ಹಾಸನ : ಯಾವುದೇ ಸಂಕಷ್ಟಗಳಿಗೆ ದಾವಿಸದ ಮುಖ್ಯಮಂತ್ರಿಗಳು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮಾತಿನ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ರೈತರು ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆ ಜೋಳ ಬೆಳೆದಿದ್ದಾರೆ. ಆದರೆ ಬೆಳೆದ ಬೆಳೆಯನ್ನು ಇದುವರೆಗೂ ಖರೀದಿ ಮಾಡುವವರಿಲ್ಲ. ಮತ್ತೊಂದೆಡೆ ಹೆಚ್ಚು ಮಳೆಯಿಂದಾಗಿ ಬೆಳೆಯೆಲ್ಲಾ ನಾಶವಾಗಿದೆ. ರೈತರನ್ನು ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ತರುವುದಾಗಿ ಹೇಳಿದರು. ಇಡೀ ಹಾಸನ ಜಿಲ್ಲೆ ಒಳಗೆ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಅವರ ನೆರವಿಗೆ ಬರಬೇಕಾದ ಮುಖ್ಯಮಂತ್ರಿಗಳು ಸಚಿವ ಸಂಪುಟದ ವಿಸ್ತರಣೆಗೆ ಹಾಗೂ ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳಲು ಹೋರಾಟ ಮಾಡುವ ಮೂಲಕ ರೈತರಿಗೆ ಮರಣ ಶಾಸನ ಬರೆಯುತ್ತಿರುವುದಾಗಿ ಆರೋಪಿಸಿದರು. ರೈತರ ಸಂಕಷ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ಯಾರ್ಯಾರನ್ನೋ ಮಂತ್ರಿ ಮಾಡಲು ಹೊರಟಿದ್ದಾರೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಮೊದಲು ಧಾವಿಸಿ ಅವರು ರೈತರು ಸಾಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇಂದು ಹಾಸನ ಜಿಲ್ಲೆ ಲೂಟಿ ಕೋರರ ಕೈ ಸೇರಿದೆ. ಹಣ ಕೊಟ್ಟವರಿಗೆ ಎಲ್ಲಿ ಬೇಕಾದರೂ ವರ್ಗಾವಣೆ ಮಾಡಿಕೊಡಲಾಗುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಪ್ರಧಾನಿ ಮೋದಿ ಯವರು ಇತರೆ ಸರಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಎಷ್ಟು ಪರ್ಸೆಂಟಿನ ಸರ್ಕಾರ ಎಂದು ಅವರೇ ಹೇಳಬೇಕು ಎಂದು ಪ್ರಶ್ನೆ ಮಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರ ಕೊರತೆ ಇದ್ದರೂ ಇದುವರೆಗೂ ಯಾರನ್ನೂ ಕೂಡ ನೇಮಕ ಮಾಡಿಲ್ಲ. ಇವೆಲ್ಲಾ ಗಮನಿಸಿದರೇ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಯವರ ಜೊತೆ ಶಾಮೀಲಾಗಿರುವುದಾಗಿ ಅನುಮಾನಿಸಿದರು. ಇಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಬಡ ಮಕ್ಕಳು ಮತ್ತು ಪೋಷಕರ ಶಾಪ ಅವರ ಸರ್ಕಾರಕ್ಕೆ ತಟ್ಟೇ ತಟ್ಟುತ್ತದೆ ಎಂದು ಭವಿಷ್ಯ ನುಡಿದರು. ಮುಂದಾದರೂ ಇಂತಹ ಪರಿಸ್ಥಿತಿಯನ್ನು ಗಮನಿಸಿ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.
Tags
ಹಾಸನ