ಕೊಟ್ಟಿಗೆಹಾರ ಹೊರನಾಡು ರಸ್ತೆಯ ಬದಿ ಹುಲ್ಲಿಗೂ ಕಳೆನಾಶಕ ಸಿಂಪಡಣೆ

ಕೊಟ್ಟಿಗೆಹಾರ:ಕೊಟ್ಟಿಗೆಹಾರ ಬಾಳೆಹೊನ್ನೂರು ರಸ್ತೆ ಹಾಗೂ ಕೊಟ್ಟಿಗೆಹಾರ ಹೊರನಾಡು ರಸ್ತೆಯ ಇಬ್ಬದಿ ಹುಲ್ಲಿಗೆ ಕೆಲವೆಡೆ ರಸ್ತೆ ಬದಿಯ ಕೆಲ ತೋಟ ಮಾಲೀಕರು ಕಳೆನಾಶಕ ಸಿಂಪಡಿಸಿದ್ದು ಇದರಿಂದಾಗಿ ಈ ಭಾಗದ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ.
ಕೊಟ್ಟಿಗೆಹಾರ ಬಾಳೆಹೊನ್ನೂರು ರಸ್ತೆಯ ಬಾಳೂರು, ಚಂದುವಳ್ಳಿ, ಕೂವೆ, ಗಬ್ಗಲ್, ಕೊಟ್ಟಿಗೆಹಾರ ಹೊರನಾಡು ರಸ್ತೆಯ ಜಾವಳಿ, ಕೆಳಗೂರು, ಸುಂಕಸಾಲೆ, ಹಿರೆಬೈಲ್ ಸಮೀಪ ರಸ್ತೆ ಬದಿಯ ಹುಲ್ಲಿಗೆ ಕಳೆನಾಶಕ ಸಿಂಪಡಿಸಲಾಗಿದ್ದು ಇದರಿಂದಾಗಿ ಜಾನುವಾರುಗಳಿಗೆ ಮೇವು ಸಿಗದಂತಾಗಿದೆ.
ಬಹಳಷ್ಟು ಹಿಂದೆಯೆ ಗೋಮಾಳಗಳು ಒತ್ತುವರಿಯಾಗಿದ್ದು ಜಾನುವಾರುಗಳಿಗೆ ಮೇಯಲು ಜಾಗವಿಲ್ಲದೆ ಇರುವುದರಿಂದ ಮೇವಿಗೆ ರಸ್ತೆ ಬದಿಯ ಹುಲ್ಲನ್ನೇ ಆಶ್ರಯಿಸಲಾಗಿತ್ತು. ಆದರೆ ಈಗ ಹುಲ್ಲಿಗೆ ಕಳೆನಾಶಕ ಸಿಂಪಡಿಸಿರುವುದರಿಂದ ಜಾನುವಾರುಗಳ ಮೇವು ಇಲ್ಲದಂತಾಗಿದೆ.
ರಸ್ತೆ ಇಬ್ಬದಿಯ ತೋಟ ಮಾಲೀಕರು ತಮ್ಮ ತೋಟಗಳಿಗೆ ಕಳೆನಾಶಕ ಸಿಂಪಡಿಸುವುದರ ಜೊತೆಗೆ ರಸ್ತೆಯ ಬದಿಯ ಸರ್ಕಾರಿ ಜಾಗಕ್ಕೂ ಕಳೆ ನಾಶ ಸಿಂಪಡಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಹಸಲರ ಸಂಘದ ಬಾಳೂರು ಹೋಬಳಿ ಅಧ್ಯಕ್ಷ ರಮೇಶ್ ಚಂದುವಳ್ಳಿ ಮಾತನಾಡಿ ಕಳೆನಾಶಕ ಸಿಂಪಡಿಸಿದ್ದರಿಂದ ದನಗಳು ಪೇಟೆಗಳತ್ತ ಮುಖ ಮಾಡಿವೆ. ಜಾನುವಾರುಗಳನ್ನು ಸಾಕಿರುವವರಿಗೆ ಜಾನುವಾರು ಮೇಯಿಸಲು ಜಾಗವಿಲ್ಲದೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

Post a Comment

Previous Post Next Post