿಗೆ ಬಂದಿದೆ. ಕೆಲವು ಕಡೆ ಈಗಾಗಲೇ ಕಟಾವು ಕಾರ್ಯ ಬಿರುಸುಗೊಳಿಸಿದ್ದಾರೆ. ಮುಖ್ಯವಾಗಿ ಈ ಭಾಗದಲ್ಲಿ ರಾಗಿ ಬೆಳೆಯನ್ನು ಅಧಿಕವಾಗಿ ಅವಲಂಬಿಸಿರುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡುವುದು ಈತನಕ ಮರೀಚಿಕೆಯ ಸಂಗತಿಯಾಗಿತ್ತು.
ತಾಲೂಕಿನ ಗಡಿ ಭಾಗದ ಕೇರಳಾಪುರ, ಲಕ್ಕೂರು, ಮಲ್ಲಾಪುರ, ಮಾದಾಪುರ, ಕಡುವಿನ ಹೊಸಹಳ್ಳಿ, ಬನ್ನೂರು ಭಾಗದ ಹಳ್ಳಿಗಳ ರೈತರು ರಾಗಿ ಮಾರಾಟ ಮಾಡಲು ದೂರದ ತಾಲೂಕು ಕೇಂದ್ರವಾದ ಅರಕಲಗೂಡಿಗೆ ಕೊಂಡೊಯ್ಯಬೇಕಿತ್ತು. ಗಡಿ ಭಾಗದ ಗ್ರಾಮಗಳಿಂದ ಸಾಗಾಟ ವೆಚ್ಚ, ಅವ್ಯವಸ್ಥೆಯ ಆಗರವಾಗಿದ್ದ ಎಪಿಎಂಸಿಗಳಲ್ಲಿ ನಿಗದಿತ ಅವಧಿಗೆ ರಾಗಿ ಮಾರಾಟ ಆಗದೆ ಅದೆಷ್ಟೋ ದಿನಗಳ ಕಾಲ ಸೊಳ್ಳೆಗಳ ಕಾಟ ತಾಳಲಾರದೆ ರಾತ್ರಿ ಕಳೆಯುವಂತಾಗಿತ್ತು. ಇಷ್ಟೆಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ರೈತರು ನರಳುವ ಪರಿಸ್ಥಿತಿ ತಲೆದೋರಿತ್ತು. ಇದರಿಂದ ಬೇಸತ್ತು ಕೆಲವು ರೈತರು ತಾಲೂಕು ಕೇಂದ್ರದ ಖರೀದಿ ಕೇಂದ್ರಗಳಿಗೆ ಕೊಂಡೊಯ್ಯದೆ ದಲ್ಲಾಳಿಗಳಿಗೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದರು. ಪರಿಣಾಮವಾಗಿ ರೈತರು ಅಪಾರ ಹಣ, ಶ್ರಮ ವಹಿಸಿ ಸಾಲ ಮಾಡಿ ಬೆಳೆ ಬೆಳೆದರೂ ಕನಿಷ್ಟ ಬೆಂಬಲ ಬೆಲೆಯ ಲಾಭ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಕನಿಷ್ಠ ಬೆಂಬಲ ಬೆಲೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಈ ಭಾಗದಲ್ಲಿ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆಯಬೇಕು ಎಂಬುದು ಅನ್ನದಾತರ ಆಗ್ರಹವಾಗಿತ್ತು. ಸರ್ಕಾರ ಕಡೆಗೂ ನೋಂದಣಿ ಖರೀದಿ ಕೇಂದ್ರ ತೆರೆದಿರುವುದರಿಂದ ಗಡಿ ಭಾಗದ ಗ್ರಾಮಗಳ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಮುಂಗಾರಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಹೇಮಾವತಿ, ಹಾರಂಗಿ ಜಲಾಶಯಗಳು ಭರ್ತಿಯಾಗಿ ನಾಲೆಗಳಿಗೆ ನೀರು ಹರಿಸಿದ್ದರಿಂದ ಅಚ್ಚುಕಟ್ಟಿನ ರೈತರು ಹೆಚ್ಚಾಗಿ ಭತ್ತದ ಬೆಳೆ ಬೆಳೆದಿದ್ದು ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ಪಡೆಯಲು ಅನುಕೂಲವಾಗಿದೆ. ಕನಿಷ್ಠ ಬೆಂಬಲ ಬೆಲೆ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ 2300 ರೂ. ಮತ್ತು ಎ ಗ್ರೇಡ್‌ಗೆ 2320 ರೂ. ಹಾಗೂ ರಾಗಿ 4290 ರೂ. ನಿಗದಿಪಡಿಸಿದೆ.
ಈ ಯೋಜನೆಯಡಿ ಭತ್ತ, ರಾಗಿ ಖರೀದಿ ಮಾಡಲು ರೈತರು ಎಫ್‌ಐಡಿ ಸಂಖ್ಯೆ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಖರೀದಿಸಲಾಗುವುದು. ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೀಗ ಹೊಸದಾಗಿ ಖರೀದಿ ಕೇಂದ್ರ ತೆರೆದಿರುವ ಹಳ್ಳಿಮೈಸೂರು ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು 60 ಮಂದಿ ನೋಂದಾಯಿಸಿದ್ದಾರೆ. ರಾಮನಾಥಪುರದ ರೇಷ್ಮೆ ತರಬೇತಿ ಕೇಂದ್ರದಲ್ಲಿ ಹೊಸದಾಗಿ ತೆರೆದಿರುವ ಕೇಂದ್ರದಲ್ಲಿ 55 ಮಂದಿ ರಾಗಿ ಮಾರಾಟ ಮಾಡಲು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಾರೆ ಖರೀದಿ ಕೇಂದ್ರದ ಅಧಿಕಾರಿ ಶಂಕರ್.