ಸಕಲೇಶಪುರ: ಮಲೆನಾಡಿನ ಈ ಭಾಗದಲ್ಲಿ ಮುಂಗಾರು ಮಳೆ ಹಾಗೂ ಗಾಳಿಯ ಅಬ್ಬರ ಹೆಚ್ಚಾಗತೊಡಗಿದ್ದು, ತಾಲ್ಲೂಕಿನ ಹೆಗ್ಗದ್ದೆ ಗ್ರಾ.ಪಂ. ವ್ಯಾಪ್ತಿಯ ಉಸೇರ್‌ಮನೆ ಗ್ರಾಮದ ರೈತ ಎಚ್.ಎಲ್ ಕುಮಾರ್ ವಿಜಯ್ ಮನೆ ಅಂಗಳದಲ್ಲಿ ತಡೆಗೋಡೆ ಸಹಿತ ಭೂ ಕುಸಿತದಿಂದ ಭಾರೀ ನಷ್ಟ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಸೋನೆ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿಯಿಂದ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರಿಂದಾಗ ಮಂಗಳವಾರ ಬೆಳಿಗ್ಗೆ ಸುಮಾರು 180 ಅಡಿ ಉದ್ದ ಹಾಗೂ 12 ಅಡಿ ಎತ್ತರದ ಸಿಮೆಂಟ್ ತಡೆಗೋಡೆ ಹಾಗೂ ಮಣ್ಣು ಪಕ್ಕದ ದನದ ಕೊಟ್ಟಿಗೆ ಹಾಗೂ ಭತ್ತದ ಕಣಜದ ಕಟ್ಟಡದ ಮೇಲೆ ಬಿದ್ದಿದೆ. ಇಡೀ ಕಟ್ಟಡ ಸಂಪೂರ್ಣ ಜಖಂಗೊಂಡಿದೆ. ಕೊಟ್ಟಿಗೆಯಲ್ಲಿ ಇದ್ದ ರಾಸುಗಳನ್ನು ಹೊರಗೆ ಮೇಯಲು ಬಿಟ್ಟ ಕೇವಲ 10 ನಿಮಿಷಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಕೂದಲೆಳೆ ಅಂತರದಲ್ಲಿ ರಾಸುಗಳು ಪ್ರಾಣಾಪಾಯದಿಂದ ಪಾರಾಗಿವೆ.
ಸುಮಾರು 80 ವರ್ಷಗಳ ಹಿಂದೆ ಕಟ್ಟಿದ ಶ್ಯಾನುಬೋಗರ ಮನೆ ಭೂ ಕುಸಿತದಿಂದ ಉಳಿಸಿಕೊಳ್ಳುವುದಕ್ಕಾಗಿ
ಎರಡು ವರ್ಷಗಳ ಹಿಂದೆಯಷ್ಟೇ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದರು. ತಡೆಗೋಡೆ ಸಹಿತ ಭೂ ಕುಸಿತ ಉಂಟಾಗಿದ್ದು, ಇದೀಗ ಮನೆಯೂ ಸಹ ಅಪಾಯದಲ್ಲಿ ಇದೆ.
ಇಓ ಭೇಟಿ: ಸ್ಥಳಕ್ಕೆ ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್, ತಾಲ್ಲೂಕು ಪಂಚಾಯಿತಿ ಅಸಿಸ್ಟೆಂಟ್ ಡೈರೆಕ್ಟರ್ ಎಚ್.ಎ. ಆದಿತ್ಯ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ವರ್ಷ ಸುಮಾರು ಕಾಫಿ ತೋಟ ಸುಮಾರು 2 ಎಕರೆ ಪರಿಹಾರ ಬಂದಿಲ್ಲ. ಭೂಮಿ ಕುಸಿದು ಮೇಲೆ ಗದ್ದೆಮೇಲೆ ಬಂದು ಭತ್ತದ ಗದ್ದೆಯೂ ಸಹ ಹಾನಿಯಾಗಿತ್ತು.
Tags
ಸಕಲೇಶಪುರ