ಮಲೆನಾಡಿನ ಚಂದ್ರದ್ರೋಣ ಪರ್ವತ


ಆಕಾಶದ ತುಂಬಾ ಮೋಡಗಳು, ಆ ಮೋಡಗಳ ನಡುವೆ ಮಂಜಿನ ಹನಿಗಳು ಇವುಗಳು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿರುವ ಚಂದ್ರದ್ರೋಣ ಪರ್ವತವನ್ನು ಬಿಟ್ಟು ಬಿಡದೆ ಆವರಿಸಿಕೊಂಡಿದೆ. ಎತ್ತ ನೋಡಿದರೂ ಮುಂಜಾನೆಯ ಮಂಜಿನ ಶೃಂಗಾರ ಹೀಗೆ ಇರುವಾಗ ದಾರಿ ಯಾವುದು?? ಪರ್ವತ ಯಾವುದು?? ಹಾಗೆ ಪರಸ್ಪರ ಒಬ್ಬರನ್ನೊಬ್ಬರನ್ನು ಕಾಣಲು ಸಹ ಕಷ್ಟಸಾಧ್ಯವಾಗುತ್ತದೆ‌. ಅಂಬರಕ್ಕೆ ಮುತ್ತಿಕ್ಕುವಂತಹ ಪರ್ವತ ಶ್ರೇಣಿ. ಸ್ವರ್ಗವೇ ಧರೆಗಿಳಿದು ಬಂದಂತೆ ಕಣ್ಣಿಗೆ ಹೊಡೆಯುತ್ತಿತ್ತು ಆ ಪ್ರಕೃತಿಯ ರಮಣೀಯ ತಾಣ.
ಎಲ್ಲರನ್ನೂ ಸೆಳೆಯುವ ಮತ್ತು ತನ್ನ ಬಳಿ ಕರೆಸಿಕೊಳ್ಳುವ ಜಾಗ ಅದುವೇ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲಿನಲ್ಲಿ ನೆಲೆಸಿರುವ ಚಂದ್ರದ್ರೋಣ ಪರ್ವತ ಅರ್ಥಾತ್ ಮುಳ್ಳಯ್ಯನಗಿರಿ. ಕರ್ನಾಟಕದ ಅತಿ ಎತ್ತರದ ಶಿಖರ 1930‌ಮೀಟರ್ (6312 ಅಡಿ). ಈ ಬೆಟ್ಟದ ಮೇಲ್ಭಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ. ಜರಿ ಸಸ್ಯ, ಬಣ್ಣ ಬಣ್ಣದ ಚಿಗುರು ಸೂರ್ಯನ ಕಿರಣಗಳಿಗೆ ಮಿಂಚುವ ಗಿಡಗಳು, ಪಥದ ಮಧ್ಯದಲ್ಲಿ ಗುಂಡಿ ಗೋರಿಗಳು, ಅಲ್ಲಲ್ಲಿ ಸಿಗುವ ಒಂದಿಷ್ಟು ತಿರುವುಗಳು, ರಸ್ತೆ ಬದಿಯಲ್ಲಿ ಕಾಣಸಿಗುವ ಸಣ್ಣ ಸಣ್ಣ ಝರಿಗಳು, ಸುತ್ತಲೂ ಹಸಿರು ತುಂಬಿದ ಕಣಿವೆಗಳು, ಒಟ್ಟಿನಲ್ಲಿ ಕಣ್ಣ್ತುಂಬಿಸುವುದು ಮಲೆನಾಡಿನ ಚೆಲುವು. ಪ್ರತಿ ಋತುವಿನಲ್ಲಿಯೂ ಭಿನ್ನ-ವಿಭಿನ್ನವಾದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತದೆ. ಮುಂಗಾರಿನಲ್ಲಂತೂ ಪರ್ವತದ ತುತ್ತ ತುದಿಯಲ್ಲಿ ಬಿರುಗಾಳಿಯು ನಮ್ಮನ್ನು ಎತ್ತಿ ಬಿಸಾಕುವ ಭಾವ ಮೂಡಿಸುತ್ತದೆ‌ ಹಾಗೆ ಚಳಿಗಾಲದಲ್ಲಿ ಇಬ್ಬನಿ ಗಳು ಇಲ್ಲಿನ ಎಲ್ಲಾ ಶಿಖರಗಳನ್ನು ಆವರಿಸಿಕೊಂಡಿರುತ್ತದೆ. ನೋಡುಗರ ಕಣ್ಣಿಗೆ ಇದೊಂದು ವಿಸ್ಮಯವಾದ ಸೊಬಗನ್ನು ಸವಿಯಲು ಅವಿಸ್ಮರಣೀಯ ತಾಣ. ಕ್ಷಣ ಕ್ಷಣಕ್ಕೂ ಇಲ್ಲಿನ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತಾ ಈ ಮಲೆನಾಡು ತನ್ನ ಲಾವಣ್ಯವನ್ನು ಜನರ ಮನಸ್ಸಿನಲ್ಲಿ ಲೀನವಾಗಿಸಿ ಮನಮೋಹನಗೊಳಿಸುತ್ತದೆ.
-ಸ್ಪೂರ್ತಿ.ಹೆಚ್.ಸಿ
Previous Post Next Post