ಹಾಸನ: ನಾಡಿನೆಲ್ಲಡೆ ಗಣೇಶ ಚತುರ್ಥಿ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ. ಆದರೂ ಕೆಲವು ಕಡೆ ಸಂಪ್ರದಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ವಿಘ್ನೇಶನ ಉತ್ಸವ ಆಚರಿಸಲಾಗುತ್ತಿದೆ.
ಆದರೆ ಕೆಲವು ಕಡೆಗಳಲ್ಲಿ ಗಣೇಶನ ಉತ್ಸವಕ್ಕೆ ಖರ್ಚು ಮಾಡುತ್ತಿದ್ದ ಹಣವನ್ನು ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಹಾಸನ ಜಿಲ್ಲೆ ಶಾಂತಿಗ್ರಾಮ ಹೋಬಳಿ ಬಲ್ಲೇನಹಳ್ಳಿ ಗ್ರಾಮದ ವಿನಾಯಕ ಗೆಳೆಯರ ಬಳಗದ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಮಾಡುವ ಮೂಲಕ ಗ್ರಾಮಸ್ಥರು ಇತರರಿಗೆ ಮಾದರಿಯಾದರು.
ಪ್ರತಿ ವರ್ಷದಂತೆ ಈ ಬಾರಿಯೂ ಬಲ್ಲೇನಹಳ್ಳಿ ಗ್ರಾಮದಲ್ಲಿ ವಿಘ್ನೇಶ್ವರ ಯುವಕರ ಸಂಘದಿಂದ ಹದಿನೇಳನೇ ಗಣೇಶ ಉತ್ಸವ ಸರಳವಾಗಿ ಆಚರಿಸಲಾಯಿತು. ಮೊದಲ ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸ್ಥಳೀಯರು ಅದೇ ದಿನ ವಿಸರ್ಜನೆ ಮಾಡಿದರು.
ಆದರೆ ಇದಕ್ಕೆ ಖರ್ಚು ಮಾಡುತ್ತಿದ್ದ ಹಣದಲ್ಲಿ ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ ವಿವಿಧ ಕ್ಷೇತ್ರಗಳ ಗಣ್ಯರನ್ನು ಅಭಿನಂದಿಸಲಾಯಿತು.
ಶಾಂತಿಗ್ರಾಮ ಪೆÇಲೀಸ್ ಠಾಣಾ ಪಿಎಸ್‍ಐ ಕೃಷ್ಣ ನೇತೃತ್ವದ ಸಿಬ್ಬಂದಿಗಳ ಜೊತೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿದ ವೈದ್ಯರು, ನರ್ಸ್ ಗಳು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರನ್ನು ಅಭಿನಂದಿಸಿ ಅವರ ಶ್ರಮಕ್ಕೆ ಗೌರವ ಸಲ್ಲಿಸಲಾಯಿತು.
ವಿಶೇಷ ಎಂದರೆ ಹಿಂದಿನಿಂದಲೂ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅಭಿನಂದಿತರನ್ನು ಊರಿನ ಮುಂಭಾಗದಲ್ಲಿ ಹೂ ಮಳೆ ಸುರಿಸಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಸ್ಥಳೀಯರು, ಹಿಂದಿನಿಂದಲೂ ಯಾವುದೇ ರೀತಿಯಲ್ಲೂ ದುಂದು ವೆಚ್ಚ ಮಾಡದೇ ಗಣೇಶೋತ್ಸವ ಆಚರಣೆ ಜೊತೆಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮತ್ತು ಸಾಧಕರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಇದು ನಮ್ಮೆಲ್ಲರಿಗೂ ಖುಷಿ ಕೊಟ್ಟಿದೆ ಎಂದು ವಿನಾಯಕ ಗೆಳೆಯರ ಬಳಗದ ದೇವರಾಜ್ ಬಲ್ಲೇನಹಳ್ಳಿ ಸಂತಸ ವ್ಯಕ್ತಪಡಿಸಿದರು.
Tags
ಹಾಸನ