ಕೆ.ಎಸ್.ಆರ್.ಪಿ ಅವ್ಯವಹಾರ ಸಿಐಡಿ ತನಿಖೆಗೆ; ಗೃಹ ಸಚಿವ


ಹಾಸನ.ಜೂ.8(ಕರ್ನಾಟಕ ವಾರ್ತೆ):- ಕೆ.ಎಸ್.ಆರ್.ಪಿ 11ನೇ ಬೆಟಾಲಿಯನ್ ನಲ್ಲಿ ಅವ್ಯವಹಾರ ಪ್ರಕರಣವನ್ನು ಸಿ.ಐ.ಡಿ ಅವರ ತನಿಖೆ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿಂದು ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆ.ಎಸ್.ಆರ್.ಪಿ ಅವ್ಯವಹಾರ ಪ್ರಕರಣ ಸಂಬಂಧ ಸಿ.ಐ.ಡಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡಲು ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹಾಸನದಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿದೆ 9 ಪೊಲೀಸರಿಗೆ ಈಗಾಗಲೇ ಪಾಸಿಟಿವ್ ವರದಿ ಬಂದಿದ್ದು ಹಿನ್ನೆಲೆಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲು ಬಂದಿದ್ದು ಅಧಿಕಾರಿಗಳು ಸೂಕ್ತ ಮಾಹಿತಿ ಒದಗಿಸಿದ್ದಾರೆ. ಜಿಲ್ಲೆಯಲ್ಲಿದ್ದ ಕೊರೋನಾ ಪಾಸಿಟಿವ್ ಪೊಲೀಸರು ಗುಣಮುಖರಾಗುತ್ತಿದ್ದಾರೆ ಕೋರೊನಾ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಕೊರೊನಾ ಮಹಾಮಾರಿ ಹಿನ್ನೆಲೆ ಲಾಕ್ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಪೊಲೀಸರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಉತ್ತಮ ಕೆಲಸ ನಿರ್ವಹಣೆ ಮಾಡಿದ್ದಾರೆ ಹಾಗೂ 2,000 ಮಂದಿ ನೆರೆ ರಾಜ್ಯದಿಂದ ಬಂದಿದ್ದವರನ್ನು ತಪಾಸಣೆ ಮಾಡಿ ಕ್ವಾರಂಟೈನಲ್ಲಿ ಇರಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಹೇಳಿದರು.

ಇಂದಿನಿಂದ ಹೋಟೆಲ್ ರೆಸ್ಟೋರೆಂಟ್ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಮುಂಜಾಗೃತ ಕ್ರಮ ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹ ಸರ್ಕಾರದೊಂದಿಗೆ ಕೈ ಜೋಡಿಸಿ ಕೊರೋನ ಹರಡುವಿಕೆಯನ್ನು ತಡೆಯಬೇಕೆಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಸುಮಾರು 38 ಸಾವಿರ ಮಂದಿ ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ ತಬ್ಲಿಘಿ ಜಮಾತ್‍ನ 850 ಮಂದಿಯನ್ನು ಗುರುತಿಸಿ ಕೋರೋನ ಸೊಂಕು ಹರಡದಂತೆ ಕ್ರಮ ವಹಿಸಲಾಗಿದೆ. ರಾಜ್ಯಕ್ಕೆ ಇದೀಗ ಮಹಾರಾಷ್ಟ್ರ ರಾಜ್ಯದಿಂದ ಬರುವವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದ್ದು ಅವರನ್ನು ವ್ಯವಸ್ಥಿತವಾಗಿ ಕ್ವಾರಂಟೈನ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದ ಸಚಿವರು ರಾಜ್ಯದಲ್ಲಿ ಜನತೆ  ಕೊವಿದ್ 19 ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಆದರೆ ಎಲ್ಲರೂ ಮಂಜಾಗ್ರತೆ ವಹಿಸಬೇಕು  ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಸಹ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ ಮುಂಬೈನಿಂದ ಬಂದಂತಹ ವಲಸಿಗರಿಂದ ಹೆಚ್ಚು ಪಾಸಿಟಿವ್ ವರದಿಗಳಾಗಿದ್ದು ವಲಸೆ ಬಂದವರನ್ನು ಆದಷ್ಟು ಕಟ್ಟು ನಿಟ್ಟಾಗಿ ತಪಾಸಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸಚಿವರು ಹೇಳಿದರು.

Post a Comment

Previous Post Next Post