ಗೆಂಡೆಕಟ್ಟೆಯಲ್ಲಿ ಜೀವ ವೈವಿಧ್ಯತಾ ವನ ನಿರ್ಮಾಣ: ಅನಂತ ಹೆಗಡೆ ಅಶೀರಸ

ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಅರಣ್ಯವನ್ನು ವಿಶೇಷ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಅಶೀರಸ ಅವರು ತಿಳಿಸಿದ್ದಾರೆ.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡಸಿದ ಅವರು ಅಧಿಕಾರಿಗಳಿಂದ ವರದಿ ಪಡೆದು, ಸುಮಾರು 308 ಎಕರೆ ಪ್ರದೇಶದಲ್ಲಿರುವ ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ವಿಶೇಷ ಯೋಜನೆಯಡಿ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ಸಿದ್ಧಪಡಿಸಲಾಗಿದ್ದು, ಅದರಂತೆಯೇ ನದಿ ಮೂಲಗಳು, ಪುರಾತನ ಕೆರೆಗಳು ಹಾಗೂ ಅರಣ್ಯ ಪರಿಸರ ಇವುಗಳ ಪುನಶ್ಚೇತನಕ್ಕೆ ವಿಶೇಷ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

 ದಿನೇ ದಿನೇ ಅರಣ್ಯ ಹಾಗೂ ಕೆರೆಗಳ ಒತ್ತುವರಿಯಾಗಿ, ಅವುಗಳು ಕಣ್ಮರೆಯಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಜೀವ ವೈವಿಧ್ಯತೆಗಳನ್ನು, ಪರಿಸರವನ್ನು ಉಳಿಸುವ ದೃಷ್ಟಿಯಿಂದ ಮೂರು ಹಂತಗಳಲ್ಲಿ ಸಮಿತಿಗಳನ್ನು ರಚಿಸಿ, ಅವುಗಳ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಒಗ್ಗೂಡಿಸಿ, ದಾಖಲಾತಿಗಳ ಅಧ್ಯಯನ ಹಾಗೂ ವರದಿ ಮಾಡುವುದು ಅಗತ್ಯವಿದೆ. ಜಿಲ್ಲೆಯಲ್ಲಿ ಈಗಾಗಲೇ ಪರಿಣಾಮಕಾರಿಯಾಗಿ ಇದರ ಅನುಷ್ಠಾನ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

 ಪ್ರತಿ ಗ್ರಾಮದಲ್ಲಿ ಜನತಾ ಜೀವ ವೈವಿಧ್ಯತೆ ದಾಖಲಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದ ಅವರು ಅದರ ಅನುಕೂಲಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿದರಲ್ಲದೆ, ಈ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸಿ ಸಮುದಾಯದ ಸಹಭಾಗಿತ್ವ ಪಡೆಯಿರಿ ಎಂದರು.

 ಮಲೆನಾಡು ಪ್ರದೇಶಗಳಲ್ಲಿ ವಿವಿಧ ಬಗೆಯ ಔಷಧಿ ಗುಣಗಳುಳ್ಳ ಸಸ್ಯ ಸಂಪತ್ತು, ಬಹು ಬೇಡಿಕೆ ಇದ್ದ ವಿಶೇಷ ಮಸಾಲೆ ಪದಾರ್ಥಗಳಾದ ಏಲಕ್ಕಿ, ಜಾಯಿಕಾಯಿ ಹಾಗೂ ಇತರೆ ಸಾಂಬಾರ ಪದಾರ್ಥಗಳ ಉತ್ಪಾದನೆ ದಿನೇ ದಿನೇ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ಯೋಜನೆಗಳನ್ನು ಸರ್ಕಾರಕ್ಕೆ ಮಂಡಿಸಬೇಕು ಎಂದರು.

 ಸ್ಥಳೀಯ ಪ್ರದೇಶಗಳಲ್ಲಿ ಪಾರಂಪರಿಕವಾಗಿ ಮಹತ್ವವುಳ್ಳ ಆಹಾರ ಪದಾರ್ಥಗಳು ಹಾಗೂ ವಿಶೇಷ ತಳಿಗಳ ಹಣ್ಣುಗಳನ್ನು ಬೆಳೆಯಲು, ಜಾನುವಾರುಗಳನ್ನು ಸಾಕಲು ಉತ್ತೇಜನ ನೀಡಬೇಕು. ಜೊತೆಗೆ ಇದಕ್ಕೆ ಜಿಯೋ ಟ್ಯಾಗ್ ಪಡೆಯಲು ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಶ್ರಮಿಸಬೇಕು ಎಂದು ಅನಂತ ಹೆಗಡೆ ಅಶೀರಸ ಅವರು ಹೇಳಿದರು.

 ರಾಜ್ಯದಾದ್ಯಂತ ಸುಮಾರು 29 ಕೃಷಿ ರಾಸಾಯನಿಕಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದರೂ ಸಹ ಅವುಗಳ ಮಾರಾಟ ಹಾಗೂ ಬಳಕೆ ನಿಂತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಶುಂಠಿ ಬೆಳೆಗಾರರು ಅತೀ ಹೆಚ್ಚಿನ ರಾಸಾಯನಿಕಗಳನ್ನು ಬಳಸುತ್ತಿದ್ದು, ಇದರಿಂದ ಜೀವ ಸಂಕುಲದ ಆರೋಗ್ಯ ಹಾಗೂ ಪರಿಸರ ಹಾನಿ ಉಂಟಾಗುತ್ತಿದೆ. ಇದರಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಇದರ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 1,100 ಕೆರೆಗಳನ್ನು ಸರ್ವೆ ಮಾಡಲಾಗಿದ್ದು, ಅವುಗಳಿಗೆ ಶಾಶ್ವತ ಬೇಲಿಯನ್ನು ಹಾಕದಿದ್ದಲ್ಲಿ ಒತ್ತುವರಿಯಾಗುವ ಸಾಧ್ಯತೆ ಹೆಚ್ಚಾಗಿದೆ, ನಗರದ ಹೊರವಲಯದ ಸುಮಾರು 124 ಹೆಕ್ಟೇರ್‍ಗೂ ಅಧಿಕ ವಿಸ್ತೀರ್ಣವುಳ್ಳ ಹುಣಸಿನ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರ ವಿಸ್ತೀರ್ಣಗೊಂಡಂತೆ ಕೆರೆಯು ಒತ್ತುವರಿಯಾಗುವ ಸಾಧ್ಯತೆ ಇದೆ ಎಂದರು.

ಆನೆ ಕಾರಿಡಾರ್ ಸಮಸ್ಯೆ, ಎತ್ತಿನಹೊಳೆ ಯೋಜನೆಯಿಂದಾಗಿರುವ ಅರಣ್ಯ ನಾಶ ಹಾಗೂ ಪರ್ಯಾಯ ವನಸಂವರ್ಧನಾ ಯೊಜನೆಗಳ ಬಗ್ಗೆಯೂ ಜಲ್ಲಾಧಿಕಾರಿಯವರು ವಿವರಿಸಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸೇರಿದಂತೆ 267 ಗ್ರಾಮ ಪಂಚಾಯ್ತಿಗಳು, 8 ತಾಲ್ಲೂಕು ಪಂಚಾಯ್ತಿಗಳಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಲಾಗಿದ್ದು, ಸಂಬಂಧಪಟ್ಟ ದಾಖಲಾತಿಗಳನ್ನು ಹಾಗೂ ವರದಿಗಳನ್ನು ಪ್ರತಿ ತಿಂಗಳ ಕೊನೆಯಲ್ಲಿ ಸಲ್ಲಿಸಲಾಗುತ್ತಿದೆ ಎಂದು ವರದಿ ನೀಡಿದರು.

 ಇದೇ ವೇಳೆ ಹಾಸನ ತಳಿ ಮೇಕೆ ಹಾಗೂ ಆಲೂರು ಸಣ್ಣ ಅಕ್ಕಿ ತಳಿಯ ಬಗ್ಗೆ ಸಭೆಯ ಗಮನಕ್ಕೆ ತಂದ ಅವರು ಇವುಗಳ ಸಂವರ್ಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

 ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಜಿಲ್ಲಾ ಪಂಚಾಯತ್ ಉಪ ಮುಖ್ಯ ಕಾರ್ಯದರ್ಶಿ ಮಹೇಶ್, ಜಂಟಿ ಕೃಷಿ ನಿರ್ದೇಶಕರಾದ ರವಿಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೊಗೇಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

Previous Post Next Post