ಗ್ರಾಮಸ್ಥರೊಂದಿಗೆ ಶಾಸಕ ಲಿಂಗೇಶ್ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ. ( ಹಲ್ಮಿಡಿ-ಕೆಳಹಳ್ಳಿ ಸಮೀಪ ಕೋಳಿಫಾರಂಗೆ ಅನುಮತಿ ಬೇಡ )

 ಬೇಲೂರು: ಪರಿಸರವನ್ನು ಹಾಳು ಮಾಡುತ್ತಿರುವ ಕೋಳಿ ಫಾರಂಗೆ ಅನುಮಿತಿ ನೀಡದಂತೆ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶಾಸಕ ಕೆ.ಎಸ್.ಲಿಂಗೇಶ್ ಅವರಲ್ಲಿ ಮನವಿ ಮಾಡಿದರು.

ಗ್ರಾಮಕ್ಕೆ ಭೇಟಿ ನೀಡಿದ ಶಾಸಕರನ್ನು ಪ್ರಮುಖ ವಿಜಯಕುಮಾರ್ ನೇತೃತ್ವದಲ್ಲಿ ಭೇಟಿ ಮಾಡಿದ ಗ್ರಾಮಸ್ಥರು,ನಾರಾಯಣಪುರ ಗ್ರಾಮ ಪಂಚಾಯಿತಿಯ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದ ಸಮೀಪ ಕೌಮುದಿ ಬ್ರೀಡಿಂಗ್ ಕೋಳಿ ಫಾರಂಗೆ ಅನುಮತಿ ನೀಡಲು ಪ್ರಯತ್ನ ನಡೆಯುತ್ತಿದೆ. ಈಗಾಗಲೆ ಈ ಸ್ಥಳದಲ್ಲಿ ಕೆಳಹಳ್ಳಿ, ಹಲ್ಮಿಡಿ ಗ್ರಾಮಗಳಲ್ಲದೆ ಹಲವು ವಸತಿಗೃಹಗಳಿವೆ. ಕೋಳಿ ಫಾರಂ ಒಂದರಿಂದ ವಾತಾವರಣ ಕಲುಷಿತಗೊಂಡಿದ್ದು ಕೆಟ್ಟವಾಸನೆ ಬೀರುತ್ತಿದೆ. ಕೋಳಿ ಫಾರಂ ತ್ಯಾಜ್ಯವನ್ನು ಸಮೀಪದ ರಾಜಕಾಲುವೆಗೆ ಹರಿದು ಬಿಡುತ್ತಿರುವುದರಿಂದ ರಾಜಕಾಲುವೆ ಮೂಲಕ ತ್ಯಾಜ್ಯದ ನೀರು ಯಗಚಿ ಜಲಾಶಯ ಸೇರುತ್ತಿದೆ.

ರಾಜಕಾಲುವೆಯ ನೀರನ್ನು ಜನರು ಬಳಕೆ ಮಾಡುತ್ತಿರುವುದರಿಂದ ಕಲುಷಿತಗೊಂಡ ನೀರನ್ನು ಬಳಸುವಂತಾಗಿದೆ. ನೊಣ, ಸೊಳ್ಳೆಗಳ ತಾಣವಾಗಿದೆ.ಈ ಬಗ್ಗೆ ತಹಸೀಲ್ದಾರ್, ತಾ.ಪಂ.ಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಅನುಮತಿ ರದ್ದುಪಡಿಸುವಂತೆ ಮತ್ತು ಹೊಸದಾಗಿ ಅನುಮತಿ ನೀಡದಂತೆ ಮನವಿ ಮಾಡಿದ್ದೆವು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಹಾಸನದ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಆಗಮಿಸಿ ಪರಿಶೀಲಿಸಿ ಕೋಳಿ ಫಾರಂಗೆ ಅನುಮತಿ ಕೊಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಆದರೆ ಮೇಲಾಧಿಕಾರಿಗಳ ಸೂಚನೆ ದಿಕ್ಕರಿಸಿ ರಾಜಸ್ವನಿರೀಕ್ಷಕರು ಜನವಸತಿ ಇಲ್ಲವೆಂದು ಏಕಪಕ್ಷೀಯವಾಗಿ ಸುಳ್ಳು ವರದಿ ನೀಡಿದ್ದಾರೆ. ಇದರಲ್ಲಿ ಅವ್ಯವಹಾರದ ಶಂಕೆಯಿದೆ. ಅವರ ಮೇಲೆ ಕ್ರಮಕೈ ಗೊಳ್ಳಬೇಕೆಂದು ವಿಜಯಕುಮಾರ್ ಆರೋಪಿಸಿದರು.

ಕೋಳಿ ಫಾರಂ ತೆರವು ಮಾಡದಿದ್ದರೆ ಹಂತ ಹಂತವಾಗಿ ಗ್ರಾ.ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ನಂತರ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್ ಈಗಾಗಲೇ ಕೊರೊನಾದಿಂದ ಜನ ರೋಸಿಹೋಗಿದ್ದಾರೆ.ಇಂತಹ ಪರಿಸರ ಹಾಳು ಮಾಡುವ ವ್ಯವಸ್ಥೆಗೆ ಅನುಮತಿ ಕೊಡುವುದು ಸರಿಯಲ್ಲ ಎಂದ ಶಾಸಕರು, ಸ್ಥಳದಲ್ಲಿದ್ದ ಅಪರಾ ಜಿಲ್ಲಾಧಿಕಾರಿ ಕವಿತಾ ಅವರಿಗೆ ಗ್ರಾಮಸ್ಥರ ಸಮಸ್ಯೆಯನ್ನು ನಿವೇದಿಸಿ ಅನುಮತಿ ನೀಡದಂತೆ ಮನವಿ ಮಾಡಿದರು. ಈ ಸಂದರ್ಭ ತಹಸೀಲ್ದಾರ್ ಮೋಹನಕುಮಾರ್, ಶಿರಸ್ತೇದಾರ್ ನಾಗರಾಜ್ ಇನ್ನಿತರ ಅಧಿಕಾರಿಗಳು ಇದ್ದರು.

-

ಅನಂತರಾಜೇ ಅರಸು

Post a Comment

Previous Post Next Post