ಕೆ.ಹೊನ್ನೇನಹಳ್ಳಿ ಕಲ್ಯಾಣಿಯ ಪುನಶ್ಚೇತನ


ಹಾಸನ,ಜೂ:10:-  ಹಾಸನ ತಾಲ್ಲೂಕಿನ ಮೆಳಗೋಡು ಹೋಬಳಿ ಕಮ್ಮರಗಿ ಹೊನ್ನೇನಹಳ್ಳಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಳೆಯ ಕಲ್ಯಾಣಿಯ ಪುನಶ್ಚೇತನ ಮಾಡಲಾಯಿತು. ಕಲ್ಯಾಣಿಯ ಸುತ್ತ ಹಾಗೂ ಒಳ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದಿದ್ದು  ಕಳೆದ ಐದು ವರ್ಷದ ಹಿಂದೆ ನೀರು ತುಂಬಿದ್ದ ಕಲ್ಯಾಣಿಯು ಮುಚ್ಚಿಹೋಗಿತ್ತು. ಗ್ರಾಮದ ಎಲ್ಲಾ ಜನರು ಸೇರಿ ಮನೆಗೆ ಒಬ್ಬರಂತೆ ಸೇರಿಕೊಂಡು ಶ್ರಮದಾನದ ಮೂಲಕ ಅದರ ಸ್ವಚ್ಛತಾ ಕಾರ್ಯವನ್ನು ಮಾಡಿದರು. 
ಹಸಿರುಭೂಮಿ ಪ್ರತಿಷ್ಠಾನದ ಪ್ರೇರಣೆಯೊಂದಿಗೆ ಗ್ರಾಮದ ಎಲ್ಲಾ ಜನರನ್ನು ಒಗ್ಗೂಡಿಸುವ ಕೆಲಸವನ್ನು ಹಸಿರುಭೂಮಿ ಬಳಗದ ಸದಸ್ಯೆ ಹಾಗೂ ಶಿಕ್ಷಕಿ ವನಜಾ ಸುರೇಶ್‍ರವರು ಮಾಡಿದ್ದರು. ಇವರಿಗೆ ಹಸಿರುಭೂಮಿ ಬಳಗದ ಮಮತಪ್ರಭು, ರಮೇಶ್ ಹಾಸನ್ ಅವರು ಬೆಂಬಲ ನೀಡಿದ್ದರು. ಗ್ರಾಮದ ಪಿ.ಡಿ.ಓ. ದೇವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಮ್ಮ, ಸದಸ್ಯರಾದ ಸತೀಶ್, ಹನುಮೇಗೌಡ, ಬಸವರಾಜು, ರಮೇಶ್, ಹೇಮಂತ್‍ಕುಮಾರ್, ಅನಂತ, ದೊರೆಸ್ವಾಮಿ ಮುಂತಾದ ಮುಖಂಡರೊಂದಿಗೆ 70ಕ್ಕೂ ಹೆಚ್ಚು ಪುರುಷರು, ಮಹಿಳೆಯರು, ಮಕ್ಕಳೆನ್ನದೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದರು. ಇದರ ಪಕ್ಕದಲ್ಲೇ ಇರುವ, ಇನ್ನೊಂದು ಮುಚ್ಚಿಹೋಗಿರುವ ಕಲ್ಯಾಣಿಯನ್ನೂ ಪುನಶ್ಚೇತನಗೊಳಿಸುವ ಉತ್ಸಾಹದಲ್ಲಿದ್ದರು. 
 ಕಲ್ಯಾಣಿ ಪುನಶ್ಚೇತನದ ಸಂದರ್ಭದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಚ್.ಅಪ್ಪಾಜಿಗೌಡ, ಮಾಜಿ ಅಧ್ಯಕ್ಷರಾದ ಸುಬ್ಬುಸ್ವಾಮಿ, ಹಿರಿಯ ಸದಸ್ಯರಾದ ಪುಟ್ಟಯ್ಯ, ರೂಪ ಅವರು ತೆರಳಿ, ಗ್ರಾಮಸ್ಥರ ಒಗ್ಗಟ್ಟಿಗೆ ಸಂತಸ ವ್ಯಕ್ತಪಡಿಸಿದರು. ಶ್ರಮದಾನಿಗಳಿಗೆ ಮತ್ತು ಗ್ರಾಮಸ್ಥರಿಗೆ ಪ್ರೋತ್ಸಾಹ ನೀಡಿ, ಜಲ ಮೂಲಗಳ ಉಳಿವಿನ ಅವಶ್ಯಕತೆಯ ಬಗ್ಗೆ ತಿಳಿವಳಿಕೆ ನೀಡಿದರು. 

Post a Comment

Previous Post Next Post