ಬೇಲೂರು : ಹತ್ತನೆ ತರಗತಿ ಪರೀಕ್ಷೆ ಆರಂಭಗೊಂಡಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷೆಗೆ ಹಾಜರಾಗಿ ಬರೆಯತೊಡಗಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ೧೨ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಪೋಷಕರು ಆಗಮಿಸಿ ಕೊಠಡಿ ಸಂಖ್ಯೆ ಪರಿಶೀಲಿಸಿಕೊಂಡು ಮಕ್ಕಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಕಳುಹಿಸಿಕೊಡುತ್ತಿದ್ದಾರೆ
ಕೇಂದ್ರದ ಪ್ರವೇಶ ದ್ವಾರದಲ್ಲಿರುವ ಆಶಾಕಾರ್ಯಕರ್ತೆಯರು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವ ಬಗ್ಗೆ ಪರಿಶೀಲಿಸಿ ಹಾಗೂ ಸ್ಯಾನಿಟೈಸರ್ ಸಿಂಪಡಿಸಿ ಒಳ ಬಿಡುತ್ತಿದ್ದಾರೆ.
ಇವರಿಗೆ ಭಾರತಸೇವಾದಳದ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದೆ.
ಪರೀಕ್ಷಾ ಕೊಠಡಿಯೊಳಗೆ ೧೨ ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಗುತ್ತಿದ್ದು ಪರೀಕ್ಷೆ ಆರಂಭಕ್ಕು ಮುಂಚೆ ಪರೀಕ್ಷಾರ್ಥಿಗಳಿಗೆ ಕೊಠಡಿ ಮೇಲ್ವೀಚಾಕರು ಕೆಲವೊಂದು ಸಲಹೆ ಸೂಚನೆಗಳ ನೀಡುತ್ತಿದ್ದಾರೆ.
ಕೋವಿಡ್ ಪ್ರಕರಣ ಸೇರಿದಂತೆ ತುರ್ತು ಚಿಕಿತ್ಸಾ ಸಂದರ್ಭಕ್ಕೆ ಅನುಕೂಲ ಆಗುವಂತೆ ಸೂಕ್ತ ವ್ಯವಸ್ಥೆಯನ್ನು ಒಳಗೊಂಡ ಆಂಬ್ಯುಲೆನ್ಸ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಸಂದರ್ಭ ಹಾಸನ ಸೀಮೆಯೊಂದಿಗೆ ಮಾತನಾಡಿದ ಬಿಇಒ ಲೋಕೇಶ್, ತಾಲ್ಲೂಕಿನಲ್ಲಿ ೧೨ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ೧೦ ಗಂಟೆಯ ಒಳಗೆ ತಲುಪಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಮಾಸ್ಕ್, ಸ್ಯಾನಿಟೈಸರ್ ಹಾಗೂ ಪ್ರಥಮ ಹಂತದ ಕೋವಿಡ್ ಪರೀಕ್ಷೆ ಮೂಲಕ ಒಳ ಬಿಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ರೋಗಲಕ್ಷಣ ಇದ್ದಲ್ಲಿ ಅಂತಹವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿಯೆ ಪರೀಕ್ಷೆ ಬರೆಸಲಾಗುವುದು.
೬ ಅಡಿ ಅಂತರದಲ್ಲಿ ಒಂದು ಕೊಠಡಿಗೆ ೧೨ ವಿದ್ಯಾರ್ಥಿಗಳಂತೆ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿದೆ. ಸಿಬ್ಬಂದಿ ವರ್ಗದವರಿಗೂ ಶೇ.೧೦೦ ವ್ಯಾಕ್ಸಿನೇಷನ್ ಮಾಡಿಸಲಾಗಿದೆ. ಯಾವುದೆ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ಇದುವರಗೆ ಪರೀಕ್ಷಾರ್ಥಿಗಳಲ್ಲಿ ಯಾರಿಗೂ ಪಾಸಿಟೀವ್ ವರದಿಯಾಗಿಲ್ಲ. ಒಂದುವೇಳೆ ಕಾಣಿಸಿಕೊಂಡರೆ ಅವರಿಗಾಗಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರವನ್ನು ತೆರೆದಿದ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಆಂಬ್ಯುಲೆನ್ಸ್ ವ್ಯವಸ್ಥೆಯೂ ಇದೆ.
ನಮ್ಮ ತಾಲ್ಲೂಕಿನಲ್ಲಿ ಪುನಾರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೯೦೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ ೪೦ ವಿದ್ಯಾರ್ಥಿಗಳು ವಲಸೆ ವಿದ್ಯಾರ್ಥಿಗಳಿದ್ದಾರೆ. ಎಲ್ಲಾ ಕೇಂದ್ರಗಳಿಂದ ಒಟ್ಟು ೧೨ ವಿಕಲಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
