ಚಿರು ತಪ್ಪು ಮಾಡಿದ್ದರೆ ಶಿಕ್ಷೆ ಕೊಡುತ್ತೀರಾ? ದರ್ಶನ್‌ ಖಡಕ್‌ ಪ್ರಶ್ನೆ!

ಕನ್ನಡ ಚಿತ್ರರಂಗದಲ್ಲಿ ಈಗ ಡ್ರಗ್ಸ್‌ನದ್ದೇ ಸುದ್ದಿ. ಮಾದಕ ವಸ್ತು ಮಾಫಿಯಾದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳು ಚಂದನವನದ ಕೆಲವರ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ಜಾರಿಯಲ್ಲಿದೆ. ಒಟ್ಟಾರೆ ಈ ಎಲ್ಲ ಘಟನೆಗಳ ಬಗ್ಗೆ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆ ನಟ ಈ ನಟ ಎಂಬುದೆಲ್ಲ ಯಾಕೆ?
'ಮೊದಲು ಊಹಾಪೋಹಗಳನ್ನು ಬಿಡಿ. ಹೇಗಿದ್ದರೂ ಈ ಪ್ರಕರಣ ಪೊಲೀಸರ ಕೈಯಲ್ಲಿ ಇದೆ. ಗೊತ್ತಾಗುತ್ತದೆ, ಹೆಸರುಗಳು ಹೊರಬರುತ್ತವೆ. ಅಲ್ಲಿಯವರೆಗೂ ಆ ನಟ ಈ ನಟ ಎಂಬುದೆಲ್ಲ ಯಾಕೆ? ಒಂದು ಕ್ಲಾಸ್‌ ರೂಮ್‌ನಲ್ಲಿ ಫಸ್ಟ್‌ ರ‍್ಯಾಂಕ್‌ ವಿದ್ಯಾರ್ಥಿ ಇರುತ್ತಾನೆ. ಅದೇ ರೀತಿ ಜೀರೋ ತೆಗೆಯೋನೂ ಇರ್ತಾನೆ. ಹಾಗಂತ ಇಡೀ ಕ್ಲಾಸ್‌ ಅನ್ನು ಜೀರೋ ಅನ್ನೋಕೆ ಆಗಲ್ಲ' ಎಂದಿದ್ದಾರೆ ದರ್ಶನ್‌.'ಇನ್ನೊಬ್ಬರ ಬಗ್ಗೆ ಕಾಮೆಂಟ್‌ ಮಾಡಲ್ಲ'!
ಸ್ಯಾಂಡಲ್‌ವುಡ್‌ನಲ್ಲಿ ಯುವ ನಟರೊಬ್ಬರ ಮರಣೋತ್ತರ ಪರೀಕ್ಷೆ ಯಾಕೆ ಆಗಲಿಲ್ಲ ಎಂದು ಮೊದಲು ಪ್ರಶ್ನೆ ಎತ್ತಿದ್ದೇ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌. ಯಾರ ಹೆಸರನ್ನೂ ಅವರು ಹೇಳಿಲ್ಲವಾದರೂ ಆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಈ ಸಂಬಂಧ ಅವರು ಇಂದು (ಆ.31) ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಆದರೆ ಇಂದ್ರಜಿತ್‌ ಬಗ್ಗೆ ಮಾತನಾಡಲು ದರ್ಶನ್‌ ನಿರಾಕರಿಸಿದ್ದಾರೆ. 'ಇನ್ನೊಬ್ಬರ ಬಗ್ಗೆ ನಾನು ಕಾಮೆಂಟ್‌ ಮಾಡಲ್ಲ. ಜಸ್ಟ್‌ ಕಾದು ನೋಣೋಣ. ಪೊಲೀಸರು ತನಿಖೆ ಮಾಡಲಿ' ಎಂದಿದ್ದಾರೆ ಡಿ ಬಾಸ್‌.

'ಸತ್ತ ಮೇಲೆ ಒಳ್ಳೆಯ ಮಾತಾಡೋಣ'
ಈ ಪ್ರಕರಣದಲ್ಲಿ ನಟ ಚಿರಂಜೀವಿ ಸರ್ಜಾ ಹೆಸರು ಕೇಳಿಬಂದಿರುವುದಕ್ಕೆ ದರ್ಶನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಚಿರು ಹೆಸರು ತುಂಬ ಎತ್ತುತ್ತಿದ್ದಾರೆ. ಅದು ನನಗೆ ಬೇಜಾರಾಗಿದೆ. ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ, ಹೆಂಗಿದ್ದಾನೋ ಏನೋ? ಅಪ್ಪಿ-ತಪ್ಪಿ ಸಾಬೀತಾದರೆ ನೀವು ಅವರನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡೋಕೆ ಆಗತ್ತಾ? ನಮ್ಮ ತಂದೆ-ತಾಯಿ ಹೇಳಿಕೊಟ್ಟಿರುವ ಒಂದು ಮಾತು ಹೇಳುತ್ತೇನೆ. ಸತ್ತೋನು ಕೊಲೆಗಾರನೇ ಆಗಿರಲಿ. ಅವನ ವರ್ಷದ ತಿಥಿ ಮಾಡುತ್ತೇವೆ. ಸತ್ತಮೇಲೆ ಒಳ್ಳೆಯ ಮಾತಾಡೋಣ' ಎಂದಿದ್ದಾರೆ ದರ್ಶನ್‌.

Post a Comment

Previous Post Next Post