ಸಹಕಾರ ಸಚಿವರಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ


ಹಾಸನ.ಜೂ.8:- ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಧೈರ್ಯದಿಂದ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಗಳ ಚೆಕ್‍ನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿತರಿಸಿದರು.
ಸಹಕಾರ ಇಲಾಖೆ, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಹಾಸನ ಸಹಕಾರಿ ಹಾಲು ಒಕ್ಕೂಟ ನಿ., ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿ., ಹಾಸನ ತಾಲ್ಲೂಕಿನ ವಿವಿಧ ಸಹಕಾರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ  ಬಿ.ಸಿ. ರಾಯ್ ಸಭಾಂಗಣದಲ್ಲಿ ಹಾಸನ ತಾಲ್ಲೂಕಿನ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಮಾತನಾಡಿ ಜಿಲ್ಲೆಗೆ ಹೊರರಾಜ್ಯದಿಂದ ಇನ್ನು ಸಾಕಷ್ಟು ಮಂದಿ ಬರುವ ಸಾಧ್ಯತೆ ಇದ್ದು ಹಾಗೆ ಬಂದವರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು ಹಾಗೂ ಹೇಗೆ ತಪಾಸಣೆ ಮಾಡಬೇಕು ಎಂಬುದನ್ನು ಕುರಿತು ಜಿಲ್ಲಾಡಳಿತ ಕ್ರಮಕೈಗೊಂಡಿದ್ದು ಸಮರ್ಥವಾಗಿ ನಿಭಾಯಿಸಬೇಕುಎಂದರು.
ರಾಜ್ಯದಲ್ಲಿ ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರಮಿಸಿದ 40 ಸಾವಿರಕ್ಕೂ ಹೆಚ್ಚಿನ ಆಶಾ ಕಾರ್ಯಕರ್ತೆರು, ರೈತರು ಮತ್ತು ಕಾರ್ಮಿಕರ ಪರವಾಗಿ ಹಾಗೂ ಎಲ್ಲಾ ಜನತೆಯ ಒಳಿತಿಗಾಗಿ ಸರ್ಕಾರವು ಕೆಲಸ ಮಾಡುತ್ತದೆ ಎಂದರಲ್ಲದೆ, ಹಾಸನ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಶಾಸಕರಾದ ಪ್ರೀತಂ ಜೆ. ಗೌಡ ಅವರು ಮಾತನಾಡಿ ಜೀವದ ಹಂಗು ತೊರೆದು ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲು-ರಾತ್ರಿ ಎನ್ನದೆ ದುಡಿಯುತ್ತಿರುವಂತಹ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಇದೇ ರೀತಿ ಆಶಾ ಕಾರ್ಯಕರ್ತೆಯರು ಶ್ರದ್ಧೆಯಿಂದ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರಲ್ಲದೆ, ಸರ್ಕಾರವು ತಮ್ಮ ಕೆಲಸಕ್ಕೆ ಸಹಕಾರ ನೀಡಲಿದೆ ಎಂದರು. 

ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ಮಾತನಾಡಿ ಕೋವಿಡ್-19 ತಡೆಗಟ್ಟುವಲ್ಲಿ ಜಿಲ್ಲಾಡಳಿತ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮ ಕಾರ್ಯ ಮಾಡಿದ್ದಾರೆ ಹಾಗೂ ಹೊರರಾಜ್ಯದಿಂದ ಬಂದವರು ತಾವು ಸೋಂಕಿತರೆಂದು ಗೊಂದಲಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಮೂಲಕ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಗರ್ಭಿಣಿಯರು, ಬಾಣಂತಿಯರು, ವೃದ್ಧಾಶ್ರಮದಲ್ಲಿರುವವರು, ಟಿ.ಬಿ., ಡಯಾಬಿಟಿಸ್ ಹಾಗೂ ಜ್ವರ, ಕೆಮ್ಮು ಮತ್ತು ನೆಗಡಿಯಂತಹ ಲಕ್ಷಣಗಳಿರುವ ವ್ಯಕ್ತಿಗಳು ಹಾಗೂ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರ ಸರ್ವೆ ಮಾಡಿ ಅವರನ್ನು ಗುರುತಿಸುವಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಿದ್ದಾರೆ ಇವರ ಕರ್ತವ್ಯ ಶ್ಲಾಘನೀಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮಾತನಾಡಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಾಡಿರುವಷ್ಟು ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಐ.ಎಲ್.ಐ ಸರ್ವೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದಾರೆ ಹಾಗಾಗಿ ಜೀವದ ಹಂಗು ತೊರೆದು ಕೆಲಸ ಮಾಡಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಹಕಾರಿ ಆರ್.ಟಿ. ದೇವೇಗೌಡ ಅವರು ಮಾತನಾಡಿ 44.28 ಲಕ್ಷ ರೂ. ಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿವಿಧ ಸಹಕಾರ ಸಂಘ-ಸಂಸ್ಥೆಗಳ ವತಿಯಿಂದ ನೀಡಲಾಗುತ್ತಿದೆ ಎಂದರಲ್ಲದೆ, ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಲಾಕ್ ಡೌನ್ ಸಮಯದಲ್ಲಿ ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್ ಮತ್ತಿರರು ಹಾಜರಿದ್ದರು.

Post a Comment

Previous Post Next Post