ಕೊರೋನಾ ನಿವಾರಣೆಗೆ ಅಗತ್ಯ ಸೌಲಭ್ಯಗಳ ಕೊರತೆಯಾಗದಂತೆ ನಿಗಾವಹಿಸಲು ಸಚಿವರ ಸೂಚನೆ


ಹಾಸನ.ಜೂ.9:- ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿವಾರಣೆಗೆ ಬೇಕಿರುವ ಅಗತ್ಯ ಸೌಲಭ್ಯಗಳಿಗೆ ಯಾವುದೇ ಕೊರತೆಯಾಗದಂತೆ ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಪುರಸಭೆ ಸಭಾಂಗಣದಲ್ಲಿಂದು ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೊರೋನಾ ಮೇಲ್ವಿಚಾರಣಾ ಸಭೆ ನಡೆಸಿ ಮಾತನಾಡಿದ ಅವರು ಕೊರೋನಾ ನಿರ್ವಹಣೆ ಕಾರ್ಯದಲ್ಲಿ ತೊಡಗಿರುವ ವೈದ್ಯರು, ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಇದ್ದಲ್ಲಿ ತಕ್ಷಣವೇ ಗಮನಕ್ಕೆ ತಂದು ಪರಿಹರಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದ ಸಚಿವರು ಚನ್ನರಾಯಪಟ್ಟಣ ತಾಲ್ಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಊಟದ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಮುಂದುವರೆಸುವಂತೆ ಸೂಚಿಸಿದರು. 

ಅಲ್ಲದೆ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಅಲ್ಲಿನ ಆಶಾ ಕಾರ್ಯಕರ್ತೆಯರಿಗೆ ಸಹಾಯಧನವನ್ನು ವಿತರಣೆ ಮಾಡುವುದಾಗಿ ಸಚಿವರು ಹೇಳಿದರು.

ಜಿಲ್ಲೆ ಈಗಾಗಲೇ ಹಲವು ರೀತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಇರುವ ನ್ಯೂನತೆಗಳ ಕುರಿತು ಗಮನಹರಿಸಿ ಪರಿಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳು ಕೊರೋನಾ ನಿವಾರಣೆಗಾಗಿ ಒಟ್ಟಾಗಿ ಜವಾಬ್ದಾರಿಯುತವಾಗಿ ಶ್ರಮಿಸುತ್ತಿದ್ದ್ದು, ಅವರ ಕ್ಷೇತ್ರ ಪರಿಶೀಲನೆ ಸಂದರ್ಭದಲ್ಲಿ ಕಾರ್ಯವೈಕರಿ ಗಮನಿಸಿರುವುದಾಗಿ ಹೇಳಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ ಹಾಗು ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಸೋಂಕಿತರ ಸಂಖ್ಯೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಪ್ರಮಾಣವೇ ಹೆಚ್ಚಾಗಿದೆ ಆದರೆ ಅವರಲ್ಲಿ ಬಹುತೇಕ ಸೋಂಕಿತರು ಮುಂಬೈ ಮೂಲದಿಂದ ಬಂದವರಾಗಿದ್ದು, ಅವರನ್ನೇಲ್ಲಾ ವ್ಯವಸ್ಥಿತವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು ಹಾಗಾಗಿ ಸಮುದಾಯಕ್ಕೆ ಸೋಂಕು ತಗುಲದಂತೆ ತಡೆಯಲು ಸಾಧ್ಯವಾಗಿದೆ ಎಂದು ಸಚಿವರಿಗೆ ತಿಳಿಸಿದರು.

ಮುಂದೆಯೂ ಕೂಡ ತಾಲ್ಲೂಕಿಗೆ ಹೊರ ರಾಜ್ಯದಿಂದ ಹೆಚ್ಚಿನ ಜನರು ಬರುವ ನಿರೀಕ್ಷೆಯಿದ್ದು, ಅವರನ್ನೆಲ್ಲಾ ಸೂಕ್ತ ರೀತಿಯಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದರಲ್ಲದೆ, ತಾಲ್ಲೂಕಿನಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ಕೊರತೆಯಿದ್ದು ತುರ್ತಾಗಿ ವೈದ್ಯರನ್ನು ನೇಮಕ ಮಾಡಿಕೊಡುವಂತೆ ಕೇಳಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ತಾಲ್ಲೂಕಿನಲ್ಲಿ ಹಲವಾರು ಯೋಜನೆಗಳಡಿ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಕೊಬ್ಬರಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೆಲೆ ಇಳಿಕೆಯ ಕಾರಣದಿಂದ ಸಾಕಷ್ಟು ತೊಂದರೆಗೀಡಾಗಿದ್ದು, ಬೆಲೆ ಹೆಚ್ಚಿಸಿ ಆದಷ್ಟು ಬೇಗ ಕೊಬ್ಬರಿ ಖರೀದಿ ಪ್ರಕ್ರೀಯೆಗೆ ಅವಕಾಶ ಮಾಡಿಕೊಡುವಂತೆ ಶಾಸಕರು ಕೋರಿದರು.

ಶಾಸಕರಾದ ಬಾಲಕೃಷ್ಣ ಅವರು ಮಾತನಾಡಿ ಅಕ್ರಮ ಸಕ್ರಮ ಯೋಜನೆಯಡಿ ತಾಲ್ಲೂಕಿಗೆ 2500 ಟ್ರಾನ್ಸ್ ಪಾರ್ಮ್ ಗಳು ಮಂಜೂರಾಗಿದ್ದು 1000 ಟ್ರಾನ್ ಪಾರ್ಮ್ ಗಳನ್ನು ನೀಡಲಾಗಿದೆ, ಜೊತೆಗೆ 450 ಟ್ರಾಸ್ಸ್ ಪಾರ್ಮ್ ಗಳನ್ನು ರಿಪ್ಲೇಸ್ ಮಾಡಲಾಗಿದೆ. ತಾಲ್ಲೂಕಿನಲ್ಲಿದ್ದ ಟ್ರಾನ್ಸ್ ಪಾರ್ಮ್ ರ್ ರಿಪೇರಿ ಸೆಂಟರ್ ಬೆಂಕಿ ಅವಗಡಕ್ಕೆ ತುತ್ತಾಗಿ ಸುಮಾರು 4 ಕೋಟಿ ನಷ್ಟವಾಗಿದೆ ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಹಾಗಾಗಿ ಸರ್ಕಾರದಿಂದ ವಿಶೇಷ ಅನುದಾನದಡಿಯಲ್ಲಿ ಪರಿಹಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿದೆ ಅದಕ್ಕೆ ತಕ್ಕಂತೆ ಪೌರಕಾರ್ಮಿಕರ ಸಂಖ್ಯೆಯಲ್ಲಿ ಕೊರತೆಯಿದ್ದು, ಸ್ವಚ್ಚ ನಗರವಾಗಿ ತಾಲ್ಲೂಕನ್ನು ಉಳಿಸಿಕೊಳ್ಳಲು ಸ್ವಚ್ಚತಾ ಕಾರ್ಯಕ್ಕೆ ಪುರಸಭೆಗೆ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ ಹಾಗಾಗಿ ನೇಮಕಾತಿ ಪ್ರಕ್ರಿಯೆಗೆ ಅವಕಾಶ ನೀಡಿ ಎಂದು ಸಚಿವರಲ್ಲಿ ಬಾಲಕೃಷ್ಣ ಮತ್ತು ಗೋಪಾಲಸ್ವಾಮಿ ಮನವಿ ಮಾಡಿದರಲ್ಲದೆ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿಗೆ ಹಣ ಸ್ಥಗಿತಗೊಂಡಿದ್ದು, ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಹಾಗಾಗಿ ಆ ಕುರಿತು ಇರುವ ಅಡೆತಡೆಗಳನ್ನು ನಿವಾರಿಸುವಂತೆ ಸಚಿವರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಸೋಂಕಿತರಲ್ಲಿ ಶೇ.80 ರಷ್ಟು ಜನ ಚನ್ನರಾಯಪಟ್ಟಣ ತಾಲ್ಲೂಕಿನವರು. 800 ಪ್ರಕರಣಗಳಲ್ಲಿ 700 ಪ್ರಕರಣಗಳು ಮುಂಬೈನಿಂದ ಬಂದವರು. ಅವರನ್ನೆಲ್ಲಾ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದರಲ್ಲದೆ, ಪ್ರಸ್ತುತದಲ್ಲಿ 80 ಜನ ಶಂಕಿತರು ತಾಲ್ಲೂಕಿನ ಸಮುದಾಯ ಕ್ವಾರಂಟೈನ್‍ನಲ್ಲಿದ್ದಾರೆ. ನಾಲ್ಕು ಸ್ಥಳಗಳನ್ನು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಒ ಪರಮೇಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ತಹಶಿಲ್ದಾರ್ ಮಾರುತಿ, ಡಿ.ವೈ.ಎಸ್.ಪಿ. ಲಕ್ಷ್ಮಣ್ ಗೌಡ, ಸೇರಿದಂತೆ ಜಿಲ್ಲಾಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Post a Comment

Previous Post Next Post