ಬೇಲೂರಿನಲ್ಲಿ ಲಸಿಕೆಗಾಗಿ ಸಾರ್ವಜನಿಕರಿಂದ ಪ್ರತಿಭಟನೆ

 ಬೇಲೂರಿನಲ್ಲಿ ಕೋವಿಡ್ ಲಸಿಕೆ ನೀಡದಿರುವುದನ್ನು ಖಂಡಿಸಿ ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಲಸಿಕೆ ನೀಡುವ ಕೇಂದ್ರವಾದ‌ ಬಿಇಒ ಕಚೇರಿ ಸಮೀಪದ ಮಾಧ್ಯಮಿಕ ಶಾಲಾ ಆವರಣದಿಂದ ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆ ಗೇಟಿನ ಬಳಿ ಪ್ರಥಮವಾಗಿ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿ  ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕೇಶವಮೂರ್ತಿ ಅವರು, ಕಳೆದ 5 ದಿನದಿಂದ ಲಸಿಕೆಗಾಗಿ ಬಂದು ಹೋಗುತ್ತಿದ್ದೇವೆ. ಬೆಳಿಗ್ಗೆ ಇಂದ ಮಧ್ಯಾಹ್ನದವರಗೂ ನಿಂತು ಕಾದರೂ ಲಸಿಕೆ ನೀಡಿಲ್ಲ. ಆ ನಂತರ ಲಸಿಕೆ ಬಂದಿಲ್ಲ ಎಂದು ತಿಳಿಸುತ್ತಾರೆ. ಬೇಲೂರಿನ ಶಾಸಕರು ಏನು ಮಾಡುತ್ತಿದ್ದಾರೆ? ಜನರ ಸಮಸ್ಯೆ ಅವರಿಗೆ ಅರ್ಥವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಮಹಿಳೆಯರು ಮಾತನಾಡಿ ಪ್ರತಿನಿತ್ಯ ಲಸಿಕೆಗಾಗಿ ಬಂದು ಹೋಗುವುದೆ ಆಗಿದೆ. ಹಳ್ಳಿಯಿಂದ ಬಂದು ಮಧ್ಯಾಹ್ನದವರಿಗೂ ಕಾದು ವಾಪಸ್ ಹೋಗುತ್ತಿದ್ದೇವೆ. ಲಸಿಕೆ ತೆಗೆದುಕೊಳ್ಳಿ ಎಂದು ಪ್ರಚಾರ ನಡೆಸುತ್ತಾರೆ, ಇಲ್ಲಿ ನೋಡಿದರೆ ಲಸಿಕೆ ಬಂದಿಲ್ಲ ಎಂದು ಬೋರ್ಡ್ ಹಾಕುತ್ತಾರೆ. ಯಾವುದೇ ಕಾತಣಕ್ಕೂ ನಾವು ಲಸಿಕೆ ತೆಗೆದುಕೊಳ್ಳದೆ ಮನಗೆ ಹೋಗುವುದಿಲ್ಲ. ಲಸಿಕೆ ಕಡಿಮೆ ಇದೆ ಎಂಬುದರ ಬಗ್ಗೆ ಅಧಿಕಾರಿಗಳು ಹಾಗೂ ಶಾಸಕರು ಏನು ಮಾಡುತ್ತಿದ್ದಾರೆ  ಎಂದು ಪ್ರಶ್ನಿಸಿದರು.  

ಆಸ್ಪತ್ರೆ ಒಳಗಡೆಯ ತಾಲ್ಲೂಕು ವೈದ್ಯಾಧಿಕಾರಿ ಕಚೇರಿಗೆ ತೆರಳಿದರಾದರೂ ವೈಧ್ಯಾಧಿಕಾರಿ ಇಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರಲ್ಲದೆ ಕಚೇರಿ ಬಳಿಯೆ ಧರಣಿ ನಡೆಸಿದರು.

ಈ ಬಗ್ಗೆ ಡಿಹೆಚ್ಒ ಸತೀಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಬೇಲೂರಿನ ಲಸಿಕೆ ಜವಾಬ್ದಾರಿ ಕಾಂತರಾಜ್ ಎಂಬುವರಿಗೆ ವಹಿಸಿದ್ದೇವೆ ಅವರನ್ನು ಸಂಪರ್ಕಿಸಬೇಕೆಂದು ಹಾರಿಕೆ ಉತ್ತರ ನೀಡಿದರು. ಕಾಂತರಾಜ್ ಅವರನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ದೊರೆಯಲಿಲ್ಲ.

Post a Comment

Previous Post Next Post