ಪೌರ ಕಾರ್ಮಿಕರು ನಗರ ಶುಚಿ ಮಾಡುವುದರ ಜೊತೆಗೆ ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಿದರೆ ಇನ್ನಷ್ಟು ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಭಿಪ್ರಾಯಪಟ್ಟರು.
ನಗರಸಭೆ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರ ಕಾರ್ಮಿಕರು ತಮ್ಮ ಜವಬ್ದಾರಿಗಳನ್ನು ಅರಿತುಕೊಂಡು ನಗರ ಸ್ವಚ್ಛತೆಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.
ಮನೆಯ ಹಂತದಲ್ಲಿಯೇ ಜೈವಿಕವಾಗಿ ಕೊಳೆಯುವ ಹಾಗೂ ಕೊಳೆಯದಂತಹ ಪ್ಲಾಸ್ಟಿಕ್ ಗ್ಲಾಸ್ ಇನ್ನು ಮುಂತಾದ ತ್ಯಾಜ್ಯಗಳನ್ನು ಉತ್ಪತ್ತಿಯಾಗುವ ಮೂಲದಲ್ಲಿಯೇ ವಿಂಗಡಣೆ ಮಾಡಬೇಕು ಹಾಗಾಗಿ ಪೌರಕಾರ್ಮಿಕರು ಆಸಕ್ತಿಯಿಂದ ತೊಡಗಿಸಿಕೊಂಡು ಜನರಿಗೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಪೌರಕಾರ್ಮಿಕರ ಅಭಿವೃದ್ಧಿಗಾಗಿ ಹಾಗೂ ಕಷ್ಟಗಳನ್ನು ಪರಿಹರಿಸಲು ಜಿಲ್ಲಾಡಳಿತ ಸೂಕ್ತ ಬೆಂಬಲ ನೀಡುತ್ತಿದ್ದು, ಇನ್ನು ಮುಂದೆಯೂ ಕಾನೂನಿನ ಚೌಕಟ್ಟಿನಲ್ಲಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರಲ್ಲದೆ, ಪೌರಕಾರ್ಮಿಕರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಶ್ಲಾಘನಾರ್ಹ ಎಂದರು.
ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಕುಟುಂಬದ ಪೋಷಣೆ ಹಾಗೂ ತಮ್ಮ ಆರೋಗ್ಯದ ಕಡೆ ಕಾಳಜಿವಹಿಸಬೇಕು ಹಾಗೂ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಒಳ್ಳೆಯ ಜೀವನ ನಡೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಆರ್. ಗಿರೀಶ್ ಅವರು ಹೇಳಿದರು.
ನಾವು ವೈಯಕ್ತಿಕ ಸ್ವಚ್ಛತೆ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿಟ್ಟರೆ ದೇವರಿಗೆ ಹತ್ತಿರವಾಗುತ್ತೇವೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ ಅವರ ಮಾರ್ಗದರ್ಶನದಂತೆ ಎಲ್ಲರೂ ನಡೆಯಬೇಕು ಎಂದರು.
ಪೌರ ಕಾರ್ಮಿಕ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಹೆತ್ತೂರು ಅವರು ಮಾತನಾಡಿ ಖಾಯಂ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ 38 ಜನರಿಗೆ ಮನೆ ನಿರ್ಮಾಣವಾಗುತ್ತಿದ್ದು, ಇನ್ನುಳಿದ ಕಾರ್ಮಿಕರಿಗೂ ನಿವೇಶನ ಖರೀದಿಸಿ ಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.
ಖಾಯಂ ಪೌರ ಕಾರ್ಮಿಕರು ವಿವಿಧ ಕಾರಣಗಳಿಗೆ ನಿಧನ ಹೊಂದಿದ್ದು, ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಕೋವಿಡ್ ಸಂದರ್ಭದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡುವಂತೆ ಅವರು ಮನವಿ ಮಾಡಿದರು.
ಖಾಯಂ ಪೌರಕಾರ್ಮಿಕರೊಂದಿಗೆ ಗುತ್ತಿಗೆ ಆಧಾರದ ಮೇಲೆ ನಗರದ ಸ್ವಚ್ಛತೆಗಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೂ ವಿವಿಧ ಮೂಲಭೂತ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್, ನಗರಸಭೆ ಪೌರಾಯುಕ್ತರಾದ ಕೃಷ್ಣ ಮೂರ್ತಿ, ನಗರಸಭೆ ಕಾರ್ಯಪಾಲಕ ಅಭಿಯಂತರರಾದ ರಂಗಸ್ವಾಮಿ, ಪ್ರಮುಖರಾದ ಪ್ರವೀಣ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಶಂಕರ್, ನಗರ ಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ಹಾಜರಿದ್ದರು.
Tags
ಹಾಸನ