ಹಾಸನ ಜಿಲ್ಲೆಯಲ್ಲಿ ದಿನನಿತ್ಯ ಬಹುತೇಕ ಭಾಗಷಃ ಲಾಕ್‍ಡೌನ್ ಆಗುತ್ತಿರುವ ಕಾರಣದಿಂದ ಸದ್ಯಕ್ಕೆ ಸಂಪೂರ್ಣ ಲಾಕ್‍ಡೌನ್ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಯವರು ಈ ವಾರದ ಪರಿಸ್ಥಿತಿ ನೋಡಿಕೊಂಡು ನಂತರವಷ್ಟೇ ಹಾಸನದಲ್ಲಿ ಸಂಪೂರ್ಣ ಲಾಕ್‍ಡೌನ್ ಬಗ್ಗೆ ನಿರ್ಧರಿಸಬಹುದು ಎಂದು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.
ಕೊರೋನಾ ವಿಚಾರದಲ್ಲಿ ಯಾವುದೇ ಜಿಲ್ಲೆಯ ಅಧಿಕಾರಿಗಳು ಮೈಮರೆಯಬಾರದು, ಆಯಾ ಜಿಲ್ಲೆಯ ಸುರಕ್ಷತೆಯ ಸಲುವಾಗಿ ಅಗತ್ಯವಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ ಹಾಗಾಗಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಹೇಳಿದರು.
ರೈತರಿಗೆ ಬೇಕಾದ ಸವಲತ್ತುಗಳನ್ನು ಕಡ್ಡಾಯವಾಗಿ ಒದಗಿಸಿರಿ, ಏನೇ ಸಮಸ್ಯೆಗಳಿದ್ದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಸಂಪರ್ಕಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು.
ವಿಡಿಯೋ ಸಂವಾದದಲ್ಲಿ ಬೆಂಗಳೂರಿನಿಂದ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಮಾತನಾಡಿ ಜಿಲ್ಲಾಡಳಿತ ಕೊವೀಡ್ 19 ಅನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತಿದೆ . ಸೊಂಕು ನಿಯಂತ್ರಣಕ್ಕೆ ಎಲ್ಲಾರೀತಿಯ ಮಂಜಾಗ್ರತೆ ವಹಿಸುತ್ತಿದೆ. ಎಲ್ಲಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಜಿಲ್ಲೆಯ ಕೊವಿದ್ ಆಸ್ಪತ್ರೆಗೆ ಹೆಚ್ಚುವರಿ 200 ಬೆಡ್ ಗಳು ಅಗತ್ಯವಿದ್ದು, ಶೀಘ್ರವಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆ ಆರಂಭಿಸಿದ್ದಾರೆ. ಮೂರು ಸಾವಿರ ಹೆಕ್ಟೆರ್ ನಲ್ಲಿ ರೈತರ ಆಲೂಗಡ್ಡೆ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ತುರ್ತಾಗಿ ಪರಿಹಾರ ಒದಗಿಸಬೇಕಿದೆ ಎಂದು ಸಚಿವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಸುಧಾಕರ್ ಅವರು ಮಾತನಾಡಿ ಎಲ್ಲಾ ಜಿಲ್ಲೆಗಳಲ್ಲಿರುವ ಕೊವೀಡ್ ಆಸ್ಪತ್ರೆಗಳಲ್ಲಿ ನಿಗಧಿತ ಪ್ರಮಾಣದಲ್ಲಿ ಚಿಕಿತ್ಸೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಕೊವೀಡ್-19 ಚಿಕಿತ್ಸೆಗಾಗಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಸರಿಯಾದ ವಿಧಾನದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಕುರಿತಂತೆ ಮುಖ್ಯಮಂತ್ರಿಯವರಿಗೆ ವರದಿ ನೀಡಿ ಪ್ರಸ್ತುತ ಪರಿಸ್ಥಿತಿ ವಿವರಿಸಿದರು. ಎಲ್ಲಾ ರೀತಿಯ ಮಂಜಾಗ್ರತೆ ವಹಿಸಿದ್ದು ಕೊವಿದ್ ಅಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು .
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಉಪ ವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್ ಮತ್ತು ಗಿರೀಶ್ ನಂದನ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Tags
ಹಾಸನ